ತಿರುವನಂತಪುರಂ: ಕೇರಳ ರಾಜಧಾನಿ ತಿರುವನಂತಪುರಂನಲ್ಲಿ ಗುರುವಾರ (ಜೂನ್ 30) ತಡರಾತ್ರಿ ಆಡಳಿತಾರೂಢ ಸಿಪಿಐ(ಎಂ)ನ ಪ್ರಧಾನ ಕಚೇರಿ ಮೇಲೆ ಬೈಕ್ ನಲ್ಲಿ ಬಂದ ವ್ಯಕ್ತಿಯೊಬ್ಬ ಬಾಂಬ್ ಎಸೆದ ಘಟನೆಯ ನಂತರ ಉದ್ವಿಗ್ನ ಪರಿಸ್ಥಿತಿ ತಲೆದೋರಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಮತ್ತಷ್ಟು ಇಳಿಕೆ, ಪರಿಷ್ಕೃತ ದರ ಇಂದಿನಿಂದ ಜಾರಿ
ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆಡಳಿತಾರೂಢ ಸಿಪಿಐ(ಎಂ) ಮತ್ತು ವಿರೋಧ ಪಕ್ಷ ಕಾಂಗ್ರೆಸ್ ನಡುವೆ ವಾಕ್ಸಮರದ ಕಿಡಿ ಹೊತ್ತಿಕೊಂಡಿದೆ. ಸಿಪಿಐಎಂನ ವಿದ್ಯಾರ್ಥಿ ಸಂಘಟನೆ ಇತ್ತೀಚೆಗೆ ಕಾಂಗ್ರೆಸ್ ಮುಖಂಡ, ಸಂಸದ ರಾಹುಲ್ ಗಾಂಧಿಯ ವಯನಾಡ್ ಕಚೇರಿಯನ್ನು ಧ್ವಂಸಗೊಳಿಸಿದ ನಂತರ ಎರಡು ಪಕ್ಷಗಳ ಮುಖಂಡರು ವಾಕ್ಸಮರದಲ್ಲಿ ತೊಡಗಿರುವುದಾಗಿ ವರದಿ ವಿವರಿಸಿದೆ.
ನಿನ್ನೆ ರಾತ್ರಿ 11.30ರ ಹೊತ್ತಿಗೆ ತಿರುವನಂತಪುರಂನಲ್ಲಿರುವ ಸಿಪಿಐಎಂ ಕಚೇರಿ ಮೇಲೆ ಬಾಂಬ್ ಎಸೆದ ಘಟನೆ ನಡೆದಿತ್ತು. ಘಟನೆಯ ಸಿಸಿಟಿವಿ ಫೂಟೇಜ್ ಅನ್ನು ಎಎನ್ ಐ ನ್ಯೂಸ್ ಏಜೆನ್ಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ವ್ಯಕ್ತಿಯೊಬ್ಬ ಸ್ಕೂಟರ್ ನಲ್ಲಿ ಆಗಮಿಸಿದ್ದು, ಎ.ಕೆ.ಗೋಪಾಲನ್ ಸೆಂಟರ್ ಬಳಿ ಸಮೀಪ ಇದ್ದ ಕೇಂದ್ರ ಕಚೇರಿ ಮೇಲೆ ಬಾಂಬ್ ಎಸೆದಿರುವುದು ಸೆರೆಯಾಗಿತ್ತು ಎಂದು ವರದಿ ತಿಳಿಸಿದೆ.
ಬಾಂಬ್ ದಾಳಿ ನಡೆದ ನಂತರ ಸಿಪಿಐಎಂ ಮುಖಂಡರು ಸ್ಥಳಕ್ಕೆ ದೌಡಾಯಿಸಿದ್ದರು, ಎಕೆಜಿ ಕೇಂದ್ರದಲ್ಲಿ ವಾಸ್ತವ್ಯ ಹೂಡಿದ್ದವರ ಹೇಳಿಕೆ ಪ್ರಕಾರ, ರಾತ್ರಿ ಸಿಪಿಐಎಂ ಪ್ರಧಾನ ಕಚೇರಿ ಬಳಿ ಪ್ರಬಲ ಸದ್ದು ಕೇಳಿ ಬಂದಿತ್ತು. ನಂತರ ಸ್ಥಳಕ್ಕೆ ಹೋಗಿ ನೋಡಿದಾಗ ಬಾಂಬ್ ದಾಳಿ ನಡೆದಿರುವುದು ಗಮನಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ.