Advertisement

ಬದಲಾದ ದೊರೆ ಎದುರು ಹಳೇ ಸಮಸ್ಯೆಗಳು

06:51 PM Jul 29, 2021 | Team Udayavani |

ರಾಯಚೂರು: ರಾಜ್ಯದಲ್ಲಿ ಮತ್ತೂಮ್ಮೆ ಮುಖ್ಯಮಂತ್ರಿ ಬದಲಾಗಿದ್ದಾರೆ. ಯಾರು ಕುರ್ಚಿ ಏರಿದರೂ, ಯಾವ ಪಕ್ಷ ಆಡಳಿತಕ್ಕೆ ಬಂದರೂ ಜಿಲ್ಲೆಯ ಸಮಸ್ಯೆಗಳಿಗೆ ಮುಕ್ತಿ ಸಿಗುವುದೇ ಎಂದು ಪ್ರಶ್ನಿಸುವಂತಾಗಿದೆ ಜಿಲ್ಲೆ ಜನರ ಸ್ಥಿತಿ. ಬದಲಾದ ನಾಡ ದೊರೆಯ ಎದುರು ಮತ್ತದೆ ಹಳೇ ಸಮಸ್ಯೆಗಳೇ ವಿಜೃಂಭಿಸುತ್ತಿದ್ದು, ಇನ್ನಾದರೂ ಮುಕ್ತಿ ಕಾಣಿಸಬೇಕಿದೆ.

Advertisement

ಗೃಹ ಸಚಿವರಾಗಿ ಈಚೆಗೆ ಜಿಲ್ಲೆಗೆ ಆಗಮಿಸಿದ್ದ ಹೊಸ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಜಿಲ್ಲೆಯ ಗಂಭೀರ ಸಮಸ್ಯೆಗಳ ಅರಿವಿದೆಯೋ ಇಲ್ಲವೋ. ಆದರೆ, ಸಿಎಂ ಹುದ್ದೆ ಅಲಂಕರಿಸುವ ಅವರು ಮಾತ್ರ ಜಿಲ್ಲೆಯ ಬವಣೆ ಅರಿತು ನೀಗಿಸಲು ಶ್ರಮಿಸಬೇಕಿದೆ.

ಜಿಲ್ಲೆಯಲ್ಲಿ ಕೃಷ್ಣೆ, ತುಂಗಭದ್ರೆ ಉಕ್ಕಿ ಹರಿಯುವಾಗಲೇ ಹೊಸ ಸಿಎಂ ಅಧಿಕಾರ ಸ್ವೀಕರಿಸಿದ್ದಾರೆ. ಆದರೆ, ಉಭಯ ನದಿಗಳಿದ್ದರೂ ಕೊನೆ ಭಾಗದ ಕೃಷಿ ಜಮೀನಿಗೆ ನೀರು ಸಿಗದೇ ರೈತರು ಪರದಾಡುವುದು ಇಂದಿಗೂ ಇದೆ. ಅಲ್ಲದೇ, ಬೇಸಿಗೆಯಲ್ಲಿ ಕುಡಿವ ನೀರಿಗೆ ಮಾತ್ರ ತತ್ವಾರ ತಪ್ಪುತ್ತಿಲ್ಲ. ಒಮ್ಮೆ ಅಧಿ ಕಾರ ಕೊಟ್ಟರೆ ಜಿಲ್ಲೆಯ ನೀರಾವರಿ ಸಮಸ್ಯೆಗಳನ್ನೆಲ್ಲ ಬಗೆ ಹರಿಸುವುದಾಗಿ ಹೇಳಿದ್ದ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಯಾವೊಂದು ಯೋಜನೆ ನೀಡಲಿಲ್ಲ. ಅವರ ಬಳಿಕ ಅ ಧಿಕಾರ ಹಿಡಿದ ಬಿಎಸ್‌ವೈ ಕೂಡ ನವಲಿ ಬಳಿ ಸಮಾನಾಂತರ ಜಲಾಶಯಕ್ಕೆ ಡಿಪಿಆರ್‌ ಮಾಡಲು ಅನುದಾನ ಮೀಸಲಿಟ್ಟಿದ್ದು ಬಿಟ್ಟರೆ ಜಿಲ್ಲೆಯ ನೀರಾವರಿ
ವಲಯಕ್ಕೆ ಹೇಳಿಕೊಳ್ಳುವ ಕೊಡುಗೆ ಸಿಗಲಿಲ್ಲ.

ಟಿಎಲ್‌ಬಿಸಿ ಮತ್ತು ಎನ್‌ಆರ್‌ಬಿಸಿ ಟೆಲೆಂಡ್‌ ರೈತರಿಗೆ ಇವು ಸಂಕಷ್ಟ ಕಾಲ. ಉಭಯ ಜಲಾಶಯಗಳಲ್ಲಿ ನೀರಿದ್ದರೂ ರೈತರ ಬೆಳೆಗೆ ನೀರು ಲಭ್ಯವಾಗುವುದಿಲ್ಲ. ಕಾಲುವೆಗೆ ನೀರು ಬಿಟ್ಟರೂ ನೀರಳ್ಳರ ಹಾವಳಿಯಿಂದ ಕೆಳ ಭಾಗದ ರೈತರು ನಷ್ಟ ಎದುರಿಸುವಂತಾಗಿದೆ. ಇದಕ್ಕೆ ಜಿಲ್ಲಾಡಳಿತ, ಜನಪ್ರತಿನಿಧಿ ಗಳ ವೈಫಲ್ಯ ಕಾರಣವಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿ ಮಹತ್ವದ ನಿರ್ಧಾರ ಕೈಗೊಳ್ಳಬೇಕಿದೆ. ಐಸಿಸಿ ಸಭೆಯಲ್ಲಿ ಕೊನೆ ಭಾಗದ ರೈತರ ಸಮಸ್ಯೆ ಬಗ್ಗೆ ಕೇಳುವವರೇ ಇಲ್ಲ ಎನ್ನುವಂತಾಗಿದೆ.

ಅದರ ಜತೆಗೆ ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಳ ಸೇರಿದಂತೆ ಜಿಲ್ಲೆಯಲ್ಲಿ ಸಾಕಷ್ಟು ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದಿವೆ. ಅದರಲ್ಲೂ ಮಸ್ಕಿ ಉಪ ಚುನಾವಣೆ ವೇಳೆ ಎನ್‌ಆರ್‌ಬಿಸಿ 5ಎ ವಿಸ್ತರಣಾ ಕಾಲುವೆ ದೊಡ್ಡ ಸುದ್ದಿಯನ್ನೇ ಮಾಡಿತ್ತು. ಆದರೆ, ರಾಜ್ಯ ಸರ್ಕಾರ ಈ ಯೋಜನೆ ಕೈ ಬಿಟ್ಟಂತೆ ಕಾಣುತ್ತಿದ್ದು, ಪರ್ಯಾಯ ವ್ಯವಸ್ಥೆಗೆ ಮುಂದಾಗಬೇಕಿದೆ. ಕಾಲುವೆಗಳ ಆಧು ನೀಕರಣ, ನಿರ್ವಹಣೆ ನೆಪದಲ್ಲಿ ನಡೆಯುವ ಅಕ್ರಮಗಳಿಗೂ ಕಡಿವಾಣ ಬೀಳಬೇಕಿದೆ. ಹಾಳಾಗುತ್ತಿದೆ ಒಪೆಕ್‌: ಕೋಟ್ಯಂತರ ವೆಚ್ಚದಲ್ಲಿ ನಿರ್ಮಿಸಿದ ಒಪೆಕ್‌ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ಈಗ ಕೋವಿಡ್‌ ಕೇರ್‌ ಸೆಂಟರ್‌ ಆಗಿ ಪರಿವರ್ತನೆಗೊಂಡಿದೆ. ಕೋಟ್ಯಂತರ ಮೌಲ್ಯದ ಯಂತ್ರೋಪಕರಣಗಳಿದ್ದರೂ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ.

Advertisement

ಸರ್ಕಾರ ಅಗತ್ಯ ಸಿಬ್ಬಂದಿ, ಸೂಕ್ತ ಅನುದಾನ ನೀಡಿ ಒಪೆಕ್‌ ಆಸ್ಪತ್ರೆಯನ್ನು ಸ್ವಾಯತ್ತ ಸಂಸ್ಥೆಯನ್ನಾಗಿಸಬೇಕಿದೆ. ರಾಯಚೂರು ಪ್ರತ್ಯೇಕ ವಿವಿ ಕಾರ್ಯಾರಂಭಿಸಿದ್ದು, ಸೂಕ್ತ ಅನುದಾನ ನೀಡಬೇಕಿದೆ. ಮಸ್ಕಿ, ಸಿರವಾರ ತಾಲೂಕುಗಳಿಗೆ ಅನುದಾನದ ಕೊರತೆಯಿಂದ ಕನಿಷ್ಟ ಸೌಲಭ್ಯಗಳಿಲ್ಲದೇ ಆಡಳಿತ ನಡೆಸುವಂತಾಗಿದೆ. ಸಾಕಷ್ಟು ಇಲಾಖೆಗಳಿಗೆ ಸ್ವಂತ ಕಚೇರಿಗಳಿಲ್ಲ.

ಪ್ರವಾಸೋದ್ಯಮಕ್ಕೆ ನೆರವು ಬೇಕು
ಜಿಲ್ಲೆಯಲ್ಲಿ ಸುಂದರ ಪ್ರವಾಸಿ ತಾಣಗಳಿದ್ದರೂ ಪ್ರವಾಸೋದ್ಯಮಕ್ಕೆ ಉತ್ತೇಜನವೇ ಇಲ್ಲದಾಗಿದೆ. ಐತಿಹಾಸಿಕ ತಾಣಗಳು ಸಂಪೂರ್ಣ ನಿರ್ಲಕ್ಷ್ಯಕ್ಕೆ ತುತ್ತಾಗಿವೆ. ಪ್ರವಾಸಿ ತಾಣಗಳಲ್ಲಿ ಮೂಲ ಸೌಲಭ್ಯಗಳಿಲ್ಲ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ವೃದ್ಧಿಸುವ ನಿಟ್ಟಿನಲ್ಲಿ ಸೂಕ್ತ ವಿಶೇಷ ಒತ್ತು ನೀಡಬೇಕಿದೆ.

371 ಜೆ ಸಮರ್ಪಕ ಅನುಷ್ಠಾನ
ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಬಿ.ಎಸ್‌. ಯಡಿಯೂರಪ್ಪನವರ ಕನಸಾಗಿತ್ತು. ಅವರ ಉತ್ತರಾಧಿಕಾರಿ ಸ್ಥಾನ ಹೊತ್ತ ನೂತನ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಈ ಭಾಗದ ಕಲ್ಯಾಣಕ್ಕೆ ಒತ್ತು ನೀಡಬೇಕಿದೆ. ಮುಖ್ಯವಾಗಿ 371 ಜೆ ಸಮರ್ಪಕ ಅನುಷ್ಠಾನ, ಖಾಲಿ ಇರುವ ಸಾವಿರಾರು ಹುದ್ದೆ ಭರ್ತಿಗೆ ಒತ್ತು ನೀಡಬೇಕಿದೆ.

ಕೈಗಾರಿಕೆ ಸ್ಥಾಪನೆಗೆ ಸ್ಥಳಾಭಾವ
ಪ್ರಸ್ತುತ ಜಿಲ್ಲೆಯಲ್ಲಿ ಹೊಸ ಕೈಗಾರಿಕೆ ಸ್ಥಾಪಿಸಲು ಸ್ಥಳವೇ ಸಿಗುತ್ತಿಲ್ಲ. ಹೀಗಾಗಿ 3700 ಎಕರೆ ಭೂ ಸ್ವಾ ಧೀನಕ್ಕೆ ಅನುದಾನ ಮೀಸಲಿಡುವಂತೆ ಕೈಗಾರಿಕೋದ್ಯಮಿಗಳ ಸಂಘ ಪ್ರಸ್ತಾವನೆ ನೀಡಿದ್ದು, ಸರ್ಕಾರ ಪರಿಗಣಿಸುತ್ತಿಲ್ಲ. ಜಿಲ್ಲೆಯಲ್ಲಿ ಭತ್ತ, ಹತ್ತಿ ಹೆಚ್ಚಾಗಿ ಬೆಳೆಯುತ್ತಿದ್ದು, ಕಾಟನ್‌ ಅಥವಾ ರೈಸ್‌ ಪಾರ್ಕ್‌ ನಿರ್ಮಾಣದಂತ ಬೇಡಿಕೆಗಳು ಸರ್ಕಾರದ ಎದುರಿವೆ. ಈ ನಿಟ್ಟಿನಲ್ಲಿ ಸಿಎಂ ಯೋಚಿಸಬೇಕಿದೆ.

*ಸಿದ್ದಯ್ಯಸ್ವಾಮಿ ಕುಕುನೂರು

Advertisement

Udayavani is now on Telegram. Click here to join our channel and stay updated with the latest news.

Next