Advertisement

ಸ್ವಾತಂತ್ರ್ಯೋತ್ಸವಕ್ಕೆ ಹಳೆ ಸಮವಸ್ತ್ರವೇ ಗತಿ!

03:23 AM Jul 22, 2019 | Team Udayavani |

ಸುಬ್ರಹ್ಮಣ್ಯ: ಹೊಸ ಸಮವಸ್ತ್ರ ಧರಿಸಿ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸ ಬೇಕೆಂಬ ಸರಕಾರಿ ಶಾಲಾ ವಿದ್ಯಾರ್ಥಿಗಳ ಆಸೆ ಈಡೇ ರುವ ಲಕ್ಷಣಗಳು ಕಾಣಿಸುತ್ತಿಲ್ಲ. ಸಮವಸ್ತ್ರ ಶಿಕ್ಷಣ ಇಲಾಖೆಗೇ ಬಂದಿಲ್ಲ, ಮಕ್ಕಳಿಗೂ ವಿತರಣೆಯಾಗಿಲ್ಲ. ಹೀಗಾಗಿ ಆ.15ಕ್ಕೆ ಮಕ್ಕಳಿಗೆ ಹಳೆ ಬಟ್ಟೆಯೇ ಗತಿ!

Advertisement

ಎಲ್ಲ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಜೂ.1ರಂದೇ ಆರಂಭಗೊಂಡಿವೆ. ಆದರೆ ತಿಂಗಳು 2 ಕಳೆದರೂ ಸಮವಸ್ತ್ರ ಮಕ್ಕಳ ಕೈಸೇರಿಲ್ಲ.

ಸರಕಾರ ಸರಕಾರಿ ಶಾಲಾ ಮಕ್ಕಳಿಗೆ ವರ್ಷಕ್ಕೆ ಎರಡುಜತೆ ಸಮವಸ್ತ್ರ ನೀಡುವ ನಿರ್ಧಾರವನ್ನು ಕಳೆದ ವರ್ಷ ಕೈಗೊಂಡಿತ್ತು. ಆದರೆ ಕಳೆದ ವರ್ಷ ಸಾಕ್ಸ್‌, ಶೂ ಜತೆಗೆ ಸಿಕ್ಕಿದ್ದು ಒಂದೇ ಸೆಟ್ ಸಮವಸ್ತ್ರ.

ಹಿಂದಿನ ವರ್ಷಗಳಲ್ಲಿ ಶಾಲಾಭಿವೃದ್ಧಿ ಸಮಿತಿ ಮತ್ತು ಮೇಲುಸ್ತುವಾರಿ ಸಮಿತಿಗಳ ಮೂಲಕ ಬಟ್ಟೆ ಖರೀದಿಸಿ ಮಕ್ಕಳ ಅಳತೆಗೆ ಅನುಗುಣವಾಗಿ ಹೊಲಿಸಿ, ವಿತರಿಸಲಾಗುತ್ತಿತ್ತು. ಶಾಲೆಯಿಂದ ನೀಡಿದ ಆವಶ್ಯಕತೆ ಪಟ್ಟಿ ಆಧರಿಸಿ ಸರಕಾರ ಅನುದಾನವನ್ನು ಎಸ್‌ಡಿಎಂಸಿ ಖಾತೆಗೆ ಜಮೆ ಮಾಡುತ್ತಿತ್ತು. ಆದರೆ ಕೆಲವು ಸಂದರ್ಭಗಳಲ್ಲಿ ಇದು ಸಾಕಾಗದೆ ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು, ಊರ ದಾನಿಗಳು ಹಣ ಭರಿಸಿ ಬಟ್ಟೆಯನ್ನು ಹೊಲಿಸಿ ಮಕ್ಕಳಿಗೆ ಕೊಟ್ಟ ಉದಾಹರಣೆಗಳು ಎಷ್ಟೋ ಶಾಲೆಗಳಲ್ಲಿವೆ.

ಬಳಿಕ ಸಮವಸ್ತ್ರ ವಿತರಣೆಗೆ ಸಂಬಂಧಿಸಿ ಸರಕಾರದ ಮಟ್ಟದಲ್ಲಿ ಚರ್ಚೆಗಳು ನಡೆದಿದ್ದವು. ಬೆಳಗಾವಿ ಅಧಿವೇಶನದಲ್ಲಿ ಮಂಡನೆಯಾದ ಪ್ರಸ್ತಾವದಂತೆ ಶಿಕ್ಷಣ ಇಲಾಖೆಯ ಮೂಲಕವೇ ಸಮವಸ್ತ್ರ ಖರೀದಿಸಿ ವಿತರಣೆಗೆ ಕ್ರಮ ಕೈಗೊಳ್ಳಲು ಸರಕಾರ ಮುಂದಾಗಿ, ರಾಜ್ಯ ಮಟ್ಟದಲ್ಲಿ ಟೆಂಡರ್‌ ಪ್ರಕ್ರಿಯೆ ನಡೆಸಲು ನಿರ್ಧರಿಸಿತ್ತು. ಇದು ಇನ್ನೂ ನಡೆಯದಿರುವುದು ವಿಳಂಬಕ್ಕೆ ಕಾರಣ. ಜತೆಗೆ ಹಣಕಾಸಿನ ಕೊರತೆಯೂ ಇದೆ ಎನ್ನಲಾಗುತ್ತಿದೆ.

Advertisement

ಮಕ್ಕಳು ಸಮವಸ್ತ್ರ ಕುರಿತು ಕೇಳುವ ಪ್ರಶ್ನೆಗೆ ಉತ್ತರಿಸಲಾಗದೆ ಮುಜುಗರ ಅನುಭವಿಸು ವಂತಾಗಿದೆ. ಪುಣಾಣಿ ಕಂಗಳು ಇಂದು ಬರುತ್ತದೆ, ನಾಳೆ ಬರುತ್ತದೆ ಎಂದು ಕಾಯುತ್ತಿವೆ.

ಶಾಲಾ ಮಕ್ಕಳಿಗೆ ಶೂ,ಸಾಕ್ಸ್‌ ವಿತರಣೆ ಸಂಬಂಧ ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿರುವ ಕುರಿತು ಕಮಿಷನರ್‌ ಅವರು ಮಾಹಿತಿ ನೀಡಿದ್ದಾರೆ. ಶೀಘ್ರ ವಿತರಣೆಯಾಗುವ ವಿಶ್ವಾಸವಿದೆ. ಸಮವಸ್ತ್ರ ರಾಜ್ಯ ಮಟ್ಟದಲ್ಲಿ ಟೆಂಡರು ಪ್ರಕ್ರಿಯೆ ನಡೆದ ಬಳಿಕ ವಿತರಣೆಯಾಗಲಿದೆ.
-ಎಸ್‌.ಪಿ. ಮಹಾದೇವ ಕ್ಷೇತ್ರ ಶಿಕ್ಷಣಾಧಿಕಾರಿ. ಸುಳ್ಯ

ಉಡುಪಿ ಜಿಲ್ಲೆಯಲ್ಲಿ ಶಾಲಾ ಮಕ್ಕಳ ಸಮವಸ್ತ್ರ ಬಂದಿಲ್ಲ. ಶೂ, ಸಾಕ್ಸ್‌ ವಿತರಣೆ ಸಂಬಂಧಿಸಿದಂತೆ ಶಾಲೆಯ ಎಸ್‌ಡಿಎಂಸಿ ಮಂಡಳಿಗೆ ಹಣ ಹಾಕಲಾಗುತ್ತದೆ. ಈಗಾಗಲೇ ಟೆಂಡರ್‌ ಪ್ರಕ್ರಿಯೆ ಪ್ರಾರಂಭವಾಗಿದೆ.
-ಶೇಷಶಯನ ಕಾರಿಂಜ ಡಿಡಿಪಿಐ ಉಡುಪಿ ಜಿಲ್ಲೆ

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next