ಚಿಕ್ಕಮಗಳೂರು: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂಬ ಬೇಡಿಕೆಯೊಂದಿಗೆ ಸಾರಿಗೆ ನೌಕರರು ಇಂದು ಮುಷ್ಕರ ನಡೆಸುತ್ತಿದ್ದಾರೆ. ಈ ಮುಷ್ಕರದ ಬಗ್ಗೆ ಸರಿಯಾಗಿ ಮಾಹಿತಿ ಇಲ್ಲದ ಪ್ರಯಾಣಿಕರು ಮಾತ್ರ ಪರದಾಡುವಂತಾಯಿತು.
ಚಿಕ್ಕಮಗಳೂರಿನಲ್ಲೂ ಮುಷ್ಕರದ ಕಾರಣದಿಂದ ಬಸ್ ಗಳು ರಸ್ತೆಗಿಳಿದಿಲ್ಲ. ಬಸ್ ಓಡಾಟವಿಲ್ಲದ ಕಾರಣ ಬೆಳಿಗ್ಗೆಯಿಂದಲೂ ಪ್ರಯಾಣಿಕರು ಸಂಕಷ್ಟ ಅನುಭವಿಸಿದರು. ಇದರ ನಡುವೆ ಇಂದು ಚಿಕಿತ್ಸೆಗಾಗಿ ಮಂಗಳೂರಿಗೆ ತೆರಳಬೇಕಾಗಿದ್ದ ವೃದ್ಧೆಯೊಬ್ಬರು ಬಸ್ ಇಲ್ಲದ ಕಾರಣ ಬಸ್ ನಿಲ್ದಾಣದಲ್ಲೇ ಬಾಕಿಯಾದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಕಿವಿ ನೋವಿನಿಂದ ಬಳಲುತ್ತಿದ್ದ ವೃದ್ಧೆ ಇಂದು ಮಂಗಳೂರಿಗೆ ಚಿಕಿತ್ಸೆಗಾಗಿ ತೆರಳಬೇಕಾಗಿತ್ತು. ಹೀಗಾಗಿ ಇಂದು ಬೆಳಿಗ್ಗೆಯೇ ಮಗನೊಂದಿಗೆ ಬಸ್ ಏರಲು ಚಿಕ್ಕಮಗಳೂರು ಬಸ್ ನಿಲ್ದಾಣಕ್ಕೆ ಬಂದಿದ್ದರು. ಆದರೆ ಮುಷ್ಕರದಿಂದಾಗಿ ಬಸ್ ಸಿಗದೆ ಬೆಳಿಗ್ಗೆಯಿಂದ ಕುಟುಂಬ ಬಸ್ ನಿಲ್ದಾಣದಲ್ಲಿ ಕಾದು ಕುಳಿತಿದೆ.
ಇದನ್ನೂ ಓದಿ:2021: ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೂ ಮುನ್ನ ಡಿಜಿಟಲ್ ವೋಟರ್ ಐಡಿ?
ಹಸಿದು ನಿತ್ರಾಣಾದ ತಾಯಿ-ಮಗು
ಇನ್ನೊಂದೆಡೆ ಅದೇ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಹಸಿವಿನಿಂದ ನಿತ್ರಾಣಗೊಂಡಿದ್ದ ತಾಯಿ- ಮಗುವಿಗೆ ಮುಷ್ಕರದ ನಡುವೆಯೂ ಉಪಹಾರ ನೀಡಿದ ಸಾರಿಗೆ ಸಿಬ್ಬಂದಿ ಮಾನವೀಯತೆ ಮೆರೆದರು.
ಇವರು ತುಮಕೂರು ಮೂಲದವರಾಗಿದ್ದು, ಮಹಿಳೆಯ ಸಹೋದರ ತಾಯಿ, ಮಗುವನ್ನು ಬಸ್ ನಿಲ್ದಾಣದಲ್ಲೇ ಬಿಟ್ಟು ಹೋಗಿದ್ದಾರೆ. ಪುಟ್ಟ ಮಗುವಿನೊಂದಿಗೆ ಮಹಿಳೆ ಸಹೋದರನ ದಾರಿ ಕಾಯುತ್ತಿದ್ದು, ಹಸಿವಿನಿಂದ ಬಳಲಿದ್ದರು. ಇದನ್ನು ಗಮನಿಸಿದ ಸಾರಿಗೆ ಸಿಬ್ಬಂದಿ ಉಪಹಾರ ನೀಡಿದರು