Advertisement

ಒಮಿಕ್ರಾನ್‌: ಕೋವಿಡ್‌ ಅಂತ್ಯದ ಆರಂಭವೇ?

12:17 AM Jan 11, 2022 | Team Udayavani |

ಹೊಸದಿಲ್ಲಿ: “ಒಮಿಕ್ರಾನ್‌ ರೂಪಾಂತರಿಯು ಜಗತ್ತಿನಲ್ಲಿ ಕೊರೊನಾದ ಅಂತ್ಯಕ್ಕೆ ನಾಂದಿ ಹಾಡಲಿದೆಯೇ? ‘ಇಂಥದ್ದೊಂದು ಅನುಮಾನವನ್ನು ಕ್ಯಾಲಿಫೋರ್ನಿಯಾ ವಿವಿಯ ಪ್ರಮುಖ ಸಾಂಕ್ರಾಮಿಕ ರೋಗ ತಜ್ಞರು ವ್ಯಕ್ತಪಡಿಸಿದ್ದಾರೆ. ಒಮಿಕ್ರಾನ್‌ ಕುರಿತು ನಡೆದಿರುವ ಹಲವು ಅಧ್ಯಯನ ವರದಿಗಳನ್ನು ಪರಿಗಣಿಸಿ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ.

Advertisement

ಒಮಿಕ್ರಾನ್‌ ಅತ್ಯಂತ ಸೌಮ್ಯ ರೋಗಲಕ್ಷಣ ಹೊಂದಿದ್ದು, ವೇಗವಾಗಿ ಹರಡುತ್ತಿದೆ. ಹಲವು ಮಂದಿಗೆ ಈ ಸೋಂಕು ತಗಲಿದಾಗ, ಲಸಿಕೆ ಪಡೆದವರಿಗೆ ಇನ್ನಷ್ಟು ರೋಗನಿರೋಧಕ ಶಕ್ತಿ ಒದಗಿಸಿದರೆ, ಲಸಿಕೆ ಪಡೆಯದವರಲ್ಲೂ ಪ್ರತಿಕಾಯ ಸೃಷ್ಟಿಸುತ್ತದೆ. ಅಲ್ಲದೇ ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರಾನ್‌ ಎಷ್ಟು ವೇಗವಾಗಿ ಹಬ್ಬಿತೋ ಅಷ್ಟೇ ವೇಗವಾಗಿ ಕಣ್ಮರೆಯಾಗಿದೆ. ಹೀಗಾಗಿ ಈ ರೂಪಾಂತರಿಯು ಜಗತ್ತಿನಲ್ಲಿ ಕೊರೊನಾವನ್ನು ಪ್ಯಾಂಡೆಮಿಕ್‌ನಿಂದ ಎಂಡೆಮಿಕ್‌ ಆಗಿ ಬದಲಾಯಿಸಬಹುದು. ಕ್ರಮೇಣ ಕೊರೊನಾ ಎನ್ನುವುದು ಸಾಮಾನ್ಯ ಶೀತ-ಜ್ವರವಾಗಿ ಮಾರ್ಪಾಡಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಂಸತ್‌ನ 400 ಸಿಬಂದಿಗೆ ಪಾಸಿಟಿವ್‌ ಆಗಿರುವ ಹಿನ್ನೆಲೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಸಭಾಧ್ಯಕ್ಷರಾದ ಓಂ ಬಿರ್ಲಾ ಮತ್ತು ವೆಂಕಯ್ಯ ನಾಯ್ಡು ಅವರು ಸುರಕ್ಷಿತವಾಗಿ ಬಜೆಟ್‌ ಅಧಿವೇಶನ ನಡೆಸುವ ಕುರಿತು ಚರ್ಚಿಸಿದ್ದಾರೆ. ಸೋಮವಾರ ಮಹಾರಾಷ್ಟ್ರದಲ್ಲಿ 33,470, ದಿಲ್ಲಿಯಲ್ಲಿ 19,166 ಕೊರೊನಾ ಪ್ರಕರಣ ಪತ್ತೆಯಾಗಿದೆ.

ಲಕ್ಷಾಂತರ ಮಂದಿಗೆ ಮುನ್ನೆಚ್ಚರಿಕಾ ಡೋಸ್‌
ಮುನ್ನೆಚ್ಚರಿಕ ಡೋಸ್‌ ವಿತರಣೆ ಸೋಮವಾರದಿಂದ ದೇಶಾದ್ಯಂತ ಆರಂಭವಾಗಿದ್ದು, ಕಾಯಿಲೆಗಳಿಂದ ಬಳಲುತ್ತಿರುವ 60 ವರ್ಷ ದಾಟಿರುವವರು, ಮುಂಚೂಣಿ ಹಾಗೂ ಆರೋಗ್ಯ ಕಾರ್ಯಕರ್ತರು ಸೇರಿದಂತೆ ಲಕ್ಷಾಂತರ ಮಂದಿ ಲಸಿಕೆ ಸ್ವೀಕರಿಸಿದ್ದಾರೆ. ಇದೇ ವೇಳೆ, ಲಸಿಕಾ ಕೇಂದ್ರಗಳ ಕಾರ್ಯನಿರ್ವಹಣೆಗೆ ಸಮಯದ ಮಿತಿ ಇಲ್ಲ. ರಾತ್ರಿ 10ರವರೆಗೂ ಕಾರ್ಯನಿರ್ವಹಿಸಬಹುದು ಎಂದು ಕೇಂದ್ರ ಸರಕಾರ ಹೇಳಿದೆ.

ಇದನ್ನೂ ಓದಿ:ಅಕ್ರಮ ಹಣ ವರ್ಗಾವಣೆ ಪ್ರಕರಣ : ದೀಪಕ್‌ ಕೊಚ್ಚರ್‌ಗೆ ಸುಪ್ರೀಂ ರಿಲೀಫ್

Advertisement

ನಿನ್ನೆ ಎಲ್ಲೆಲ್ಲಿ ಹೊಸ ನಿಯಮ ಜಾರಿ?

ಹೊಸದಿಲ್ಲಿ
-ಹೊಟೇಲ್‌ ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ
-ಬಾರ್‌ಗಳಲ್ಲಿ ಪಾರ್ಸೆಲ್‌ ಕೊಡುವುದಕ್ಕೆ ಅವಕಾಶ

ಉತ್ತರ ಪ್ರದೇಶ
-ಖಾಸಗಿ, ಸರಕಾರಿ ಕಚೇರಿಗಳಲ್ಲಿ ಶೇ. 50 ಸಿಬಂದಿಗೆ ಮಾತ್ರ ಅವಕಾಶ
-ಪ್ರತೀ ಕಚೇರಿಯಲ್ಲಿ ಕೊರೊನಾ ಹೆಲ್ಪ್ ಡೆಸ್ಕ್
-ರೋಗಿಗಳಿಗೆ ಆನ್‌ಲೈನ್‌ ಅಪಾಯಿಂಟ್‌ಮೆಂಟ್‌, ತುರ್ತಿದ್ದರೆ ಮಾತ್ರ ಆಸ್ಪತ್ರೆಗೆ ಬರಲು ಸೂಚನೆ

ಕೇರಳ
-ಮದುವೆ, ಅಂತ್ಯಸಂಸ್ಕಾರಕ್ಕೆ 50 ಮಂದಿಯ ಮಿತಿ
-ಬೇರೆ ಎಲ್ಲ ಕಾರ್ಯಕ್ರಮಗಳನ್ನು ಆನ್‌ಲೈನ್‌ ವೇದಿಕೆಯಲ್ಲೇ ನಡೆಸಲು ಸೂಚನೆ

ತಮಿಳುನಾಡು
-ಜಲ್ಲಿಕಟ್ಟಿನಲ್ಲಿ 150 ಪ್ರೇಕ್ಷಕರಿಗೆ ಮಾತ್ರ ಅವಕಾಶ
-ಜಲ್ಲಿಕಟ್ಟಿನಲ್ಲಿ ಸ್ಪರ್ಧಿಸುವವರೊಂದಿಗೆ ಓರ್ವ ಸಹಚರ ಬರಬಹುದು
-ಸ್ಪರ್ಧಾಳುಗಳು, ಪ್ರೇಕ್ಷಕರು ಸಂಪೂರ್ಣ ಲಸಿಕೆ ಪಡೆದಿರಬೇಕು, 48 ಗಂಟೆಗಳೊಳಗಿನ ಆರ್‌ಟಿ-ಪಿಸಿಆರ್‌ ನೆಗೆಟಿವ್‌ ವರದಿ ತೋರಿಸುವುದು ಕಡ್ಡಾಯ

ಹರಿಯಾಣ
-ಶಾಲಾ-ಕಾಲೇಜುಗಳಲ್ಲಿ ಆನ್‌ಲೈನ್‌ ತರಗತಿ ಜ.26ರವರೆಗೆ ಮುಂದುವರಿಕೆ

Advertisement

Udayavani is now on Telegram. Click here to join our channel and stay updated with the latest news.

Next