ಇಸ್ಲಾಮಾಬಾದ್: ವಿಪರೀತ ಬಿಸಿಲಿನ ಹಿನ್ನೆಲೆಯಲ್ಲಿ ಹಿಮನದಿಯ ಸರೋವರದ ನೀರು ಭಾರೀ ಪ್ರಮಾಣದಲ್ಲಿ ಪ್ರವಾಹದಂತೆ ಹರಿದು ಬಂದ ಪರಿಣಾಮ ಪಾಕಿಸ್ತಾನದ ಹಸ್ಸನಾಬಾದ್ ನಲ್ಲಿರುವ ಸೇತುವೆ ಕೊಚ್ಚಿಕೊಂಡು ಹೋಗಿರುವ ಘಟನೆ ಇತ್ತೀಚೆಗೆ ನಡೆದಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಕೊಳ್ಳೇಗಾಲ: ಮಗಳೊಂದಿಗೆ ಜಗಳವಾಡಿದ ಅಳಿಯನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದ ಮಾವ!
ದಿ ಇಂಡಿಪೆಂಡೆಂಟ್ ವರದಿ ಪ್ರಕಾರ, ಏಕಾಏಕಿ ಪ್ರವಾಹದ ನೀರು ಹರಿದು ಬಂದ ಪರಿಣಾಮ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದಲ್ಲಿದ್ದ ಸೇತುವೆ ನೋಡ, ನೋಡುತ್ತಿದ್ದಂತೆಯೇ ಕೊಚ್ಚಿಕೊಂಡು ಹೋಗಿದ್ದು, ಇದರಿಂದಾಗಿ ಸ್ಥಳೀಯರು ಮತ್ತು ಪ್ರವಾಸಿಗರು ಸೇರಿದಂತೆ ಸಾವಿರಾರು ಮಂದಿ ಸಂಚಾರ ವ್ಯವಸ್ಥೆ ಸ್ಥಗಿತಗೊಂಡು ಪರದಾಡುವಂತಾಗಿತ್ತು. ಘಟನೆಯಲ್ಲಿ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ವರದಿ ವಿವರಿಸಿದೆ.
ಪಾಕಿಸ್ತಾನದ ಫೆಡರಲ್ ಸಚಿವೆ ಶೆರ್ರಿ ರೆಹಮಾನ್ ಟ್ವೀಟರ್ ನಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ, ನೀರಿನ ಮಟ್ಟ ಏರುತ್ತಿದ್ದಂತೆಯೇ ಸೇತುವೆ ಕುಸಿದು ಬೀಳುತ್ತಿರುವ ದೃಶ್ಯ ಸೆರೆಯಾಗಿದೆ.
ಭಾರೀ ಪ್ರಮಾಣದ ನೀರು ಹರಿದು ಬಂದು ಐತಿಹಾಸಿಕ ಸೇತುವೆ ಕೊಚ್ಚಿಕೊಂಡು ಹೋಗಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಘಟನೆಯ ನಂತರ ಸ್ಥಳೀಯ ಪೊಲೀಸರು ಸಂಚಾರವನ್ನು ಪರ್ಯಾಯ ಮಾರ್ಗಕ್ಕೆ ಬದಲಾಯಿಸಿ, ಈ ಪ್ರದೇಶದಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿರುವುದಾಗಿ ವರದಿ ತಿಳಿಸಿದೆ.