Advertisement
ಜಪಾನಿನ ಟೋಕ್ಯೋದಲ್ಲಿ 32ನೇ ಒಲಿಂಪಿಕ್ ನಡೆಯಲಿದೆ. ಜು.24ರಿಂದ ಆ.9ರವರೆಗೆ ಕೂಟದ ದಿನಾಂಕ. ಈ ಕೂಟ ನಡೆಸಲು ಜಪಾನ್ ಮಾನ್ಯತೆ ಪಡೆದುಕೊಂಡಿದ್ದು 2013ರಲ್ಲಿ. ವಿಶ್ವದ ಬೃಹತ್ ಬಹುರಾಷ್ಟ್ರಗಳ ಕ್ರೀಡಾಕೂಟದ ಆತಿಥ್ಯ ಪಡೆದು 7 ವರ್ಷಗಳ ನಂತರ ಆಯೋಜನೆಯಾಗುತ್ತಿದೆ. ಜಪಾನ್‌ನಂತಹ ಶ್ರೀಮಂತ, ಶಿಸ್ತುಬದ್ಧ ರಾಷ್ಟ್ರಕ್ಕೇ ಇಷ್ಟು ಸಮಯ ಬೇಕೆಂದರೆ ಒಲಿಂಪಿಕ್‌ನ ಅಗಾಧತೆಯ ಅರಿವಾಗಬಹುದು. ಹೆಚ್ಚುಕಡಿಮೆ ಟೋಕ್ಯೋ ನಗರದ ಬಹುತೇಕ ಸ್ವರೂಪವೇ ಬದಲಾಗಿದೆ. ಹಲವು ರೀತಿಯಲ್ಲಿ ನಗರವನ್ನು ಅನುಕೂಲಕರವಾಗಿ ಪರಿವರ್ತಿಸಲಾಗಿದೆ. ಆರಂಭದಲ್ಲಿ ಕೂಟದ ಖರ್ಚನ್ನು ಕಡಿಮೆ ಅಂದಾಜಿಸಲಾಗಿತ್ತು. ಈಗ ಅದರ ಖರ್ಚು 93 ಸಾವಿರ ಕೋಟಿ ರೂ.ಗಳಿಗೇರಿದೆ. ಇದರಲ್ಲಿ ಕೂಟವನ್ನು ಹೊರತುಪಡಿಸಿದ ಮೂಲಭೂತ ಸೌಕರ್ಯ ಅಭಿವೃದ್ಧಿ ಖರ್ಚುಗಳೂ ಸೇರಿವೆ.
Related Articles
Advertisement
ಲಾಭಗಳು ಹೇಗೆ ಬರುತ್ತವೆ?: 1984ರ ಲಾಸ್ ಏಂಜಲೀಸ್ ಒಲಿಂಪಿಕ್ ಒಂದರಲ್ಲೇ ಲಾಭ ಬಂದಿದ್ದು. ಉಳಿದೆಲ್ಲ ಬಾರಿ ನಷ್ಟವೇ ಆಗಿದೆ. ಅದಿರಲಿ ಆದಾಯ ಬರುವ ಮಾರ್ಗಗಳು ಹೀಗಿವೆ. 2012ರ ಲಂಡನ್ ಒಲಿಂಪಿಕ್ ನೇರ ಪ್ರಸಾರದಿಂದ ಈಗಿನ ರೂ. ದರದಲ್ಲಿ 18.76 ಸಾವಿರ ಕೋಟಿ ರೂ. ಲಭಿಸಿದೆ. ಅದೇ ಕೂಟದಲ್ಲಿ ದೇಶೀಯ ಪ್ರಾಯೋಜಕತ್ವ, ಅಂತಾರಾಷ್ಟ್ರೀಯ ಪ್ರಾಯೋಜಕತ್ವ, ಟಿಕೆಟ್ ಮಾರಾಟ, ಪರವಾನಗಿ ಮಾರಾಟ ಎಲ್ಲ ಸೇರಿ ಈಗಿನ ರೂಪಾಯಿ ದರಲ್ಲಿ 59.61 ಸಾವಿರ ಕೋಟಿ ರೂ. ಹಣ ಬಂದಿದೆ. ಆದರೆ ಲಂಡನ್ ಒಲಿಂಪಿಕ್‌ಗೆ ಖರ್ಚಾಗಿದ್ದು ಈಗಿನ ರೂಪಾಯಿ ದರದಲ್ಲಿ 1.32 ಲಕ್ಷ ಕೋಟಿ ರೂ. ಈ ಖರ್ಚುಗಳಲ್ಲಿ ದೇಶದ ಮೂಲಭೂತ ಸೌಕರ್ಯದ ಮೇಲೆ ಮಾಡಿದ ಹೂಡಿಕೆಗಳು ದೀರ್ಘಕಾಲ ಬಾಳಿಕೆ ಬರುವುದರಿಂದ, ಅವನ್ನು ನಷ್ಟ ಎನ್ನಲು ಸಾಧ್ಯವಿಲ್ಲ. ಆದರೆ ಕ್ರೀಡಾಗ್ರಾಮ, ಮೈದಾನಗಳು, ಕೆಲವು ಸೌಕರ್ಯಗಳು ಕೂಟ ಮುಗಿದ ಮೇಲೆ ಯಾವ ಲಾಭವನ್ನೂ ತರುವುದಿಲ್ಲ. ಆದ್ದರಿಂದ ನಷ್ಟವಂತೂ ಕಟ್ಟಿಟ್ಟಿದ್ದು.
ಕಾಮನ್‌ವೆಲ್ತ್‌ನಲ್ಲಿ ಭಾರೀ ಹಗರಣ: ಭಾರತ ಒಂದು ಬಾರಿ ಕಾಮನ್‌ವೆಲ್ತ್ ಕೂಟ ಸಂಘಟಿಸಿದೆ. ಎರಡು ಬಾರಿ ಏಷ್ಯನ್ ಗೇಮ್ಸ್ ಅನ್ನೂ ನಡೆಸಿದೆ. 2010ರಲ್ಲಿ ಭಾರತದಲ್ಲಿ ನಡೆದ ಕಾಮನ್‌ವೆಲ್ತ್ ಕೂಟ ಹಗರಣಗಳ ಆಗರವಾಗಿ, ಇವತ್ತಿಗೂ ಆ ಪ್ರಕರಣಗಳು ಜೀವಂತ ಇವೆ. ಭಾರತ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ಸ್ಥಾನವನ್ನು ಸುರೇಶ್ ಕಲ್ಮಾಡಿ ಕಳೆದುಕೊಂಡು, ಶಾಶ್ವತವಾಗಿ ಭಾರತೀಯರ ದೃಷ್ಟಿಯಲ್ಲಿ ಖಳನಾಯಕರಾಗಿದ್ದಾರೆ. ಆರಂಭದಲ್ಲಿ 1620 ಕೋಟಿ ರೂ. ಎಂದು ಈ ಕೂಟದ ವೆಚ್ಚವನ್ನು ನಿರ್ಧರಿಸಲಾಗಿತ್ತು. ಕೂಟ ಮುಕ್ತಾಯವಾಗುವಾಗ ವೆಚ್ಚ 10,500 ಕೋಟಿ ರೂ.ಗಳಿಗೆ ಏರಿತು. ಆದರೆ ಭ್ರಷ್ಟಾಚಾರದ ಪರಿಣಾಮ ನಿಜವಾದ ಖರ್ಚು 70,000 ಕೋಟಿ ರೂ. ಎಂದು ಪತ್ರಿಕೆಯೊಂದು ಅಂದಾಜಿಸಿದೆ.
ಸದ್ಯ ಭಾರತಕ್ಕೆ ಸಾಧ್ಯವಿಲ್ಲ!: 2014ರಲ್ಲಿ ಮೋದಿ ಸರ್ಕಾರ ಮೊದಲ ಬಾರಿ ಅಧಿಕಾರಕ್ಕೆ ಬಂದಾಗ, ಒಲಿಂಪಿಕ್ ಆಯೋಜನೆಯ ಆತಿಥ್ಯ ಪಡೆಯಲು ಭಾರತ ಯತ್ನಿಸಲಿದೆ ಎಂದು ಜೋರು ಸುದ್ದಿಯಾಗಿತ್ತು. ಅದಾದ ಮೇಲೆ ಸುದ್ದಿ ತಣ್ಣಗಾಯಿತು. ಯುವ ಒಲಿಂಪಿಕ್ ಹೊರತುಪಡಿಸಿದರೆ, ಭಾರತಕ್ಕೆ ಮಾಮೂಲಿ ಒಲಿಂಪಿಕ್ ಆಯೋಜಿಸುವ ಆಸಕ್ತಿಯಿಲ್ಲ ಎಂದು ಆಮೇಲೆ ಗೊತ್ತಾಯಿತು. ಇದಕ್ಕೆ ಕಾರಣ ಇಷ್ಟೇ. ಒಲಿಂಪಿಕ್ ಆಯೋಜಿಸುವ ದೇಶ ಆರ್ಥಿಕವಾಗಿ ಸುಭದ್ರವಾಗಿರಬೇಕು. ಯಾವುದೇ ಆರ್ಥಿಕ ಹೊಡೆತವನ್ನು ತಡೆದುಕೊಳ್ಳುವ ಶಕ್ತಿಯಿರಬೇಕು. ಈ ಕೂಟವನ್ನು ಯಶಸ್ವಿಗೊಳಿಸಲುಬೇಕಾದ ಅತ್ಯಂತ ಪ್ರಬಲ ಅಧಿಕಾರಿ ವರ್ಗವಿರಬೇಕು. ಏಕಮನಸ್ಸಿನಿಂದ ದುಡಿಯುವ ನಾಯಕತ್ವವಿರಬೇಕು. ಒಂದು ಕೂಟ ಆಯೋಜಿಸುವುದೆಂದರೆ ಅದಕ್ಕೆ ಕನಿಷ್ಠ 10 ವರ್ಷಗಳ ಅಗಾಧ ಪೂರ್ವಸಿದ್ಧತೆ ಬೇಕಾಗುತ್ತದೆ. ಸದ್ಯ ಭಾರತದಲ್ಲಿ ಅಂತಹ ಪರಿಸ್ಥಿತಿಯಿಲ್ಲ. ಮುಖ್ಯವಾಗಿ ಆರ್ಥಿಕ ಸಾಮರ್ಥ್ಯವಿಲ್ಲ.