ಹುಬ್ಬಳ್ಳಿ: ಶ್ರೀ ಅನ್ನಪೂರ್ಣೇಶ್ವರಿ ಆರ್ಟ್ಸ್ ಅವರು ನಿರ್ಮಿಸಿದ 6 ಟು 6 ಚಲನಚಿತ್ರ ಏ. 20ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಕಾರ್ಯಕಾರಿ ನಿರ್ದೇಶಕ ಶಂಖನಾದ ಅರವಿಂದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಒಂದು ದಿನದ ಅವಧಿ ಅಂದರೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ನಡೆಯುವ ವಿವಿಧ ಘಟನೆಗಳನ್ನಾಧರಿಸಿದ ಸಿನಿಮಾ ಇದಾಗಿದೆ. ನನ್ನ ಜೀವನದಲ್ಲಿ ನಡೆದ ಘಟನೆಯನ್ನಾಧರಿಸಿಯೇ ಈ ಚಿತ್ರ ನಿರ್ಮಿಸಲಾಗಿದೆ. ಇದು ನನ್ನ ಮೂರನೇ ಚಿತ. ಈ ಹಿಂದೆ ಮಾಡಿದ ಎರಡು ಚಿತ್ರಗಳು ಉತ್ತಮ ಪ್ರದರ್ಶನ ಕಂಡಿದ್ದು, ಜನರು ನನ್ನ ಕೈ ಹಿಡಿದು ಬೆಂಬಲಿಸಿದ್ದಾರೆ. ಈ ಚಿತ್ರವನ್ನೂ ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಾರೆ ಎಂದರು.
46 ದಿನಗಳಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಚಿಕ್ಕಮಗಳೂರು, ಕಳಸ ಸೇರಿದಂತೆ ಸುತ್ತಮುತ್ತಲಿನ ಭಾಗದಲ್ಲಿ ಚಿತ್ರೀಕರಣ ಮಾಡಲಾಗಿದೆ. ಒಟ್ಟು ನಾಲ್ಕು ಹಾಡುಗಳಿದ್ದು, ಮಾನಸ ಹೊಳ್ಳ ಸಂಗೀತ ನಿರ್ದೇಶನ ಮಾಡಿದ್ದಾರೆ. ಶ್ರೀನಿವಾಸ ಶಿಡ್ಲಘಟ್ಟ ಚಿತ್ರಕಥೆ ನಿರ್ದೇಶನ ಮಾಡಿದ್ದಾರೆ. ಅಭಿಷೇಕ ಎಂ.ಎ.ನಿರ್ಮಾಪಕರಾಗಿದ್ದಾರೆ. ಗಣೇಶ ಹೆಗಡೆ ಛಾಯಾಗ್ರಹಣ, ವಿ. ಮನೋಹರ ಹಾಗೂ ಕೆ.ಕಲ್ಯಾಣ ಸಾಹಿತ್ಯ, ಸಂಕಲನ ವಿಶ್ವ, ನೃತ್ಯ ಸಂಯೋಜನೆ ರಾಜು, ಸಾಹಸ ಸೊಣಪ್ಪ, ಸಂಭಾಷಣೆ ಹಾಗೂ ಸಹ ನಿರ್ದೇಶನ ಕೆ.ಎಲ್.ವೇಣುಗೋಪಾಲ ಕುದುರುಗುಂಡಿ ಮಾಡಿದ್ದಾರೆ ಎಂದು ತಿಳಿಸಿದರು.
ಚಿತ್ರದಲ್ಲಿ ಸುಮಾರು 50ಕ್ಕೂ ಹೆಚ್ಚು ಹೊಸಬರಿಗೆ ಅವಕಾಶ ನೀಡಲಾಗಿದೆ. ನಾಯಕನಾಗಿ ಮಡಿಕೇರಿಯ ತಾರಕ ಪೊನ್ನಪ್ಪ ಹಾಗೂ ನಾಯಕಿಯಾಗಿ ಸ್ವರೂಪಿಣಿ ಆರೋಹಿ ಕಾಣಿಸಿಕೊಳ್ಳಲಿದ್ದಾರೆ. ಸುರೇಶ ಹೆಬ್ಳಿಕರ, ಸದಾಶಿವ ಬ್ರಹ್ಮಾವರ ಸೇರಿದಂತೆ ಇನ್ನು ಹಲವು ಹಿರಿಯ ಕಲಾವಿದರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದರು. ಸಂಗೀತ ನಿರ್ದೇಶಕಿ ಮಾನಸ ಹೊಳ್ಳ ಮಾತನಾಡಿ, ಇಷ್ಟು ದಿನಗಳ ಕಾಲ ಧಾರವಾಹಿ ಹಾಗೂ ಸಣ್ಣ-ಪುಟ್ಟ ಚಿತ್ರಗಳಲ್ಲಿ ಕೋರಿಯೋಗ್ರಫಿ, ಹಿನ್ನೆಲೆ ಸಂಗೀತ ನೀಡುತ್ತಿದ್ದೆ. ಇದೇ ಮೊದಲ ಬಾರಿಗೆ ತಂದೆ ನಿರ್ಮಿಸುತ್ತಿರುವ 6 ಟು 6 ಚಿತ್ರದಲ್ಲಿ ಸಂಗೀತ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಸಂಗೀತದ ಸಂಯೋಜನೆಗೆ ಮೂರು ತಿಂಗಳಿಗೂ ಹೆಚ್ಚು ಕಾಲ ಸಮಯ ತೆಗೆದುಕೊಳ್ಳಲಾಗಿದೆ ಎಂದರು. ವಿನಯಕುಮಾರ ನಾಯ್ಕ ಇದ್ದರು.