Advertisement

ಮೊದಲ ದಿನವೇ ಮಕ್ಕಳಿಗೆ ಟೆಂಟ್‌ ಶಾಲೆ ಭಾಗ್ಯ

12:25 PM May 17, 2022 | Team Udayavani |

ರಾಮದುರ್ಗ: ಶತಮಾನೋತ್ಸವ ಸನಿಹದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಶಿಥಿಲಗೊಂಡಿದ್ದು, ದುರಸ್ಥಿ ಕಾಣದ ಕಾರಣ ಆಕ್ರೋಶಗೊಂಡ ಪಾಲಕರು ಶಾಲೆಗೆ ಬೀಗ ಜಡಿದು ಶಾಲಾ ಆವರಣದಲ್ಲಿಯೇ ಟೆಂಟ್‌ ಹಾಕಿ ಮಕ್ಕಳಿಗೆ ವಿದ್ಯಾಭ್ಯಾಸ ವ್ಯವಸ್ಥೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಮುದೇನೂರ ಗ್ರಾಮದಲ್ಲಿ ನಡೆದಿದೆ.

Advertisement

1923 ರಲ್ಲಿ ಮುದೇನೂರ ಗ್ರಾಮದಲ್ಲಿ ಆರಂಭಗೊಂಡ ಸರಕಾರಿ ಶಾಲೆ 99 ವರ್ಷಗಳನ್ನು ಪೂರೈಸಿ ಶತಮಾನೋತ್ಸವ ಆಚರಿಸಿಕೊಳ್ಳುವ ಸನಿಹದಲ್ಲಿರುವ ಹೊತ್ತಿನಲ್ಲಿ ಶಾಲೆಯ ಎಲ್ಲ ಕೊಠಡಿಗಳು ಸಂಪೂರ್ಣ ಶಿಥಿಲಗೊಂಡು ಬಳಕೆಗೆ ಅಪಾಯಕಾರಿ ಎಂದು ಸಾಕಷ್ಟು ಬಾರಿ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗದಿರುವುದು ಅಲ್ಲಿನ ಪಾಲಕರ ಆಕ್ರೋಶಕ್ಕೆ ಕಾರಣವಾಯಿತು. ಗ್ರಾಮಸ್ಥರೆಲ್ಲರೂ ಎಸ್‌ಡಿಎಮಸಿ ನೇತೃತ್ವದಲ್ಲಿ ದೇಣಿಗೆ ಸಂಗ್ರಹಿಸಿ, ಟೆಂಟ್‌ ಹಾಕಿ ಅಲ್ಲಿಯೇ ಪಾಠ ಮಾಡಲು ವ್ಯವಸ್ಥೆ ಕಲ್ಪಿಸಿದರು.

351 ವಿದ್ಯಾರ್ಥಿಗಳು ಜ್ಞಾನರ್ಜನೆ ಮಾಡುತ್ತಿರುವ ಶಾಲೆಯಲ್ಲಿ 11 ಕೊಠಡಿಗಳಿದ್ದು, 9 ಕೊಠಡಿಗಳ ಹೆಂಚುಗಳು ಕಿತ್ತುಹೋಗಿವೆ. ಕಲಿಕೆಗೆ ಅಯೋಗ್ಯವಾಗಿರುವ ಕೊಠಡಿಗಳನ್ನು ಸಂಪೂರ್ಣ ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಾಣಕ್ಕೆ ಶಾಲಾ ಸುಧಾರಣಾ ಸಮಿತಿಯಿಂದ ಸಾಕಷ್ಟು ಭಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗದ ಕಾರಣ ಪ್ರತಿಭಟಿಸಬೇಕಾಯಿತು ಎಂದು ಎಸ್‌.ಡಿ.ಎಂ.ಸಿ ಅಧ್ಯಕ್ಷ ಮುತ್ತಣ್ಣ ಕಂಬಾರ ಹೇಳಿದರು.

ಸ್ಥಳಕ್ಕಾಗಮಿಸಿದ ಅಧಿಕಾರಿಗಳು: ಪ್ರತಿಭಟನಾ ಸುದ್ದಿ ತಿಳಿಯುತ್ತಿದ್ದಂತೆ ಶಾಲೆಗೆ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್‌. ಅಲಾಸೆ ಅವರನ್ನು ಪಾಲಕರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ನಂತರ ತಹಶೀಲ್ದಾರ್‌ ಮಲ್ಲಿಕಾರ್ಜುನ ಹೆಗ್ಗನ್ನವರ, ಸಿಪಿಐ ಐ.ಆರ್‌. ಪಟ್ಟಣಶೆಟ್ಟಿ, ಜಿ.ಪಂ ಎಇಇ ಎಂ.ಐ. ಕೋಳಿ ಆಗಮಿಸಿ, ಪಾಲಕರ ಮನವೊಲಿಸಲು ಸಾಕಷ್ಟು ಹರಸಾಹಸ ಪಟ್ಟರು. ಈಗಾಗಲೇ 8 ಕೊಠಡಿಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮೋದನೆಗೊಂಡ ನಂತರ ಕೊಠಡಿ ನಿರ್ಮಿಸಲಾಗುವುದು. ಸದ್ಯ ಮಕ್ಕಳ ಕಲಿಕೆಗೆ ತೊಂದರೆಯಾಗದ ನಿಟ್ಟಿನಲ್ಲಿ ಕ್ರಮವಹಿಸಿ ತಾತ್ಕಾಲಿಕವಾಗಿ ಕೊಠಡಿಗಳ ದುರಸ್ಥಿ ಕಾರ್ಯವನ್ನು ಕೈಗೊಳ್ಳಲು ತಾವು ಜವಾಬ್ದಾರಿ ತೆಗೆದುಕೊಳ್ಳುವದಾಗಿ ತಹಶೀಲ್ದಾರ್‌ ಭರವಸೆ ನೀಡಿದ ನಂತರ ಗ್ರಾಮಸ್ಥರು ತಮ್ಮ ಪ್ರತಿಭಟನೆ ಹಿಂಪಡೆದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next