ಸಾಮಾನ್ಯವಾಗಿ ಸಿನಿಮಾಗಳ ಬಿಡುಗಡೆಯ ಸಂದರ್ಭದಲ್ಲಿ ಥಿಯೇಟರ್‌ಗಳ ಮುಂದೆ ಆ ಸಿನಿಮಾಗಳ ಹೀರೋ, ಹೀರೋಯಿನ್, ಮುಖ್ಯ ಕಲಾವಿದರ ದೊಡ್ಡ ದೊಡ್ಡ ಕಟೌಟ್ ಗಳನ್ನು, ಆ ಕಟೌಟ್‌ಗಳಿಗೆ ಬಾರೀ ಗಾತ್ರದ ಹೂವಿನ ಹಾರಗಳನ್ನು ಹಾಕುವುದನ್ನು ನೀವು ನೋಡಿರುತ್ತೀರಿ. ಆದರೆ ಈ ವಾರ ಬಿಡುಗಡೆಯಾಗುತ್ತಿರುವ “ಓಲ್ಡ್ ಮಾಂಕ್’ ಸಿನಿಮಾ ಮಾತ್ರ ಥಿಯೇಟರ್‌ಗಳ ಮುಂದೆ ಹೀರೋ, ಹೀರೋಯಿನ್, ಆರ್ಟಿಸ್ಟ್‌ಗಳ ಬೃಹತ್ ಕಟೌಟ್ ಬದಲಿಗೆ ಫ್ಯಾನ್ಸ್ ಕಟೌಟ್ ನಿಲ್ಲಿಸುವ ಮೂಲಕ ಹೊಸ ಪ್ರಯೋಗಕ್ಕೆ ನಾಂದಿ ಹಾಡಿದೆ.
ಹೌದು, ಇದೇ ಫೆ. 25ಕ್ಕೆ ಶ್ರೀನಿ, ಅದಿತಿ ಪ್ರಭುದೇವ ಜೋಡಿಯಾಗಿ ಅಭಿನಯಿಸಿರುವ “ಓಲ್ಡ್ ಮಾಂಕ್’ ಚಿತ್ರ ರಾಜ್ಯಾದ್ಯಂತ ಸುಮಾರು 150ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ತೆರೆ ಕಾಣುತ್ತಿದೆ. ಕಳೆದ ಒಂದು ತಿಂಗಳಿನಿಂದ ರಾಜ್ಯಾದ್ಯಂತ ವಿಭಿನ್ನ ರೀತಿಯಲ್ಲಿ ಪ್ರಚಾರ ಕಾರ್ಯ ನಡೆಸುವ ಮೂಲಕ ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿರುವ “ಓಲ್ಡ್ ಮಾಂಕ್’ ಚಿತ್ರತಂಡ, ಇದೀಗ ಸಿನಿಮಾ ಬಿಡುಗಡೆಯಾಗುತ್ತಿರುವ ರಾಜ್ಯದ ಪ್ರಮುಖ ಥಿಯೇಟರ್‌ಗಳ ಮುಂದೆ ಅಭಿಮಾನಿಗಳ (ಫ್ಯಾನ್ಸ್) ಕಟೌಟ್ ನಿಲ್ಲಿಸುತ್ತಿದೆ.
ಅಂದಹಾಗೆ, ಇಂಥದ್ದೊಂದು ಫ್ಯಾನ್ಸ್ ಕಟೌಟ್ ನಿಲ್ಲಿಸುತ್ತಿರುವುದರ ಬಗ್ಗೆ ಮಾತನಾಡುವ “ಓಲ್ಡ್ ಮಾಂಕ್’ ನಾಯಕ ಕಂ ನಿರ್ದೇಶಕ ಶ್ರೀನಿ, “ಯಾವುದೇ ಸಿನಿಮಾದ ರಿಲೀಸ್ ಟೈಮಲ್ಲಿ, ಸ್ಟಾರ್, ಆ ಸಿನಿಮಾದ ಹೀರೋ, ಹೀರೋಯಿನ್ಸ್ ಕಟೌಟ್ ನಿಲ್ಲಿಸೋದು ಮಾಮೂಲಿ. ಸ್ಟಾರ್ ಹೀರೋ, ಹೀರೋಯಿನ್ಸ್‌ಗಳ ಫ್ಯಾನ್ಸ್ ಗಳನ್ನ ಥಿಯೇಟರ್ ಗಳತ್ತ ಸೆಳೆಯುವ ಸಲುವಾಗಿ ಎಲ್ಲರೂ ಈ ಥರ ಮಾಡ್ತಾರೆ.
ಆದ್ರೆ, ಒಂದು ಸಿನಿಮಾದ ಗೆಲ್ಲಿಸುವುದು, ಆ ಸಿನಿಮಾ ಮೂಲಕ ಒಬ್ಬ ಹೀರೋ, ಹೀರೋಯಿನ್‌ನ ಸೃಷ್ಟಿ ಮಾಡೋದು, ಅವರನ್ನ ಸ್ಟಾರ್ ಮಾಡೋದು ನಿಜವಾದ ಫ್ಯಾನ್ಸ್. ನಮ್ಮ ಪ್ರಕಾರ ಫ್ಯಾನ್ಸ್ ಗಳೇ ನಿಜವಾದ ಹೀರೋಗಳು, ನಿಜವಾದ ಸ್ಟಾರ್! ಹಾಗಾಗಿ ಫ್ಯಾನ್ಸ್ ಗಳನ್ನು ನೆನೆದು, ಅವರಿಗೆ ಸಣ್ಣದೊಂದು ಗೌರವ ನೀಡುವ ಸಲುವಾಗಿ ಇಂಥದ್ದೊಂದು ಫ್ಯಾನ್ಸ್ ಕಟೌಟ್ ಮಾಡಿ ಥಿಯೇಟರ್‌ಗಳ ಮುಂದೆ ನಿಲ್ಲಿಸಿದ್ದೇವೆ. ಬಹುಶಃ ಚಿತ್ರರಂಗದಲ್ಲೇ ಇದೊಂದು ಮೊದಲ ಪ್ರಯೋಗ’ ಎನ್ನುತ್ತಾರೆ.
ಒಟ್ಟಾರೆ ಈಗಾಗಲೇ ಟೈಟಲ್, ಟೀಸರ್, ಹಾಡುಗಳ ಮೂಲಕ ನೋಡುಗರ ಗಮನ ಸೆಳೆಯಲು ಯಶಸ್ವಿಯಾಗಿರುವ “ಓಲ್ಡ್ ಮಾಂಕ್’ ಈಗ ಫ್ಯಾನ್ಸ್ ಕಟೌಟ್ ಮೂಲಕ ಸುದ್ದಿಯಾಗುತ್ತಿದೆ