ತುಮಕೂರು: ಭಕ್ತರ ಪಾಲಿನ ನಡೆದಾಡುವ ದೇವರಾದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಇಲ್ಲದ ಶ್ರೀಕ್ಷೇತ್ರ ಸಿದ್ಧಗಂಗಾ ಮಠದ ಹಳೇಯ ಮಠದಲ್ಲಿ ಬುಧವಾರ ನೀರವ ಮೌನ ಅಡಗಿತ್ತು. ಸದಾ ಭಕ್ತಸಮೂಹದಿಂದ ತುಂಬಿಹೋಗುತ್ತಿದ್ದ ಶ್ರೀಮಠದಲ್ಲಿ ನಡೆದಾಡುವ ದೇವರು ವಾಸ್ತವ್ಯ ಹೂಡಿದ್ದರು.
ಇವರ ಪಾದ ಮುಟ್ಟಿ ನಮಸ್ಕರಿಸಿಕೊಂಡು ಹೋಗಲು ಸಾಲುಗಟ್ಟಿ ನಿಲ್ಲುತ್ತಿದ್ದ ಭಕ್ತರು ಹಳೆಯ ಮಠದಲ್ಲಿ ಶ್ರೀಗಳು ಕುಳಿತುಕೊಳ್ಳುತ್ತಿದ್ದ ಪೀಠದಲ್ಲಿ ಶ್ರೀಗಳು ಇಲ್ಲದೇ ಇರುವುದನ್ನು ಕಂಡು ಭಕ್ತರು ಕಂಬನಿ ಮಿಡಿದರು.
ತಪಸ್ಸಿನ ಶಕ್ತಿ: ಕಳೆದ 88 ವರ್ಷಗಳ ಕಾಲ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರು ಶ್ರೀಮಠವನ್ನು ಮುನ್ನಡೆಸುತ್ತಿದ್ದು, ಈ ಹಳೇ ಮಠದಿಂದಲೇ. ಎಷ್ಟೇ ಆಧುನಿಕತೆ ಬೆಳೆದರೂ ಶ್ರೀಗಳು ಹಳೆಯ ಮಠವನ್ನು ಬಿಟ್ಟು ಬೇರೆ ಕಡೆ ಇದ್ದವರಲ್ಲ. ಸುಮಾರು 800 ವರ್ಷಗಳ ಇತಿಹಾಸ ಇರುವ ಶ್ರೀ ಮಠದಲ್ಲಿ ಈ ಹಿಂದಿನ ಹಿರಿಯ ಶ್ರೀಗಳು ಇದೇ ಮಠದಲ್ಲಿ ಇದ್ದರು. ಶ್ರೀ ಗೋಸಲ ಸಿದ್ಧೇಶ್ವರರ ಕಾಲದಲ್ಲಿ ಕಟ್ಟಿದ್ದ ಈ ಹಳೇಮಠದಲ್ಲಿ ಅನೇಕ ಶ್ರೀಗಳು ತಮ್ಮ ತಪಸ್ಸಿನ ಶಕ್ತಿಯನ್ನು ಮಠದಲ್ಲಿ ಬಿಟ್ಟಿದ್ದಾರೆ.
ಗೋಸಲ ಸಿದ್ಧಲಿಂಗೇಶ್ವರರು, ಮರುಳ ಸಿದ್ಧೇಶ್ವರರು, ಅಟವಿ ಶ್ರೀಗಳು, ಉದ್ಧಾನ ಶಿವಯೋಗಿಗಳು ಇದ್ದ ಹಳೆಯ ಮಠದಲ್ಲಿಯೇ ಡಾ. ಶ್ರೀ ಶಿವಕುಮಾರ ಸ್ವಾಮಿಗಳು ಇದ್ದು, ತಮ್ಮ ಇಷ್ಟಲಿಂಗ ಪೂಜೆ ನೆರವೇರಿಸಿ, ತಮ್ಮ ತಪಸ್ಸಿನ ಶಕ್ತಿ ಮಠದಲ್ಲಿದೆ ಎನ್ನುವ ಭಾವನೆ ಭಕ್ತರಲ್ಲಿದೆ. ಆದರೆ, ಈಗ ಶ್ರೀಗಳು ಇಲ್ಲದ ಮಠದಲ್ಲಿ ನೀರವ ಮೌನ ಅಡಗಿದೆ.
ಶ್ರೀಗಳು ಶಿವಪೂಜೆ ಮಾಡುತ್ತಿದ್ದ ಸ್ಥಳ, ಶ್ರೀಗಳ ವಿಶ್ರಾಂತಿ ಸ್ಥಳ, ಶ್ರೀಗಳು ಆಶೀರ್ವಾದ ಮಾಡುತ್ತಿದ್ದ ಪೀಠದಲ್ಲಿ ಶ್ರೀಗಳಿಲ್ಲದೇ ಭಕ್ತರಿಗೆ ನಿರಾಶೆಯಾಗಿದೆ. ಹಲವು ಭಕ್ತರು ಪೀಠದ ಮುಂದೆ ನಿಂತು ಕಣ್ಣೀರು ಹಾಕುತ್ತಿದ್ದ ದೃಶ್ಯ ಕಂಡುಬಂದಿತ್ತು.