ಜಪಾನ್‌ನಲ್ಲಿ ಶುಕ್ರವಾರದಂದು ಒಲಿಂಪಿಕ್ಸ್ ಕ್ರೀಡಾಕೂಟ ಆರಂಭವಾಗಲಿದ್ದು ಸುಸೂತ್ರವಾಗಿ ನಡೆಯಲಿ ಎಂಬುದೇ ಎಲ್ಲರ ಆಶಯವಾಗಿದೆ. ಜಪಾನ್‌ನಲ್ಲೂ ಕೊರೊನಾ ಭೀತಿ ಹೆಚ್ಚಳವಾಗುತ್ತಿದ್ದು, ಇದರ ಭೀತಿಯಲ್ಲೇ ಒಲಿಂಪಿಕ್ಸ್ ನಡೆಯಬೇಕಿದೆ. ಅಲ್ಲದೆ ಕ್ರೀಡಾಳುಗಳಿಗೂ ಬಿಗಿನಿಯಮಗಳನ್ನು ಹಾಕಲಾಗಿದ್ದು, ಒಂದು ರೀತಿಯಲ್ಲಿ ಬಂಧಿಗಳಾಗಿಯೇ ಕ್ರೀಡಾಳುಗಳು ಪ್ರದರ್ಶನ ನೀಡಬೇಕಾಗಿದೆ. ಇದರ ನಡುವೆಯೇ ಗುರುವಾರ ಗಿನಿಯಾ ದೇಶ ಕೊರೊನಾ ಕಾರಣದಿಂದಲೇ ಒಲಿಂಪಿಕ್ಸ್‌ನಿಂದ ಹೊರಗೆ ಹೋಗಿದ್ದು ಇದು ಕ್ರೀಡಾಕೂಟಕ್ಕೆ ಸಿಕ್ಕ ದೊಡ್ಡ ಹೊಡೆತವಾಗಿದೆ.
ಈ ಬಾರಿ ಭಾರತದಿಂದ 127 ಆ್ಯತ್ಲೀಟ್‌ಗಳು ಭಾಗಿಯಾಗುತ್ತಿದ್ದಾರೆ. ಇದರಲ್ಲಿ 71 ಮಂದಿ ಪುರುಷರು ಮತ್ತು 56 ಮಂದಿ ಮಹಿಳಾ ಸ್ಪರ್ಧಿಗಳಿದ್ದಾರೆ. ವಿಶೇಷವೆಂದರೆ ಹರಿಯಾಣ ಮತ್ತು ಪಂಜಾಬ್‌ನಿಂದಲೇ ಈ ಬಾರಿ ಹೆಚ್ಚು ಪ್ರಾತಿನಿಧ್ಯವಿದೆ. ಅಂದರೆ ಹರಿಯಾಣದಿಂದ 31 ಮತ್ತು ಪಂಜಾಬ್‌ನಿಂದ 19 ಸ್ಪರ್ಧಿಗಳು ಭಾಗಿಯಾಗುತ್ತಿದ್ದಾರೆ.
ಒಟ್ಟು 18 ವಿಭಾಗದಲ್ಲಿ ಭಾರತೀಯರು ಸ್ಪರ್ಧಿಸುತ್ತಿದ್ದಾರೆ. ಅಂದರೆ ಬಿಲ್ಲುಗಾರಿಕೆ, ಆ್ಯತ್ಲೆಟಿಕ್ಸ್, ಬಾಕ್ಸಿಂಗ್, ಬ್ಯಾಡ್ಮಿಂಟನ್, ಈಕ್ವೇಸ್ಟ್ರಿಯನ್, ಫೆನ್ಸಿಂಗ್, ಗಾಲ್ಫ್, ಜಿಮ್ನಾಸ್ಟಿಕ್ಸ್, ಹಾಕಿ, ಜುಡೋ, ರೋವಿಂಗ್, ಶೂಟಿಂಗ್, ಸೈಲಿಂಗ್, ಈಜು, ಟೇಬಲ್ ಟೆನಿಸ್, ಟೆನಿಸ್, ವೇಟ್ ಲಿಫ್ಟಿಂಗ್ ಮತ್ತು ಕುಸ್ತಿಯಲ್ಲಿ ಭಾಗಿಯಾಗುತ್ತಿದ್ದಾರೆ. ಕುಸ್ತಿ, ಶೂಟಿಂಗ್, ಬ್ಯಾಡ್ಮಿಂಟನ್, ಟೆನಿಸ್, ಬಿಲ್ಲುಗಾರಿಕೆ ಸ್ಪರ್ಧಿಗಳ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಜತೆಗೆ ಎಲ್ಲರೂ ಗೆದ್ದು ಬರಲಿ ಎಂಬುದು ಇಡೀ ದೇಶವಾಸಿಗಳ ಆಶಯ.
ಕಳೆದ ಐದು ವರ್ಷಗಳಿಂದಲೂ ಭಾರತೀಯ ಸ್ಪರ್ಧಿಗಳು ಒಲಿಂಪಿಕ್ಸ್‌ಗಾಗಿ ಅವಿರತವಾಗಿ ಶ್ರಮಿಸಿದ್ದಾರೆ. ಕೊರೊನಾ ಕಾರಣದಿಂದಾಗಿ ಕೆಲವು ಸ್ಪರ್ಧಿಗಳಿಗೆ ಬೇರೆ ಬೇರೆ ಕ್ರೀಡಾಕೂಟಗಳಲ್ಲಿ ಭಾಗಿಯಾಗಲು ಅವಕಾಶ ಸಿಗದೇ ಒಲಿಂಪಿಕ್ಸ್ ಅವಕಾಶ ತಪ್ಪಿಸಿಕೊಂಡಿದ್ದಾರೆ. ಆದರೂ ಈಗ ಭಾಗಿಯಾಗುತ್ತಿರುವ ಎಲ್ಲರೂ ನಿರೀಕ್ಷೆಗೂ ಮೀರಿದ ಉತ್ತಮ ಸಾಧನೆ ಮಾಡಿದವರೇ ಆಗಿದ್ದಾರೆ. ಹೀಗಾಗಿ ಭಾರತೀಯರು ಚೀರ್ಸ್ ಫಾರ್ ಇಂಡಿಯಾ ಎಂದು ಹೇಳುತ್ತಿದ್ದಾರೆ.
ಇನ್ನು ಗುರುವಾರ ನಡೆಯಲಿರುವ ಉದ್ಘಾಟನ ಸಮಾರಂಭದಲ್ಲಿ 30 ಮಂದಿ ಭಾಗಿಯಾಗುತ್ತಿದ್ದಾರೆ. ಹೆಚ್ಚಿನ ಮಂದಿ ಭಾಗಿಯಾಗಲು ಅವಕಾಶವಿಲ್ಲದ ಕಾರಣ ಕಡಿಮೆ ಮಂದಿ ಮಾತ್ರ ಪಾಲ್ಗೊಳ್ಳುತ್ತಿದ್ದಾರೆ. ಭಾರತದ ಕಡೆಯಿಂದ ಮೇರಿ ಕೋಮ್ ಮತ್ತು ಮನ್‌ಪ್ರೀತ್ ಸಿಂಗ್ ಅವರು ಧ್ವಜಧಾರಿಗಳಾಗಿ ಭಾಗಿಯಾಗಲಿದ್ದಾರೆ.
ಕೊರೊನಾ ಕಾಟವಿರದಿದ್ದರೇ ಕಳೆದ ವರ್ಷವೇ ಒಲಿಂಪಿಕ್ಸ್ ಕ್ರೀಡಾ ಕೂಟ ನಡೆಯಬೇಕಿತ್ತು. ಆದರೆ ಜಗತ್ತಿನಾದ್ಯಂತ ಕೊರೊನಾ ಕಾಟ ಹೆಚ್ಚಾದ ಹಿನ್ನೆಲೆಯಲ್ಲಿ ಮುಂದೂಡಿಕೆ ಮಾಡಲಾಗಿತ್ತು. ಹೀಗಾಗಿ ಈ ವರ್ಷ ನಡೆಯುತ್ತಿದೆ. ಜಪಾನ್‌ನಲ್ಲಿ ಕೊರೊನಾ ಕಡಿಮೆಯಾಗುತ್ತಿದೆ ಎಂಬ ಕಾರಣಕ್ಕಾಗಿ ಎಲ್ಲ ಸಿದ್ಧತೆಗಳನ್ನು ಶುರು ಮಾಡಿಕೊಳ್ಳಲಾಗಿತ್ತು. ಆದರೆ ದಿಢೀರನೇ ಮತ್ತೆ ಕೊರೊನಾ ಕೇಸುಗಳು ಶುರುವಾಗಿವೆ. ಒಂದು ವೇಳೆ ಈಗ ಮತ್ತೆ ಕ್ರೀಡಾಕೂಟ ಮುಂದೂಡಿಕೆಯಾದರೆ ಸರಿಯಾಗುವುದಿಲ್ಲ ಎಂಬ ಕಾರಣಕ್ಕಾಗಿ ವಿರೋಧದ ನಡುವೆಯೂ ನಡೆಸಲಾಗುತ್ತಿದೆ.
ಏನೇ ಆಗಲಿ, ಕೊರೊನಾ ಸಂಕಷ್ಟದಲ್ಲಿ ನಡೆಯುತ್ತಿರುವ ಈ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಲಿ. ಯಾವುದೇ ಆಟಗಾರರು ಕೊರೊನಾಗೆ ತುತ್ತಾಗದಿರಲಿ. ಭಾರತವೂ ಹೆಚ್ಚಿನ ಪದಕಗಳನ್ನು ಗೆದ್ದು ಬರಲಿ ಎಂಬ ಹಾರೈಕೆ ನಮ್ಮದು.