Advertisement

Politics: ಕಣದಲ್ಲಿ `ಅಪಶಕುನ’ ಕದನ- ಪ್ರಧಾನಿ ಮೋದಿ ಬಗ್ಗೆ ರಾಹುಲ್‌ ಅವಹೇಳನಕಾರಿ ಹೇಳಿಕೆ

12:53 AM Nov 22, 2023 | Team Udayavani |

ಹೊಸದಿಲ್ಲಿ: ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಭಾರತದ ಸೋಲಿನ ಬಗ್ಗೆ ಪ್ರಸ್ತಾವಿಸುವ ವೇಳೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು ಪ್ರಧಾನಿ ಮೋದಿಯವರನ್ನು “ಅಪಶಕುನ’ ಎಂದು ಕರೆಯುವ ಮೂಲಕ ವಿವಾದಕ್ಕೆ ನಾಂದಿ ಹಾಡಿದ್ದಾರೆ. ರಾಹುಲ್‌ ಅವರ ಈ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲವಾಗಿದೆ.

Advertisement

ರಾಜಸ್ಥಾನದಲ್ಲಿ ಮಂಗಳವಾರ ವಲ್ಲಭನಗರ ಮತ್ತು ಬೇಟೂ ಎಂಬಲ್ಲಿ ರ್ಯಾಲಿ ನಡೆಸಿದ ರಾಹುಲ್‌, ವಿಶ್ವಕಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲಿನ ಕುರಿತು ಮಾತನಾ­ಡುತ್ತಾ “ಪನೌತಿ'(ದುರದೃಷ್ಟವಂಶ, ಅಪಶಕುನ) ಎಂಬ ಪದಬಳಕೆ ಮಾಡಿದ್ದಾರೆ. “ಪಿಎಂ ಎಂದರೆ ಪನೌತಿ ಮೋದಿ’ ಎಂದಿದ್ದಾರೆ. ಈ ಮೂಲಕ, ಅಹ್ಮದಾಬಾದ್‌ನ ಸ್ಟೇಡಿಯಂನಲ್ಲಿ ಫೈನಲ್‌ ಪಂದ್ಯದ ವೇಳೆ ಪ್ರಧಾನಿ ಮೋದಿ ಪಂದ್ಯ ವೀಕ್ಷಿ­ಸಲು ಆಗಮಿಸಿದ್ದೇ ಭಾರತದ ಸೋಲಿಗೆ ಕಾರಣ. ಅಂದರೆ ಮೋದಿಯವರು ಅಪಶಕುನ ಇದ್ದಂತೆ ಎಂಬರ್ಥದಲ್ಲಿ ರಾಹುಲ್‌ ಮಾತನಾಡಿದ್ದಾರೆ.

ಕ್ಷಮೆಗೆ ಆಗ್ರಹ: ರಾಹುಲ್‌ ಹೇಳಿಕೆಗೆ ಕಿಡಿಯಾಗಿ­ರುವ ಬಿಜೆಪಿ, ಇದೊಂದು ನಾಚಿಕೆಗೇಡಿನ, ಅವಹೇಳನಕಾರಿ ಮತ್ತು ಖಂಡನೀಯ ಹೇಳಿಕೆ ಎಂದಿದ್ದು, ಈ ಕೂಡಲೇ ರಾಹುಲ್‌ ಅವರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದೆ. ಇಂಥ ಹೇಳಿಕೆ ನೀಡುವ ಮೂಲಕ ರಾಹುಲ್‌ ತಮ್ಮ ನಿಜಬಣ್ಣವನ್ನು ತೋರಿಸಿದ್ದಾರೆ. ಗುಜರಾತ್‌ನಲ್ಲಿ ಮೋದಿಯವರು ಮುಖ್ಯಮಂತ್ರಿಯಾಗಿದ್ದಾಗ ಅವರನ್ನು ಸೋನಿಯಾ ಗಾಂಧಿಯವರು “ಸಾವಿನ ವ್ಯಾಪಾರಿ’ ಎಂದು ಕರೆದಿದ್ದರು. ಅನಂತರ ಗುಜರಾತ್‌ನಲ್ಲಿ ಕಾಂಗ್ರೆಸ್‌ ಹೇಗೆ ಮುಳುಗಿತು ಎಂಬುದನ್ನು ರಾಹುಲ್‌ ನೆನಪಿಟ್ಟುಕೊಳ್ಳಬೇಕಿತ್ತು ಎಂದು ಬಿಜೆಪಿ ಹಿರಿಯ ನಾಯಕ ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ. ಜತೆಗೆ ಪಂಚರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಸೋಲಿನ ಹತಾಶೆ ಕಾಡುತ್ತಿರುವುದು ಈ ಹೇಳಿಕೆಯಿಂದಲೇ ಸ್ಪಷ್ಟವಾಗಿದೆ ಎಂದೂ ಹೇಳಿದ್ದಾರೆ.

ಇದೇ ವೇಳೆ, ಮಂಗಳವಾರ ಜೈಪುರದಲ್ಲಿ ಪ್ರಚಾರ ನಡೆಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜಸ್ಥಾನದ ಕಾಂಗ್ರೆಸ್‌ ಸರಕಾರವು ಧಾರ್ಮಿಕ ಧ್ರುವೀಕರಣ ಮತ್ತು ಭ್ರಷ್ಟಾ­ಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿದ್ದಾರೆ.

ತೆಲಂಗಾಣದ ಮಲ್ಕಾಜ್‌ಗಿರಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌, 2014ರಲ್ಲಿ ತೆಲಂಗಾಣ ರಾಜ್ಯ ರಚನೆಯಾದಾಗ ಇದು ಸಂಪದ್ಭರಿತ ರಾಜ್ಯವಾಗಿತ್ತು. ಆದರೆ ಈಗ ಆದಾಯ ಕೊರತೆಯಿರುವ ರಾಜ್ಯವಾಗಿ ಬದಲಾಗಿದೆ. ಈ ಬದಲಾವಣೆಯ ಕ್ರೆಡಿಟ್‌ ಸಿಎಂ ಕೆ. ಚಂದ್ರಶೇಖರ್‌ ರಾವ್‌ಗೆ ಸಲ್ಲಬೇಕು ಎಂದು ವಾಗ್ಧಾಳಿ ನಡೆಸಿದ್ದಾರೆ.

Advertisement

ಮೋದಿ ಟೀಕೆಗೆ ಪೈಲಟ್‌ ತಿರುಗೇಟು: “ರಾಜ­ಸ್ಥಾನದಲ್ಲಿ ಕಾಂಗ್ರೆಸ್‌ ನಾಯಕರು ಪರಸ್ಪರರನ್ನು ರನೌಟ್‌ ಮಾಡಲು ಪ್ರಯತ್ನಿಸುತ್ತಲೇ 5 ವರ್ಷ ಕಳೆದರು’ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌ ಮಂಗಳ­ವಾರ ತಿರುಗೇಟು ನೀಡಿದ್ದಾರೆ. “ಬಿಜೆಪಿಯೇ ಒಂದು ಹಿಟ್‌ ವಿಕೆಟ್‌. ಅವರು ನಮ್ಮ ಬಗ್ಗೆ ಮಾತಾಡುವುದು ಹಾಸ್ಯಾಸ್ಪದ’ ಎಂದಿದ್ದಾರೆ.

ಜೈಪುರದಲ್ಲಿ ಮೋದಿ ರೋಡ್‌ಶೋ

ಇದೇ 25ರಂದು ಚುನಾವಣೆ ಎದುರಿಸಲಿರುವ ರಾಜಸ್ಥಾನದ ಜೈಪುರದಲ್ಲಿ ಮಂಗಳವಾರ ಪ್ರಧಾನಿ ಮೋದಿ ರೋಡ್‌ ಶೋ ನಡೆಸಿದ್ದಾರೆ. ರಸ್ತೆಯ ಇಕ್ಕೆಲಗಳಲ್ಲಿ ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಜನರು, ಮೋದಿಯವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಇದಕ್ಕೂ ಮುನ್ನ, ಬರಾನ್‌, ಕೋಟಾ ಮತ್ತು ಕರೌಲಿ ಜಿಲ್ಲೆಯಲ್ಲಿ ಪ್ರಚಾರ ರ್ಯಾಲಿ ನಡೆಸಿದ ಮೋದಿ, ಕಾನೂನು ಸುವ್ಯವಸ್ಥೆ ಸ್ಥಿತಿ ಮತ್ತು ಭ್ರಷ್ಟಾಚಾರ ವಿಚಾರ ಪ್ರಸ್ತಾವಿಸಿ ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ ನಡೆಸಿದ್ದರು.

ಬಿಆರ್‌ಎಸ್‌ ವಿರುದ್ಧ ಪ್ರಿಯಾಂಕ್‌ ಖರ್ಗೆ ಕಿಡಿ
ತೆಲಂಗಾಣದ ಹೈದರಾಬಾದ್‌ನಲ್ಲಿ ಪ್ರಚಾರ ನಡೆಸಿರುವ ಕಾಂಗ್ರೆಸ್‌ ನಾಯಕ, ಕರ್ನಾಟಕದ ಐಟಿ ಸಚಿವ ಪ್ರಿಯಾಂಕ್‌ ಖರ್ಗೆ, ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೇರುವುದು ಖಚಿತ ಮತ್ತು ಆಡಳಿತಾರೂಢ ಬಿಆರ್‌ಎಸ್‌ ಲೂಟಿ ಮಾಡಿದ ಹಣವನ್ನು ಗ್ಯಾರಂಟಿಗಳ ರೂಪದಲ್ಲಿ ಜನರಿಗೆ ವಾಪಸ್‌ ನೀಡುವುದೂ ಖಚಿತ ಎಂದು ಹೇಳಿದ್ದಾರೆ. ಬಿಆರ್‌ಎಸ್‌ ಅಂದರೆ “ಭ್ರಷ್ಟ ರಾಷ್ಟ್ರ ಸಮಿತಿ’. ಟಿಆರ್‌ಎಸ್‌ ಆಗಿದ್ದಾಗ ಈ ಪಕ್ಷದ ಭ್ರಷ್ಟಾಚಾರವು ತೆಲಂಗಾಣಕ್ಕೆ ಸೀಮಿತವಾಗಿತ್ತು. ಬಿಆರ್‌ಎಸ್‌ ಆಗಿ ಬದಲಾದ ಅನಂತರ ಭ್ರಷ್ಟಾಚಾರ ಕೂಡ ರಾಷ್ಟ್ರಮಟ್ಟಕ್ಕೆ ವ್ಯಾಪಿಸಿದೆ ಎಂದು ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next