ಹುಬ್ಬಳ್ಳಿ: ಇಲ್ಲಿನ ನ್ಯೂ ಇಂಗ್ಲಿಷ್ ಶಾಲೆ ವೃತ್ತದಿಂದ ಹಳೇ ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಒಂದು ಮಗ್ಗಲಿನ ದುರಸ್ತಿಯೊಂದಿಗೆ ತ್ರಿಶಂಕು ಸ್ಥಿತಿ ಅನುಭವಿಸುತ್ತಿದ್ದು, ಸಾರ್ವಜನಿಕರಿಗೂ ಸಂಕಷ್ಟ ತಂದೊಡ್ಡಿದೆ.
ನ್ಯೂ ಇಂಗ್ಲಿಷ್ ಶಾಲೆ ವೃತ್ತದಿಂದ ಹಳೇಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ಒಂದು ಭಾಗದಲ್ಲಿ ಸಿಸಿ ರಸ್ತೆ ನಿರ್ಮಾಣವಾಗಿ ತಿಂಗಳುಗಳೇ ಗತಿಸಿದರೂ ಇನ್ನೊಂದು ಭಾಗದ ಸಿಸಿ ರಸ್ತೆ ಮಾಡದೆ ಹಾಗೇ ಬಿಡಲಾಗಿದೆ. ನ್ಯೂ ಇಂಗ್ಲಿಷ್ ಸ್ಕೂಲ್ ವೃತ್ತದಿಂದ ಕಮ್ಮಾರ ಸಾಲು ರಾಜಕಾಲುವೆ ವರೆಗೆ ಸಿಸಿ ರಸ್ತೆ ಕಾಮಗಾರಿ ಇದ್ದು, ಅದರಲ್ಲಿ ಕಳೆದ 7-8 ತಿಂಗಳ ಹಿಂದೆ ಒಂದು ಭಾಗದಲ್ಲಿ ಸಿಸಿ ರಸ್ತೆ ನಿರ್ಮಿಸಿ ಸಂಚಾರಕ್ಕೆ ಮುಕ್ತಗೊಳಿಸಿದ್ದಾರೆ.
ಆದರೆ ಇನ್ನೊಂದು ಭಾಗದಲ್ಲಿ ನಿರ್ಮಿಸಬೇಕಾದ ರಸ್ತೆಯ ಸುಳಿವೇ ಇಲ್ಲದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಒಂದು ಭಾಗಕ್ಕೆ ಬೆಣ್ಣೆ, ಇನ್ನೊಂದು ಭಾಗಕ್ಕೆ ಸುಣ್ಣು ಎನ್ನುವಂತೆ ಈ ಭಾಗದ ಕಾಮಗಾರಿಯ ಸ್ಥಿತಿ ಆಗಿದೆ. ಇದನ್ನು ನೋಡಿದರೆ ಈ ಹಿಂದೆ ಇದ್ದ ರಸ್ತೆಯೇ ಎಷ್ಟೋ ಪಾಲು ಚೆನ್ನಾಗಿತ್ತು. ಅಭಿವೃದ್ಧಿ ನೆಪದಲ್ಲಿ ಒಂದು ಭಾಗದಲ್ಲಿ ಎತ್ತರ ಇನ್ನೊಂದು ಭಾಗದಲ್ಲಿ ತಗ್ಗು ಆದಂತೆ ಇಲ್ಲಿನ ಸ್ಥಿತಿ ಆಗಿದೆ.
ಇದು ಸಿಸಿ ರಸ್ತೆ ಸ್ಥಿತಿಯಾದರೆ, ಅದರ ಮುಂದಿನ ರಸ್ತೆಯ ಸ್ಥಿತಿ ಮತ್ತೊಂದು ಕಥೆ ಹೇಳುತ್ತದೆ. ಕಸಬಾಪೇಟೆ ಪೊಲೀಸ್ ಠಾಣೆಯ ಮುಂಭಾಗದ ರಸ್ತೆ ತಗ್ಗು ದಿನ್ನೆಗಳಿಂದ ಕೂಡಿದ್ದು ಅದನ್ನು ಸರಿಪಡಿಸುವ ಸಣ್ಣ ಕೆಲಸವನ್ನೂ ಮಹಾನಗರ ಪಾಲಿಕೆಯವರು ಮಾಡಿಲ್ಲ ಎನ್ನುವುದು ಸ್ಥಳೀಯರ ಆರೋಪ. ಗುಂಡಿಗಳಿಗೆ ಯಾರೋ ಬಂದು ಕಟ್ಟಡ ತಾಜ್ಯ ಸುರಿದು ಮುಚ್ಚುತ್ತಾರೆ. ಈ ರಸ್ತೆ ಸುಧಾರಿಸುವುದಾದರೂ ಯಾವಾಗ ಎಂದು ಸ್ಥಳೀಕರು ಮಹಾನಗರ ಪಾಲಿಕೆ ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ನ್ಯೂ ಇಂಗ್ಲೀಷ್ ಸ್ಕೂಲ್ ವೃತ್ತದಿಂದ ಕಮ್ಮಾರ ಸಾಲು ದೊಡ್ಡ ನಾಲಾ ವರೆಗೆ ಒಂದು ಭಾಗದಲ್ಲಿ ಸಿಸಿ ರಸ್ತೆ ನಿರ್ಮಿಸಿದ್ದು ಇನ್ನೊಂದು ಭಾಗದಲ್ಲಿ ಹಾಗೆ ಬಿಡಲಾಗಿದೆ. ಈ ಕುರಿತು ಸಂಬಂಧಿಸಿದ ಇಲಾಖೆಯೊಂದಿಗೆ ಚರ್ಚಿಸಿ ಕೂಡಲೇ ಕಾಮಗಾರಿ ಆರಂಭಿಸುವಂತೆ ಸೂಚನೆ ನೀಡಲಾಗುವುದು. ಇನ್ನು ಹಳೇ ಹುಬ್ಬಳ್ಳಿ ಮುಖ್ಯರಸ್ತೆಗೆ ಪ್ಯಾಚ್‌ವರ್ಕ್ ಕೂಡಲೇ ಆರಂಭಿಸಲಾಗುವುದು.
ಪ್ರಸಾದ ಅಬ್ಬಯ್ಯ, ಶಾಸಕ
ಈ ರಸ್ತೆಗಳು ಅನಾಥವಾಗಿವೆಯೇ ಎಂಬುದು ತಿಳಿಯುತ್ತಿಲ್ಲ. ನ್ಯೂ ಇಂಗ್ಲಿಷ್ ಸ್ಕೂಲ್ ವೃತ್ತದಿಂದ ಕಮ್ಮಾರ ಸಾಲ ರಾಜಕಾಲುವೆವರೆಗೆ ಸಿಸಿ ರಸ್ತೆ ನಿರ್ಮಿಸಬೇಕಾಗಿದ್ದು, ಕಳೆದ 7-8 ತಿಂಗಳ ಹಿಂದೆ ಒಂದು ಭಾಗದಲ್ಲಿ ಸಿಸಿ ರಸ್ತೆ ನಿರ್ಮಿಸಿ ಇನ್ನೊಂದು ಭಾಗದಲ್ಲಿ ಹಾಗೇ ಬಿಟ್ಟಿದ್ದಾರೆ. ಈ ರಸ್ತೆ ಮಾಡುತ್ತಾರೋ ಇಲ್ಲವೋ ಎನ್ನುವುದು ಗೊತ್ತಾಗುತ್ತಿಲ್ಲ. ರಸ್ತೆಯಲ್ಲಿ ಸಂಚರಿಸುವ ನಮಗೆ ನಿತ್ಯ ಸಂಕಷ್ಟ ಎನ್ನುವಂತಾಗಿದೆ.
ಎಂ.ಎ. ಪಾಷಾ, ಕಮ್ಮಾರ ಸಾಲು ನಿವಾಸಿ
ಹಳೆಹುಬ್ಬಳ್ಳಿ ಭಾಗದ ಮುಖ್ಯರಸ್ತೆಯಾಗಿರುವ ಕಸಬಾಪೇಟೆ ಮುಖ್ಯರಸ್ತೆಯ ಗುಂಡಿಗಳನ್ನು ಕಟ್ಟಡ ತ್ಯಾಜ್ಯದಿಂದ ಮುಚ್ಚಲಾಗುತ್ತಿದೆ. ಈ ಹಿಂದೆ ಒಂದು ಬಾರಿ ಗುಂಡಿ ಮುಚ್ಚುವ ಕೆಲಸ ಮಾಡಿದ್ದರು. ಆದರೆ ಅದೆಲ್ಲವೂ ಒಂದೇ ಮಳೆಗೆ ಸಂಪೂರ್ಣವಾಗಿ ಹಾಳಾಗಿ ಹೋಯಿತು. ಈ ರಸ್ತೆ ಸುಧಾರಿಸುವುದು ಯಾವಾಗ ತಿಳಿಯದಾಗಿದೆ.
ನೂರಅಹ್ಮದ್, ಎಂ.ಡಿ. ಕಿರಾಣಿ ಅಂಗಡಿ ಮಾಲೀಕ
*ಬಸವರಾಜ ಹೂಗಾರ