Advertisement
ಮ್ಯೂಚುವಲ್ ಫಂಡ್-ಇದನ್ನು ಕನ್ನಡದಲ್ಲಿ ಪರಸ್ಪರ ನಿಧಿ ಎನ್ನುತ್ತಾರೆ. ಹೆಸರೇ ಹೇಳುವಂತೆ, ಇದು ಪರಸ್ಪರರು ಒಪ್ಪಂದದ ಮೇರೆಗೆ ನಿಧಿಯನ್ನು ನಿರ್ವಹಣೆ ಮಾಡುವ ಒಂದು ವಿಧಾನ. ಮ್ಯೂಚುವಲ್ ಫಂಡ್ ಉದ್ಯಮ ಈಗ ಎಷ್ಟು ತೀವ್ರವಾಗಿ, ವಿಸ್ತಾರವಾಗಿ ಬೆಳೆಯುತ್ತಿದೆ ಎಂದರೆ, ಇದನ್ನು ಬಿಟ್ಟು ಸಾಮಾನ್ಯ ಹೂಡಿಕೆದಾರರಿಗೆ ಬೇರೆ ಆಯ್ಕೆ ಅಥವಾ ಅವಕಾಶ ಇಲ್ಲ ಎನ್ನುವ ಹಾಗೆ.
Related Articles
Advertisement
ಭಾರತದಲ್ಲಿ ಜನ ಸಾಮಾನ್ಯರು ಹೂಡಿಕೆ ಮಾಡಬೇಕಾದರೆ ಬ್ಯಾಂಕ್ ಬಿಟ್ಟರೆ ಅತ್ಯಂತ ಭರವಸೆಯ ಸಂಸ್ಥೆ ಇದಾಗಿತ್ತು. 1963ರಲ್ಲಿ ಅಸ್ತಿತ್ವಕ್ಕೆ ಬಂದ ಈ ಸಂಸ್ಥೆಯ ಯುಎಸ್ 64 ಜನಪ್ರಿಯ ಹೂಡಿಕೆಯ ಯೋಜನೆಯ ಹೆಸರಾಗಿತ್ತು. ಎಲ್ಲವೂ ಸರಿಇತ್ತು. ಬೇಕಾದಷ್ಟು ಲಾಭಾಂಶವನ್ನೂ ನೀಡಿತ್ತು. ಎಲ್ಲರಿಗೂ ಗೊತ್ತಿರುವ ಹಾಗೆ ಮ್ಯೂಚುವಲ್ ಫಂಡ್ ಸಂಸ್ಥೆಗಳು ಜನ ಸಾಮಾನ್ಯರಿಂದ ಸಂಗ್ರಹಿಸಿದ ಹಣವನ್ನು ಷೇರು ಪೇಟೆಯಲ್ಲಿ,
ಭದ್ರತಾ ಬಾಂಡ್ ಗಳಲ್ಲಿ, ಸರಕಾರಿ ಠೇವಣಿಗಳಲ್ಲಿ… ಹೀಗೆ ಹಲವು ರೀತಿಯ ಹೂಡಿಕೆಗಳಲ್ಲಿ ತೊಡಗಿಸುತ್ತವೆ. ಇದನ್ನು ನಿರ್ವಹಿಸುವುದಕ್ಕೆ ಅನೇಕ ವೃತ್ತಿಪರರು ಇರುತ್ತಾರೆ. ಉದಾಹರಣೆಗೆ, ಯಾರೋ ಒಬ್ಬ ವ್ಯಕ್ತಿ ನಿವೃತ್ತರಾದರೆ ಅವರ ನಿವೃತ್ತಿಯ ಸಂದರ್ಭದಲ್ಲಿ ಬರುವ ದೊಡ್ಡಮೊತ್ತವನ್ನು ಎಲ್ಲಿ ಇಡಬೇಕು ಎನ್ನುವ ಆ ಕಾಲದ ಪ್ರಶ್ನೆಗೆ ಯುಟಿಐ ಇದೆಯಲ್ಲಾ ಎನ್ನುವಷ್ಟರ ಮಟ್ಟಿಗೆ ಆ ಯೋಜನೆ ಜನಪ್ರಿಯವಾಗಿತ್ತು.
ದೇಶಾದ್ಯಂತ 75 ಸಾವಿರ ಏಜೆಂಟರ ಮೂಲಕ 54 ಶಾಖೆಗಳು ಹಾಗೂ 254 ಜಿಲ್ಲಾ ಪ್ರತಿನಿಧಿಗಳನ್ನು ಹೊಂದಿದ್ದ ಯುಟಿಐ, ಆರಂಭದಲ್ಲಿ ಉತ್ತಮ ಲಾಭಗಳನ್ನು ಕೊಡುತ್ತಿತ್ತು. ಷೇರು ಪೇಟೆಯೂ ಸೇರಿದಂತೆ ಇತರೆಡೆಗಳಲ್ಲಿ ಹಣ ಹೂಡಿದ್ದ ಯಟಿಐ, 1998 ರಲ್ಲಿ ಷೇರು ಪೇಟೆಯ ತಳಮಳವನ್ನು ಎದುರಿಸಲು ಕಷ್ಟ ಪಡಬೇಕಾಯಿತು. ಸುಮಾರು 8,400 ಕೋಟಿ ರೂಪಾಯಿಗಳಿದ್ದ ಆಸ್ತಿ ಮೌಲ್ಯ ಇದ್ದಕ್ಕಿದ್ದಂತೆ 4,200 ಕೋಟಿಗಿಂತಲೂ ಕೆಳಗಿಳಿಯಿತು.
ಮಾಧ್ಯಮದಲ್ಲಿ ಈ ಸುದ್ದಿ ಬರುತ್ತದ್ದಂತೆ ಜನರಲ್ಲಿ ಆತಂಕ ಶುರುವಾಗಿ ಪ್ರತಿಯೊಬ್ಬರೂ ತಾವು ಹಾಕಿದ ಹಣವನ್ನು ಹಿಂಪಡೆಯುವುದಕ್ಕೆ ಮುಂದಾದರು. ಹೀಗಾದಾಗ ಹಣದ ಹರಿವಿನ ಸಮಸ್ಯೆ ಎದುರಿಸಬೇಕಾಯಿತು. ಜನ ಎಷ್ಟು ಆತಂಕಪಟ್ಟರು ಎಂದರೆ ಲಾಭದ ಮಾತು ಹಾಗಿರಲಿ ಹಾಕಿದ ಹಣ ಬಂದರೆ ಸಾಕು ಎಂದು ಯೋಚಿಸಿದರು. ಯುಎಸ್ 64 ಯೋಜನೆಯಲ್ಲಿ ಹಣ ಹಾಕಿದವರ ನೆರವಿಗೆ ನಿಂತ ಸಂಸ್ಥೆ, ಸರ್ಕಾರ ಹಲವು ಪರಿಹಾರದ ಪ್ಯಾಕೇಜ್ ಘೋಷಿಸಿತು.
ಇದೆಲ್ಲ ಯಾಕೆ ಹೇಳಿದೆ ಎಂದರೆ-ಯಾವುದೇ ಹೂಡಿಕೆ ಕಾಲಕ್ಕೆ ಬದ್ಧವಾಗಿದೆ. ಏನಾದರೂ ಏರು ಪೇರು ಆದರೂ ತಡೆದುಕೊಳ್ಳುವುದಕ್ಕೆ ಹೂಡಿಕೆದಾರ ಸಿದ್ಧ ಇರಲೇಬೇಕು. ಉತ್ತಮ ಆಡಳಿತ, ಉತ್ತಮ ಹೂಡಿಕೆ ಇದ್ದಾಗಲೂ ಯುಟಿಐ, ಷೇರು ಪೇಟೆಯ ಹೊಡೆತದಿಂದ ತತ್ತರಿಸುವ ಹಾಗಾಗಿತ್ತು. ಇದಾದನಂತರವೇ ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿ ಸಾಕಷ್ಟು, ರೀತಿ ನೀತಿಗಳನ್ನು, ನಿಯಂತ್ರಣ ವ್ಯವಸ್ಥೆಗಳನ್ನು ಬಲಪಡಿಸಲಾಯಿತು. ಈ ಮಾತುಗಳ ಹಿಂದಿರುವ ಅರ್ಥವಿಷ್ಟೇ ಮ್ಯೂಚುವಲ್ ಫಂಡ್ ಹೊಸದಲ್ಲ. ಹಳೆಯದೇ, ಆದರೆ ಈಗ ಅದು ಹೊಸ ಹೊಸ ರೀತಿಯಲ್ಲಿ, ಹೊಸ ಹೊಸ ಯೋಜನೆಗಳ ಮೂಲಕ ಬಂದಿದೆ. ಬರುತ್ತಿದೆ.