Advertisement

Olympics; ಭಾರತಕ್ಕೆ ನಾಲ್ಕನೇ ಕಂಚಿನ ಪದಕ ಗೆದ್ದು ಕೊಟ್ಟ ಹಾಕಿ ತಂಡ

11:29 PM Aug 08, 2024 | Team Udayavani |

ಪ್ಯಾರಿಸ್ : ಭಾರತ ಪುರುಷರ ಹಾಕಿ ತಂಡ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ಹಾಕಿಯಲ್ಲಿ ಭಾರತದ ವೈಭವದ ಕಾಲ ಮುಗಿದೇ ಹೋಯಿತು ಎಂದು ನೊಂದವರಿಗೆ ಸಾಂತ್ವನ ಹೇಳಿದೆ. ಗುರುವಾರ ಸ್ಪೇನ್‌ ವಿರುದ್ಧ 2-1 ಗೋಲುಗಳಿಂದ ಗೆದ್ದ ಭಾರತ ಕಂಚು ಗೆದ್ದಿದೆ. ಹಿಂದಿನ ಟೋಕಿಯೋ ಒಲಿಂಪಿಕ್ಸ್‌ನಲ್ಲೂ ಕಂಚು ಗೆದ್ದಿದ್ದ ಭಾರತ, ಈ ಬಾರಿಯೂ ಗೆಲ್ಲುವುದರೊಂದಿಗೆ ಒಲಿಂಪಿಕ್ಸ್‌ನಲ್ಲಿ ಸತತ 2ನೇ ಕಂಚು ಗೆದ್ದ ಸಾಧನೆ ಮಾಡಿದೆ. ಇದು ಒಲಿಂಪಿಕ್ಸ್‌ ಹಾಕಿಯಲ್ಲಿ ಭಾರತಕ್ಕೆ ಒಲಿದ 13ನೇ ಪದಕವಾಗಿದೆ. ಈ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಲಭಿಸಿದ 4ನೇ ಪದಕವೂ ಹೌದು.

Advertisement

ಆರಂಭಿಕ ಹಿನ್ನಡೆ
ಗುರುವಾರ ಪಂದ್ಯ ಆರಂಭವಾಗುತ್ತಿದ್ದಂತೆ ಎರಡೂ ತಂಡಗಳು ಆಕ್ರಮಣಕಾರಿ ಆಟ ಆರಂಭಿಸಿದವು. ಮೊದಲ ಕ್ವಾರ್ಟರ್‌ನಲ್ಲಿ ಯಾವುದೇ ತಂಡಗಳಿಗೂ ಗೋಲು ಗಳಿಸಲಾಗಲಿಲ್ಲ. 8ನೇ ನಿಮಿಷದಲ್ಲಿ ಮನ್‌ಪ್ರೀತ್‌ ಗಾಯಗೊಂಡಿದ್ದು, ಭಾರತಕ್ಕೆ ಆತಂಕ ಮೂಡಿಸಿತು. ಆದರೆ 9ನೇ ನಿಮಿಷದಲ್ಲಿ ಶ್ರೀಜೇಶ್‌ ಗೋಲು ತಡೆಯವ ಮೂಲಕ ಆತ್ಮವಿಶ್ವಾಸವನ್ನು ಹೆಚ್ಚಿಸಿದರು. 18ನೇ ನಿಮಿಷದಲ್ಲಿ ಪೆನಾಲ್ಟಿ ಸ್ಟ್ರೋಕ್‌ ಅವಕಾಶ ಪಡೆದುಕೊಂಡ ಸ್ಪೇನ್‌, ಅದನ್ನು ಗೋಲಾಗಿ ಪರಿವರ್ತಿಸಿತು. ಇದಾದ ಬಳಿಕ ಪ್ರತಿ 2 ನಿಮಿಷಕ್ಕೆ 2 ಪೆನಾಲ್ಟಿ ಕಾರ್ನರ್‌ ನೀಡುವ ಮೂಲಕ ಭಾರತ ಅಭಿಮಾನಿಗಳ ಆತಂಕ ಹೆಚ್ಚಿಸಿತ್ತು.

ಹರ್ಮನ್‌ಪ್ರೀತ್‌ ಗೋಲು
ಹಿನ್ನಡೆಯಲ್ಲಿದ್ದ ಭಾರತಕ್ಕೆ ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ಮತ್ತೆ ಆಸರೆಯಾದರು. 30ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ನಾಯಕ ಗೋಲಾಗಿ ಪರಿವರ್ತಿಸಿದರು. ಹೀಗಾಗಿ 2ನೇ ಕ್ವಾರ್ಟರ್‌ ಅಂತ್ಯಕ್ಕೆ ಭಾರತ ಸಮಬಲ ಸಾಧಿಸಿತು. ಇದಾದ ಬಳಿಕ 33ನೇ ನಿಮಿಷದಲ್ಲಿ ಮತ್ತೂಂದು ಪೆನಾಲ್ಟಿ ಕಾರ್ನರ್‌ ಅವಕಾಶ ಪಡೆದುಕೊಂಡ ಭಾರತದ ಪರವಾಗಿ ಹರ್ಮನ್‌ ಗೋಲು ಬಾರಿಸಿ ಮುನ್ನಡೆ ತಂದುಕೊಟ್ಟರು. ಅನಂತರ ಭಾರತ ರಕ್ಷಣಾತ್ಮಕವಾಗಿ ಆಟವಾಡಿ ಕಂಚಿಗೆ ಕೊರಳೊಡ್ಡಿತು.

ಕೊನೆ 1 ನಿಮಿಷದ ಆತಂಕ
ಕೊನೆಯವರೆಗೂ ಮುನ್ನಡೆ ಕಾಯ್ದುಕೊಂಡಿದ್ದ ಭಾರತದ ಆಟಕ್ಕೆ ಮನಸೋತ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಪಂದ್ಯ ಮುಗಿಯಲು 1 ನಿಮಿಷ ಬಾಕಿ ಇರುವಾಗ 2 ಪೆನಾಲ್ಟಿ ಕಾರ್ನರ್‌ಗಳನ್ನು ಬಿಟ್ಟುಕೊಟ್ಟು ಭಾರತ ತಂಡ ಆತಂಕ ಸೃಷ್ಟಿಸಿತ್ತು. ಆದರೆ ಇದನ್ನು ಗೋಲಾಗಿ ಪರಿವರ್ತಿಸಲು ಸ್ಪೇನ್‌ ವಿಫ‌ಲವಾದ ಕಾರಣ ಕಂಚು ಭಾರತದ ಪಾಲಾಯಿತು.

52 ವರ್ಷದ ಬಳಿಕ ಸತತ 2 ಕಂಚು
ಭಾರತ ಹಾಕಿ ತಂಡ 52 ವರ್ಷಗಳ ಬಳಿಕ ಸತತ 2 ಒಲಿಂಪಿಕ್ಸ್‌ಗಳಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿದೆ. ಭಾರತ ಈ ಮೊದಲು 1968ರ ಮೆಕ್ಸಿಕೋ ಹಾಗೂ 1972ರ ಮ್ಯೂನಿಚ್‌ ಒಲಿಂಪಿಕ್ಸ್‌ಗಳಲ್ಲಿ ಸತತವಾಗಿ 2 ಕಂಚು ಗೆದ್ದಿತ್ತು. 2021ರ ಟೋಕಿಯೋ ಹಾಗೂ ಈ ಬಾರಿ ಭಾರತ ಸತತವಾಗಿ ಕಂಚು ಗೆದ್ದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next