ನವದೆಹಲಿ: ಧಾರಾಕಾರ ಮಳೆಯಿಂದಾಗಿ ಹಿಮಾಚಲ ಪ್ರದೇಶದಲ್ಲಿ ಬೃಹತ್ ಗಾತ್ರದ ಮರಗಳು, ಮನೆ, ಸೇತುವೆಗಳು ಕೊಚ್ಚಿ ಹೋಗಿದ್ದು, ಸಾವಿರಾರು ಮಂದಿ ಪರದಾಡುವಂತಾಗಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ದಕ್ಷಿಣ ಭಾರತದಲ್ಲಿ ರಾತ್ರಿ ಕಾರ್ಯಾಚರಣೆ ಮೂಲಕ ಜನರನ್ನು ರಕ್ಷಿಸಿದ್ದು ಸಾರ್ವಜನಿಕರ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ:ಸಂತೆಕಟ್ಟೆ: ಸಾರ್ವಜನಿಕರ ಕಣ್ಣೆದುರೇ ಕುಸಿದು ಬಿದ್ದ ಓವರ್ ಪಾಸ್ ತಡೆಗೋಡೆ… ಹೆಚ್ಚಿದ ಆತಂಕ
ಹಲವಾರು ಮನೆ, ಕಾರು, ಸೇತುವೆಗಳು ಪ್ರವಾಹಕ್ಕೆ ಕೊಚ್ಚಿಹೋಗಿದ್ದು, ಈವರೆಗೆ ಸುಮಾರು 20ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವುದು ವರದಿಯಾಗಿದೆ. ಮುಂದಿನ 24ಗಂಟೆಗಳ ಕಾಲ ಜನರು ಮನೆಯಿಂದ ಹೊರಬರದಂತೆ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಮನವಿ ಮಾಡಿಕೊಂಡಿದ್ದಾರೆ.
ಪ್ರವಾಹದ ನಡುವೆ ಸಿಲುಕಿರುವ ಜನರನ್ನು ಎನ್ ಡಿಆರ್ ಎಫ್ ತಂಡ ಝಿಪ್ ಲೈನಿಂಗ್ ಮೂಲಕ ನದಿಯನ್ನು ದಾಟಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗುಡ್ಡಗಾಡು ರಾಜ್ಯದ ಮಂಡಿ ಜಿಲ್ಲೆಯ ನಾಗ್ವೆಯಿನ್ ಗ್ರಾಮದ ಬಳಿಯ ಬಿಯಾಸ್ ನದಿ ತಟದಿಂದ ತಡರಾತ್ರಿ ಜನರನ್ನು ರಕ್ಷಿಸಿರುವುದು ವಿಡಿಯೋದಲ್ಲಿದೆ.
ನದಿಯ ಒಂದು ಭಾಗದಲ್ಲಿ ಕೇಬಲ್ ಅನ್ನು ಎನ್ ಡಿಆರ್ ಎಫ್ ಸಿಬಂದಿಗಳು ಹಿಡಿದುಕೊಂಡಿದ್ದು, ಮತ್ತೊಂದು ಬದಿಯಿಂದ ಝಿಪ್ ಲೈನ್ ಮೂಲಕ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಮುಂದಿನ ಕೆಲವು ದಿನಗಳ ಕಾಲ ಹಿಮಾಚಲ ಪ್ರದೇಶ, ಉತ್ತರಾಖಂಡ್, ಪಂಜಾಬ್, ಹರ್ಯಾಣ, ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನ್ ಹಾಗೂ ದೆಹಲಿಯಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.