ಹುಬ್ಬಳ್ಳಿ: ಇಲ್ಲಿನ ಹಳೇಹುಬ್ಬಳ್ಳಿ ಬೆಳಮಕರ ಓಣಿಯಲ್ಲಿರುವ ಶ್ರೀ ಗುರು ನೀಲಕಂಠೇಶ್ವರ ಜಯಂತ್ಯುತ್ಸವ ಸಮಿತಿಯಿಂದ ಏಪ್ರಿಲ್ 2 ರಂದು ಶ್ರೀ ನೀಲಕಂಠೇಶ್ವರ ಜಯಂತ್ಯುತ್ಸವ ಕಾರ್ಯಕ್ರಮ ಹಾಗೂ ಸಾಮೂಹಿಕ ವಿವಾಹ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಸಿದ್ದಪ್ಪ ಡಂಬಳ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೇಕಾರ ಸಮಾಜದ ಆರಾಧ್ಯದೈವ ಶ್ರೀ ಗುರು ನೀಲಕಂಠೇಶ್ವರರ ಜಯಂತ್ಯುತ್ಸವವನ್ನು ಅತೀ ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗುತ್ತಿದೆ. ಅಂದು ಬೆಳಿಗ್ಗೆ 8ಗಂಟೆಗೆ ಶ್ರೀ ನೀಲಕಂಠೇಶ್ವರ ಭಾವಚಿತ್ರ ಮೆರವಣಿಗೆ, ಶ್ರೀ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ ರಥಯಾತ್ರೆ ನಡೆಯಲಿದೆ.
9 ಗಂಟೆಗೆ ಸಾಮೂಹಿಕ ವಿವಾಹ ಸಮಾರಂಭ ನಡೆಯಲಿದೆ. ನಂತರ 11 ಗಂಟೆಗೆ ಧರ್ಮಸಭೆ, ಸಾಧಕರಿಗೆ, ಗಣ್ಯರಿಗೆ ಸನ್ಮಾನ ನಡೆಯಲಿದೆ. ಸಚಿವೆ ಉಮಾಶ್ರೀ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಕುರುಹಿನಶೆಟ್ಟಿ ಸಮಾಜದ ಪೀಠಾಧ್ಯಕ್ಷ ಶ್ರೀ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ, ರಾಯನಾಳ ರೇವಣಸಿದ್ದೇಶ್ವರಮಠದ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಅತಿಥಿಗಳಾಗಿ ಶಾಸಕ ಪ್ರಸಾದ ಅಬ್ಬಯ್ಯ,ರವೀಂದ್ರ ಕಲುºರ್ಗಿ, ಬಿ.ಈಶ್ವರಪ್ಪ ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದರು.
ಮಹಾದೇವಪ್ಪ ಪಡೇಸೂರ, ಪ್ರಭಣ್ಣ ಶಿಗ್ಲಿ, ಬಸವರಾಜ, ತೋಟಪ್ಪ ಡಂಬಳ, ಶಿವಣ್ಣ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.