Advertisement

ಹಳೇ ಬ್ಯಾಟು ಹಳೇ ಚೆಂಡು

08:04 PM Nov 15, 2019 | Lakshmi GovindaRaju |

ಹನಿಮೂನ್‌ಗೆ ಹೋದ ಶ್ರೀಕಾಂತ್‌ ವಿಶ್ವಕಪ್‌ ಗೆದ್ದ ಕಥೆ
1983ರಲ್ಲಿ ಭಾರತ ಕ್ರಿಕೆಟ್‌ ತಂಡ ವಿಶ್ವಕಪ್‌ ಗೆಲ್ಲುತ್ತದೆ ಎಂಬ ವಿಶ್ವಾಸ ಯಾರಿಗೂ ಇರಲಿಲ್ಲ. ಆಯ್ಕೆ ಸಮಿತಿಯ ಸದಸ್ಯರಿಗೆ ಬಿಡಿ, ಆಟಗಾರರಲ್ಲಿ ಕೂಡ ಯಾರಿಗೂ ನಾವು ಕಪ್‌ ಗೆಲ್ಲುತ್ತೇವೆ ಎಂಬ ನಂಬಿಕೆ ಇರಲಿಲ್ಲ. ಆದರೆ, ಒಬ್ಬ ಕಪಿಲ್‌ ದೇವ್‌ ಮಾತ್ರ, ಈ ಸಲ ಕಪ್‌ ಗೆಲ್ಲೋದು ನಾವೇ ಎಂದು ಆತ್ಮವಿಶ್ವಾಸದಿಂದ ಹೇಳುತ್ತಿದ್ದರು. ತಂಡದ ನಾಯಕ ಆಗಿರುವ ಕಾರಣಕ್ಕೆ ಇಂಥ ಸುಳ್ಳುಗಳನ್ನು ಇಷ್ಟ ಇಲ್ಲದಿದ್ದರೂ ಹೇಳಲೇಬೇಕು ಎಂದು ಜನ ಆಡಿಕೊಂಡು ನಗುತ್ತಿದ್ದರು. ತಮಾಷೆ ಕೇಳಿ, ಭಾರತ ತಂಡ ಕಪ್‌ ಗೆಲ್ಲುತ್ತದೆ ಎಂಬ ನಂಬಿಕೆ, ಅವತ್ತು ತಂಡದ ಆರಂಭಿಕ ಆಟಗಾರ ಆಗಿದ್ದ ಕೆ. ಶ್ರೀಕಾಂತ್‌ ಅವರಿಗೂ ಇರಲಿಲ್ಲ.

Advertisement

ಫೈನಲ್‌ ಪಂದ್ಯದಲ್ಲಿ ಭಾರತದ ಪರ ಹೆಚ್ಚು ರನ್‌ ಹೊಡೆದದ್ದು ( 38 ರನ್‌) ಇದೇ ಶ್ರೀಕಾಂತ್‌, ಆ ದಿನಗಳನ್ನು ನೆನಪು ಮಾಡಿಕೊಂಡು ಹೇಳುತ್ತಾರೆ. “ವಿಶ್ವ ಕ್ರಿಕೆಟ್‌ನಲ್ಲಿ ಅಸಾಮಾನ್ಯರು ಅನ್ನಿಸಿಕೊಂಡಿದ್ದ ಇಯಾನ್‌ ಬಾಥಮ್, ಡೇವಿಡ್‌ ಗೋವರ್‌, ಕ್ಲೈವ್‌ ಲಾಯ್ಡ್, ವಿವಿಯನ್‌ ರಿಚರ್ಡ್ಸ್‌, ರಿಚರ್ಡ್‌ ಹಾಡ್ಲಿ ಮುಂತಾದವರೆಲ್ಲಾ ಎದುರಾಳಿ ತಂಡಗಳಲ್ಲಿ ಇದ್ದರು. ಅವರನ್ನೆಲ್ಲ ಎದುರಿಸಿ ಗೆಲ್ಲುವುದು ಸಾಧ್ಯವೇ ಇಲ್ಲ ಎಂಬುದು ನಮ್ಮ ಅನಿಸಿಕೆ ಆಗಿತ್ತು. ಹಾಗಂತ ನೇರವಾಗಿ ಹೇಳುವುದು ಹೇಗೆ? ನಾನೊಂದು ಉಪಾಯ ಮಾಡಿದೆ.

ನನಗೆ ಆಗಷ್ಟೇ ಮದುವೆಯಾಗಿತ್ತು. ಹೇಗಿದ್ದರೂ ವಾರ ಅಥವಾ ಹತ್ತು ದಿನದಲ್ಲಿ ಎಲ್ಲಾ ಮ್ಯಾಚ್‌ ಸೋತು ನಾವು ಮನೆಗೆ ವಾಪಸ್‌ ಬರಬೇಕಾಗುತ್ತೆ. ಉಳಿದವರೆಲ್ಲಾ ದೆಹಲಿಯ ವಿಮಾನ ಹತ್ತಿದಾಗ, ನಾನು ಹೆಂಡತಿಯ ಜೊತೆ ಲಂಡನ್‌ನಲ್ಲಿ ಸ್ವಲ್ಪ ಸುತ್ತಾಡಿದರೆ ಹೇಗೆ ಅನ್ನಿಸಿತು. ನನ್ನ ಪತ್ನಿಗೂ ಅದನ್ನೇ ಹೇಳಿ ಕರ್ಕೊಂಡು ಹೋದೆ. ಅಲ್ಲಿ ನೋಡಿದರೆ, ಎಲ್ಲಾ ಉಲ್ಟಾ ಆಯಿತು. ನಂಬಲಾಗದ ಪವಾಡ ನಡೆದುಹೋಯಿತು. ಪರಿಣಾಮ, ಹನಿಮೂನ್‌ಗೆಂದು ಬಂದಾಕೆ, ಸ್ಟೇಡಿಯಂನಲ್ಲಿ ಕೂತು ಚಪ್ಪಾಳೆ ಹೊಡೆಯಬೇಕಾಯಿತು’ ಎಂದರು.

ಇಡೀ ತಂಡವನ್ನು ಒಬ್ಬನೇ ಹೆದರಿಸಿಬಿಟ್ಟ!
2011 ರಲ್ಲಿ ಭಾರತ ತಂಡ ವಿಶ್ವಕಪ್‌ ಗೆದ್ದು ಬೀಗುತ್ತಿದ್ದ ಸಂದರ್ಭ. ರನ್ನರ್‌ಅಪ್‌ ಆಗಿದ್ದ ಶ್ರೀಲಂಕಾ ತಂಡದ ನಾಯಕ ಮಹೇಲ ಜಯವರ್ಧನೆ ಅವರ ಮೊಗದಲ್ಲಿ ನಿರಾಸೆ ತುಂಬಿಕೊಂಡಿತ್ತು. ನಿಮ್ಮ ತಂಡದ ಸೋಲಿಗೆ ಮುಖ್ಯ ಕಾರಣ ಏನು ಎಂದಾಗ-ಧೋನಿ, ಗೌತಮ್‌ ಗಂಭೀರ್‌, ಕೊಹ್ಲಿಯವರ ಅದ್ಭುತ ಬ್ಯಾಟಿಂಗ್‌ ಎಂದು ಉತ್ತರ ಬರಬಹುದು ಎಂದು ಹಲವರು ಅಂದಾಜು ಮಾಡಿದ್ದರು. ಆದರೆ ಜಯವರ್ಧನೆ ಅವರ ಯಾರ ಹೆಸರನ್ನೂ ಹೇಳಲಿಲ್ಲ. ಶ್ರೀಲಂಕಾದ ಸೋಲಿಗೆ ಜಹೀರ್‌ ಖಾನ್‌ ಅವರ ಬೌಲಿಂಗ್‌ ಮುಖ್ಯ ಕಾರಣ ಅಂದರು. ಹೌದಾ? ಅದು ಹೇಗೆ ಎಂದು ಮತ್ತೆ ಪ್ರಶ್ನಿಸಿದಾಗ ಜಯವರ್ಧನೆ ಹೇಳಿದ್ದು- ಮೊದಲ 5 ಓವರ್‌ಗಳಲ್ಲಿ 50 ರನ್‌ ಹೊಡೆಯಬೇಕು.

ಆಮೂಲಕ ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸಿಬೇಕು, ನಂತರ ವೇಗವಾಗಿ ರನ್‌ ಗಳಿಸಿ 300ರ ಮೊತ್ತ ದಾಟಬೇಕು ಎಂಬುದು ನಮ್ಮ ಪ್ಲಾನ್‌ ಆಗಿತ್ತು. ನಮ್ಮ ಆರಂಭಿಕ ಆಟಗಾರರಿಗೆ ಅದನ್ನೇ ಹೇಳಿದ್ದೆ. ಆದರೆ, ನಾವ್ಯಾರೂ ಊಹಿಸದ ರೀತಿಯಲ್ಲಿ ಬೌಲಿಂಗ್‌ ಮಾಡಿದ ಜಹೀರ್‌ ಬ್ಯಾಟ್ಸಮನ್‌ಗಳನ್ನು ಕಂಗಾಲು ಮಾಡಿದರು. ಮೊದಲ 5 ಓವರ್‌ಗೆ ಅವರು ನೀಡಿದ್ದು ಕೇವಲ 6 ರನ್‌. ಅದ್ಭುತವಾಗಿ ಬೌಲಿಂಗ್‌ ಮಾಡುವ ಮೂಲಕ, ಇಡೀ ತಂಡವನ್ನು ಒಬ್ಬ ಜಹೀರ್‌ ಹೆದರಿಸಿಬಿಟ್ಟರು. ಭಾರತವನ್ನು ಒತ್ತಡದಲ್ಲಿ ಸಿಕ್ಕಿಸಬೇಕು ಅಂದುಕೊಂಡಿದ್ದ ನಾವೇ ಒತ್ತಡಕ್ಕೆ ಸಿಕ್ಕಿಕೊಂಡೆವು… ಅದರ ಪರಿಣಾಮವಾಗಿಯೇ ಸೋತೆವು…

Advertisement
Advertisement

Udayavani is now on Telegram. Click here to join our channel and stay updated with the latest news.

Next