Advertisement

ಸ್ಪೀಕರ್ ಕೂಡ ಸಂಕಷ್ಟಕ್ಕೆ ಸಿಲುಕುತ್ತಾರೆ:ರಾಹುಲ್ ಪರ ತೀರ್ಪಿನ ಕುರಿತು ಡಿ.ಕೆ.ಶಿವಕುಮಾರ್

06:16 PM Aug 04, 2023 | Team Udayavani |

ಹೊಸದಿಲ್ಲಿ: ‘ಮೋದಿ ಉಪನಾಮ’ ಮಾನನಷ್ಟ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸುಪ್ರೀಂ ಕೋರ್ಟ್ ನಲ್ಲಿ ಬಿಗ್ ರಿಲೀಫ್ ಸಿಕ್ಕ ಬೆನ್ನಲ್ಲೇ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದು ”ನ್ಯಾಯ ಮೇಲುಗೈ ಸಾಧಿಸಿದೆ. ದೇಶದ ಅತ್ಯುನ್ನತ ನ್ಯಾಯಾಲಯವು, ಸಣ್ಣ ಆಂತರಿಕ ಸಮಸ್ಯೆಗಳನ್ನು ಸ್ಫೋಟಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ನೀಡಿದೆ” ಎಂದು ಹೇಳಿಕೆ ನೀಡಿದ್ದಾರೆ.

Advertisement

ಪ್ರಜಾತಂತ್ರದಲ್ಲಿ ಸೇಡಿನ ರಾಜಕಾರಣಕ್ಕೆ ಸ್ಥಾನವಿಲ್ಲ.ಅವರನ್ನು 24 ಗಂಟೆಯೊಳಗೆ ಹೇಗೆ ಸಂಸತ್ತಿನಿಂದ ಹೊರ ಹಾಕಿದರು, ಅದೇ ರೀತಿ ಅವರ ಸದಸ್ಯತ್ವವನ್ನು ಪುನಃಸ್ಥಾಪಿಸಬೇಕು. ಇದು ಸಭಾಧ್ಯಕ್ಷರ ಕರ್ತವ್ಯ.ಇಲ್ಲದಿದ್ದರೆ ಸ್ಪೀಕರ್ ಕೂಡ ಸಂಕಷ್ಟಕ್ಕೆ ಸಿಲುಕುತ್ತಾರೆ” ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಸತ್ಯಮೇವ ಜಯತೇ!

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ”ಸುಪ್ರೀಂ ಕೋರ್ಟ್‌ನ ತೀರ್ಪನ್ನು ನಾವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ.ಭಾರತದ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಸಾಮಾನ್ಯ ಜನರು ಗೆದ್ದಿದ್ದಾರೆ. ವಯನಾಡಿನ ನಾಗರಿಕರು ಗೆದ್ದಿದ್ದಾರೆ.ರಾಹುಲ್ ಗಾಂಧಿ ಅವರ ವಿರುದ್ಧ ಬಿಜೆಪಿ ನಡೆಸಿರುವ ಷಡ್ಯಂತ್ರ ಬಯಲಾಗಿದೆ.ಜನಸಾಮಾನ್ಯರ ಗಟ್ಟಿ ಧ್ವನಿ ಮತ್ತೆ ಪ್ರಜಾಪ್ರಭುತ್ವದ ಮಂದಿರದಲ್ಲಿ ಪ್ರತಿಧ್ವನಿಸಲಿದೆ.ರಾಹುಲ್ ಗಾಂಧಿ ಸತ್ಯ ಮತ್ತು ಧೈರ್ಯದ ಪ್ರತೀಕವಾಗಿದ್ದಾರೆ.ಮೋದಿ ಸರಕಾರ ಮತ್ತು ಬಿಜೆಪಿಯ ಜನರು ಜನಾದೇಶ ಪಡೆದ ಕೆಲಸವನ್ನು ಮಾಡಬೇಕು. ಒಂದು ದಶಕದಿಂದ ಅವರು ತಮ್ಮ ಭರವಸೆಗಳನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.ಸಾರ್ವಜನಿಕರ ಪ್ರಶ್ನೆಗಳ ಹೋರಾಟ ಸಂಸತ್ತು ಮತ್ತು ರಸ್ತೆ ತನಕ ಮುಂದುವರಿಯಲಿದೆ” ಎಂದು ಟ್ವೀಟ್ ಮಾಡಿದ್ದಾರೆ.

ಸಿಂಹ ಘರ್ಜನೆ
”ಸಂಸತ್ತಿನಲ್ಲಿ ಮತ್ತೆ ಸಿಂಹ ಘರ್ಜಿಸುವುದನ್ನು ನೋಡಲು ನಾವು ತುಂಬಾ ಉತ್ಸುಕರಾಗಿದ್ದೇವೆ ಮತ್ತು ಸಂತೋಷಗೊಂಡಿದ್ದೇವೆ” ಎಂದು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಥೆ ಅವರು ಶುಕ್ರವಾರ ಹೇಳಿಕೆ ನೀಡಿದ್ದಾರೆ. ”ಪ್ರಕರಣಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದು, ಯಾವುದೇ ವಿಳಂಬ ಮಾಡದೆ ಸ್ಪೀಕರ್ ಅವರು ಸಂಸದ ಸ್ಥಾನ ಅನರ್ಹ ಗೊಳಿಸಿದ್ದ ನಿರ್ಧಾರವನ್ನು ಹಿಂಪಡೆಯಬೇಕು” ಎಂದು ಹೇಳಿದ್ದಾರೆ.

Advertisement

ಪ್ರತೀಕಾರ ಈ ದೇಶದಲ್ಲಿ ಗೆಲ್ಲುವುದಿಲ್ಲ

ಶಿವಸೇನಾ (ಯುಬಿಟಿ) ಶಾಸಕ ಆದಿತ್ಯ ಠಾಕ್ರೆ ಪ್ರತಿಕ್ರಿಯಿಸಿ “ಇದು ಸೂಕ್ತ ಆದೇಶ ಎಂದು ನಾನು ಭಾವಿಸುತ್ತೇನೆ. ನೀವು ಇಂದು ತೀರ್ಪು, ಆದೇಶವನ್ನು ನೋಡಿದರೆ, ಲೋಕಸಭೆಯಲ್ಲಿ ಸತ್ಯವನ್ನು ಮಾತನಾಡುವ ಜನರು ಇರುವುದು ಬಹಳ ಮುಖ್ಯ. ರಾಜಕೀಯ ದ್ವೇಷ, ಪ್ರತೀಕಾರ ಈ ದೇಶದಲ್ಲಿ ಗೆಲ್ಲುವುದಿಲ್ಲ. ನಾವು ಈ ಆದೇಶವನ್ನು ಬೆಂಬಲಿಸುತ್ತೇವೆ…” ಎಂದಿದ್ದಾರೆ.

ಅವಕಾಶ ಮಾಡಿಕೊಡಿ
ರಾಹುಲ್ ಪರ ವಾದ ಮಂಡಿಸಿದ್ದ ಹಿರಿಯ ವಕೀಲ, ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ, “ನ್ಯಾಯಾಲಯಕ್ಕಾಗಲಿ ಅಥವಾ ನಮಗಾಗಲಿ ಬೇರೆ ಯಾವುದೇ ಮಾರ್ಗವಿಲ್ಲ. ಏಕೈಕ ಮಾರ್ಗವೆಂದರೆ, ರಾಹುಲ್ ಅವರ ಸದಸ್ಯತ್ವವನ್ನು ಮರುಸ್ಥಾಪಿಸುವುದಾಗಿದೆ. ನೀವು ಅವರನ್ನು ಅನೌಪಚಾರಿಕವಾಗಿ ಹೊರಹಾಕಿದ ಸಮಯದಲ್ಲೇ ಲೋಕಸಭೆಗೆ ಸರಿಯಾಗಿ ಪ್ರವೇಶಿಸಲು ಅವಕಾಶ ಮಾಡಿಕೊಡುವುದಾಗಿದೆ ಎಂದರು.

ಆಜಾದ್ ಪ್ರತಿಕ್ರಿಯೆ
ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಕ್ಷದ ಅಧ್ಯಕ್ಷ ಗುಲಾಂ ನಬಿ ಆಜಾದ್ ಪ್ರತಿಕ್ರಿಯಿಸಿ “ಇದು ಒಳ್ಳೆಯ ಬೆಳವಣಿಗೆ. ಅವರ ಅನರ್ಹತೆಯಿಂದ ಯಾವುದೇ ಪರಿಣಾಮ ಬೀರಿಲ್ಲ. ಅವರು ಈ ಹಿಂದೆ ಸಂಸದರಾಗಿ ಮಾಡುತ್ತಿದ್ದ ಕೆಲಸವನ್ನು ಅವರು ಮಾಡುತ್ತಿದ್ದಾರೆ.” ಎಂದರು.

ಗೈರುಹಾಜರಿ ಅನುಭವಿಸಿದ್ದೇವೆ
ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ”ನಮಗೆ ತುಂಬಾ ಸಂತೋಷವಾಯಿತು. ರಾಹುಲ್ ಗಾಂಧಿ ಅವರು ಸಂಸತ್ತಿಗೆ ಗೈರುಹಾಜರಾಗಿರುವುದನ್ನು ಅನುಭವಿಸಿದ್ದೇವೆ. ಪಾಯಿಂಟ್ ಆಫ್ ಇನ್ಫಾರ್ಮೇಶನ್ ಮೂಲಕ ನಾನು ಸುಪ್ರೀಂ ಕೋರ್ಟ್ ನಿರ್ಧಾರದ ಬಗ್ಗೆ ಸಂಸತ್ತಿನಲ್ಲಿ ಅಧ್ಯಕ್ಷರಿಗೆ ಹೇಳಿದೆ ಮತ್ತು ರಾಹುಲ್ ಗಾಂಧಿ ಅವರ ಸದಸ್ಯತ್ವವನ್ನು ಶೀಘ್ರವಾಗಿ ಪುನಃಸ್ಥಾಪಿಸಬೇಕು ಎಂದು ಹೇಳಿದೆ.ಸತ್ಯ ಇಂದು ಗೆದ್ದಿದೆ” ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next