ನೆಲಮಂಗಲ: ಆಧುನಿಕತೆಯ ಭರಾಟೆಯಲ್ಲಿ ಕಣ್ಮರೆಯಾಗಿದ್ದ ಗುಬ್ಬಚ್ಚಿಗಳು ಚೀಂವ್ ಚೀಂವ್ ಸದ್ದು ಮಾಡುತ್ತಾ ಮನೆಯ ಅತಿಥಿ ಯಂತೆ ಮನೆ ಅಂಗಳಕ್ಕೆ ಆಗಮಿಸುತ್ತಿದ್ದು, ಮನೆಗೊಂದು ಗುಬ್ಬಚ್ಚಿಗೂಡು ನೆಲೆಯಾಗುತ್ತಿದೆ.
ನಗರ ಪ್ರದೇಶಗಳಲ್ಲಿ ಕಬ್ಬಿಣದ ಪಂಜರದ ಗೂಡುಗಳಲ್ಲಿ ಬಣ್ಣಬಣ್ಣದ ಗುಬ್ಬಚ್ಚಿ ಗಾತ್ರದ ವಿವಿಧ ಪಕ್ಷಿಗಳನ್ನು ಸಾಕುತ್ತಾರೆ. ಆದರೆ, ಗ್ರಾಮೀಣ ಪ್ರದೇಶದಲ್ಲಿಸ ಸ್ವ-ಇಚ್ಛೆಯಿಂದ ಕಾಳು-ಕಡಿಗಳನ್ನು ಹರಸಿ ಚೀಂವ್ ಚೀಂವ್ ಶಬ್ದ ಮಾಡಿ ಬರುವ ಗುಬ್ಬಚ್ಚಿಗಳಿಗೆ ಕೆಲವರು ಹಳ್ಳಿಯಲ್ಲಿ ಸಿಗುವ ವಸ್ತುಗಳಿಂದಲೇ ಮನೆ ಯನ್ನು ಮಾಡಿ ಗುಬ್ಬಚ್ಚಿಗಳಿಗೆ ಆಶ್ರಯ ನೀಡುತ್ತಿದ್ದಾರೆ. ಮನೆಯಂಗಳದಲ್ಲಿ ಪ್ರತಿನಿತ್ಯಚೀಂವ್ ಚೀಂವ್ ಸದ್ದು ಕೇಳಿ ಜನರು ಸಂತೋಷ ವ್ಯಕ್ತಪಡಿಸಿದ್ದಾರೆ.
ಸಣ್ಣ ಪಕ್ಷಿ ಬಲು ಚೆಂದ: ಗುಬ್ಬಚ್ಚಿಯೊಂದು ಸಾಮಾನ್ಯವಾಗಿ 16 ಸೆಂ.ಮೀ ಎತ್ತರ, 21 ಸೆಂ.ಮೀ ಉದ್ದವಿರುತ್ತದೆ. ಇದರ ತೂಕ 25ರಿಂದ 40 ಗ್ರಾಂನಷ್ಟಿರುವ ಪಕ್ಷಿಗಳಲ್ಲಿಯೇ ಸಣ್ಣ ಪಕ್ಷಿ ಇದಾಗಿದೆ. ಕಾಳುಕಡಿ, ಹುಳು-ಹು ಪ್ಪಡಿಗಳನ್ನು ತಿನ್ನುವ ಈ ಪಕ್ಷಿ ಕಾಳುಗಳ ಗಟ್ಟಿ ಬೀಜಗಳನ್ನು ಹೊಡೆಯಲು ತ್ರೀಕೋನಾಕಾರದ ಕೊಕ್ಕು ಹೊಂದಿದೆ. ಸುಂದರವಾಗಿ ಕಾಣುವ ಪಕ್ಷಿ ಇದಾಗಿದ್ದು, ಬೂದು ಬಣ್ಣ ದಿಂದ ಕೂಡಿರುತ್ತದೆ.
ಗೂಡು ತಯಾರಿಕೆ: ಗುಬ್ಬಚ್ಚಿಗಳು ಸಾಮಾನ್ಯವಾಗಿ ಈಚಲ ಮರಗಳಲ್ಲಿ ಒಣಗಿದ ಹುಲ್ಲು, ಹತ್ತಿ, ನಾರುಗಳನ್ನು ಬಳಸಿ ಸುಂದರ ಗೂಡು ತಯಾರು ಮಾಡುತ್ತಿದ್ದವು. ಆದರೆ, ಮಾನವನ ದುರಾಸೆಗೆ ಮರಗಳು ನೆಲಸಮವಾಗಿ ಗೂಡು ಕಣ್ಮರೆಯಾಗಿವೆ. ಅಚ್ಚರಿ ಎಂಬಂತೆ ಮಾನವನೇ ಗುಬ್ಬಚ್ಚಿಗೆ ಗೂಡು ಕಟ್ಟುವ ದಿನ ಬಂದಿದೆ. ಇತ್ತೀಚಿನ ದಿನಗಳಲ್ಲಿ ಗುಬ್ಬಚ್ಚಿ ಮರಿಗಳು ಮನೆಯ ಅಂಗಳದಲ್ಲಿ ಕಾಳುಕಡಿ, ಅನ್ನವನ್ನು ತಿನ್ನಲು ಬರುತ್ತಿದ್ದು, ಮನೆಯ ಬಳಿ ಗೂಡು ಕಟ್ಟಲು ಪರದಾಡುವುದನ್ನು ಕಂಡಂತಹ ಮಾಲೀಕರು ಗುಬ್ಬಚ್ಚಿಗಳಿಗೆ ಒಣಗಿದ ಸೋರೆಕಾಯಿ ಬುರುಡೆ, ಮಣ್ಣಿನ ಮಡಕೆ ಚುಪ್ಪುಗಳಲ್ಲಿ ಗುಬ್ಬಚ್ಚಿ ಮನೆಗಳ ನಿರ್ಮಾಣ ಮಾಡಿದ್ದು, ಮನೆಗಳ ಚಾವಣಿಯಲ್ಲಿ ಗೂಡು ಕಟ್ಟಿ ಗುಬ್ಬಚ್ಚಿ ವಾಸಿಸಲು ಅನುವು ಮಾಡಿಕೊಟ್ಟು ಆಶ್ರಯ ನೀಡಿದ್ದಾರೆ.
4 ಮೊಟ್ಟೆ 14ದಿನ ಕಾವು: ಗುಬ್ಬಚ್ಚಿ ಪಾಸ್ಸರ್ ಡೊಮೆಸ್ಟಿಕಲ್ ಪಾಸ್ಸರಿಫಾರ್ಮಿಸ್ ಗಣಕ್ಕೆ ಸೇರಿರುವ ಗುಬ್ಬಿಗಳು ಹೆಚ್ಚು ದಂಪತಿಯಂತೆ ಬಾಳುತ್ತವೆ. ಗಂಡು ಹಕ್ಕಿಗೆ ರೆಕ್ಕೆ, ಕೆನ್ನೆ ಹಾಗೂ ತಲೆಯ ಭಾಗ ಕಂದುಗೆಂಪು ಬಣ್ಣವಿದ್ದು, ಪಕ್ಕೆ ಹಾಗೂ ಹೊಟ್ಟೆ ಬಿಳಿ ಬಣ್ಣವಿರುತ್ತದೆ. ಹೆಣ್ಣು ಗುಬ್ಬಿ ಮರಿಗಳು ಬೂದು ಬಣ್ಣದಿಂದ ಕೂಡಿದ್ದು, ರೆಕ್ಕೆಯ ಮೇಲೆ ಕಪ್ಪುಪಟ್ಟಿಗಳಿಂದ ಕೂಡಿರುತ್ತದೆ. ಸಾಮಾನ್ಯವಾಗಿ 4 ಮೊಟ್ಟೆಗಳನ್ನು ಇಟ್ಟು 14ದಿನ ಕಾವು ಕೊಡುವ ಮೂಲಕ ಹೆಣ್ಣು ಗುಬ್ಬಚ್ಚಿ ಮರಿಗಳ ರಕ್ಷಣೆ ಮಾಡಿದರೆ, ಮರಿಗಳಿಗೆ ಆಗಾಗ ಸಣ್ಣ,ಮೃದು ದೇಹದ ಕೀಟ, ಹುಳುಗಳನ್ನು ತಿನ್ನಿಸುವುದು ಗಂಡು ಗುಬ್ಬಿಯ ಕೆಲಸವಾಗಿರುತ್ತದೆ.
ಚಾವಣಿ ಮೇಲೆ ನೀರು: ಪಕ್ಷಿಗಳಿಗೆ ಅನುಕೂಲವಾಗಲು ಅನೇಕ ಜನರು ತಮ್ಮ ಮನೆಗಳ ಚಾವಣಿಗಳ ಮೇಲೆ ತಟ್ಟೆಗಳಲ್ಲಿ ನೀರು ಹಾಗೂ ಕಾಳು ಇಟ್ಟು ಪಕ್ಷಿಗಳ ಉಳಿವಿಗೆ ಕಾರಣವಾಗುವ ಜತೆ ಮಾನವೀಯತೆ ಮರೆದಿದ್ದಾರೆ.
ಅಭಿಯಾನಕ್ಕೆ ಕೈಜೋಡಿಸಿ : ಗ್ರಾಮೀಣ ಭಾಗದಲ್ಲಿ ಗುಬ್ಬಚ್ಚಿಗಳ ಸದ್ದು ಹೆಚ್ಚಾದ ಕಾರಣ ಪ್ರತಿ ಮನೆಗಳಲ್ಲಿ ಒಂದು ಸಣ್ಣ ಗುಬ್ಬಚ್ಚಿಗಾಗಿ ಒಂದು ಗೂಡು ಇರಲಿ ಎಂಬ ಅಭಿಯಾನ ಸಾಮಾಜಿಕ ಜಾಲತಾಣದಲ್ಲಿ ಆರಂಭವಾಗಿದ್ದು, ಗುಬ್ಬಚ್ಚಿಯಂತಹ ಸಣ್ಣ ಪಕ್ಷಿಯ ಸಂತತಿ ಉಳಿವಿಗೆ ಜನರು ಕೈಜೋಡಿಸ ಬೇಕು ಎಂದು ಪಕ್ಷಿಪ್ರೇಮಿಗಳ ಮನವಿ ಆಗಿದೆ.
ಗುಬ್ಬಚ್ಚಿಗಳನ್ನು ಕಾಣುವುದೇ ಅಪರೂಪ. ಇತ್ತೀಚಿನ ದಿನಗಳಲ್ಲಿ ಗುಬ್ಬಚ್ಚಿ ಕಂಡು ಬರುತ್ತಿದ್ದು, ಮನೆಗೊಂದು ಗುಬ್ಬಚ್ಚಿ ಗೂಡು ಇಟ್ಟರೇ ಪಕ್ಷಿಯ ಸಂತತಿ ಉಳಿಸಿದ ಪುಣ್ಯ ಮನುಷ್ಯನಿಗೆ ಬರುತ್ತದೆ
– ಚನ್ನಕೇಶವ, ಸಾಮಾಜಿಕ ಕಾರ್ಯಕರ್ತ
-ಕೊಟ್ರೇಶ್ ಆರ್.