1983ರ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಭಾರತದ ವಿರುದ್ಧ ಸೋಲುತ್ತದೆ ಎಂದು ಯಾರೊಬ್ಬರೂ ನಿರೀಕ್ಷಿಸಿರಲಿಲ್ಲ. ಏಕದಿನ ಕ್ರಿಕೆಟ್‌ನ ಚಿಲ್ಟಾಗಳು ಅನ್ನಿಸಿಕೊಂಡಿದ್ದ ಭಾರತದ ಆಟಗಾರರು, ಕ್ಲೈವ್ ಲಾಯ್ಡ್, ವಿವಿಯನ್ ರಿಚರ್ಡ್ಸ್, ಮಾಲ್ಕಮ್ ಮಾರ್ಷಲ್‌ರಂಥ ಘಟಾನುಘಟಿ ಆಟಗಾರರಿಂದ ಕೂಡಿದ್ದ ತಂಡವನ್ನು ಸೋಲಿಸುವುದು ಅಂದರೆ ನಂಬುವ ಮಾತೆ? ಆದರೆ, ಯಾರೂ ನಂಬಲಾಗದಂಥ ಪವಾಡವಂತೂ ನಡೆಯಿತು. ಕಪಿಲ್ ದೇವ್ ಅವರ ಜೊತೆಗಾರ ಆಟಗಾರರು, ಡೆವಿಲ್‌ಗಳಂತೆಯೇ ಎದುರಾಳಿ ಆಟಗಾರರನ್ನು ಕಾಡಿದರು. ಈ ಸೋಲಿನಿಂದ, ಕ್ರಿಕೆಟ್ ಲೋಕಕ್ಕೆ ನಾವೇ ದೊರೆಗಳು ಎಂದು ಭಾವಿಸಿದ್ದ ವೆಸ್ಟ್ ಇಂಡೀಸ್ ಆಟಗಾರರಿಗೆ ಅವಮಾನವಾಗಿತ್ತು. ಮುಖ್ಯವಾಗಿ, ವಿಂಡೀಸ್‌ನ ಪತ್ರಿಕೆಗಳು ತಮ್ಮ ದೇಶದ ಎಲ್ಲಾ ಆಟಗಾರರಿಗೆ ಛೀಮಾರಿ ಹಾಕಿದ್ದವು.
Advertisement
ಈ ಅವಮಾನದಿಂದ ವೆಸ್ಟ್‌ಇಂಡೀಸ್ ತಂಡದ ದಂತಕಥೆ ವಿವಿಯನ್ ರಿಚರ್ಡ್ಸ್ ಅದೆಷ್ಟು ಸಿಟ್ಟಾಗಿದ್ದ ಅಂದರೆ, ಭಾರತ ಪ್ರವಾಸಕ್ಕೆ ಹೋದಾಗ, ನಮ್ಮ ಶಕ್ತಿ ಏನು ಅಂತ ತೋರಿಸ್ತೇವೆ ಅಂದಿದ್ದ. ವೇಗದ ಬೌಲಿಂಗ್ ಎದುರಿಸಲು ಭಾರತದ ಬ್ಯಾಟ್ಸಮನ್‌ಗಳು ಹೆದರುತ್ತಾರೆ ಎಂದು ಅವನಿಗೆ ಚೆನ್ನಾಗಿ ಗೊತ್ತಿತ್ತು. ಭಾರತ ಪ್ರವಾಸಕ್ಕೆ ಬಂದಾಗ, ಹೊಸ ವೇಗದ ಬೌಲರ್‌ಗಳೊಂದಿಗೇ ಆತ ಬಂದಿದ್ದ. ಆ ಬೌಲರ್‌ಗಳ ವೇಗ ಮತ್ತು ಆಕ್ರಮಣದ ಶೈಲಿ ಹೇಗಿತ್ತು ಅಂದರೆ, ಚೆನ್ನೈನಲ್ಲಿ ಟೆಸ್ಟ್ ಆರಂಭವಾಗಿ 10 ನಿಮಿಷ ಕಳೆಯುವಷ್ಟರಲ್ಲಿ, ಭಾರತದ ಮೂರು ವಿಕೆಟ್ ಬಿದ್ದಿದ್ದವು! ಆಗ ಆಟ ನೋಡಲು ಬಂದವರೊಬ್ಬರು. “ವಿಶ್ವಕಪ್ ಗೆದ್ದ ತಂಡ ಅಲ್ಲವೇ? ಅದೇ ಹುಮ್ಮಸ್ಸಿನಲ್ಲಿ ಚೆನ್ನಾಗಿ ಆಡ್ತಾರೆ, ಐದು ದಿನ ಆಟ ನೋಡಬಹುದು ಅಂತ ಬಂದ್ವಿ. ಈಗ ನೋಡಿದ್ರೆ, ನಾವು ಕೂರುವ ಮೊದಲೇ 3 ಜನ ಔಟ್ ಆಗಿದ್ದಾರೆ. ಸ್ವಲ್ಪ ನಿಧಾನಕ್ಕೆ ಬೌಲಿಂಗ್ ಮಾಡ್ರಯ್ಯಾ” ಎಂದು ಬೋರ್ಡ್ ಬರೆದು ತೋರಿಸಿದ್ದರು…
ಯಾವುದೇ ಒಬ್ಬ ವ್ಯಕ್ತಿ ಸೆಲೆಬ್ರಿಟಿ ಅನ್ನಿಸಿಕೊಂಡರೆ, ಅವನನ್ನು ಅವರ ಊರಿನ ಹೆಸರಲ್ಲಿ ಗುರುತಿಸುವುದುಂಟು. ಇಲ್ಲವಾದರೆ ಸೆಲೆಬ್ರಿಟಿಯ ರಾಜ್ಯದ ಹೆಸರಾಂತ ತಿಂಡಿಯ ಹೆಸರಿನ ಜೊತೆ ಅವರ ಹೆಸರು ಸೇರಿಸುವುದುಂಟು. ಹರ್ಯಾಣ ಹರಿಕೇನ್, ಕಾಶ್ಮೀರಿ ಆ್ಯಪಲ್ ಅಂತ ಹೆಸರುಗಳಲ್ಲಿ ಕೆಲವು. ಆದರೆ, ಕ್ರೀಡಾಪಟುಗಳನ್ನು ಗುರುತಿಸುವಾಗ ಮಾತ್ರ ರೈಲುಗಾಡಿಗಳ ಹೆಸರಿನ ಜೊತೆ ಆಟಗಾರರ ಹೆಸರನ್ನು ಜೋಡಿಸುತ್ತಾರೆ. ಕೇರಳದ ಖ್ಯಾತ ಕ್ರೀಡಾಪಟು ಪಿ.ಟಿ.ಉಷಾ ಅವರನ್ನು – ಪಯ್ಯೋಲಿ ಎಕ್ಸ್‌ಪ್ರೆಸ್ ಎಂದು ಕರೆದದ್ದು, ಧೋನಿಯನ್ನು ರಾಂಚಿ ಎಕ್ಸ್‌ಪ್ರೆಸ್ ಎಂದು ಕೂಗಿದ್ದು ಈ ಮಾತಿಗೆ ಉದಾಹರಣೆಗಳು. ನಮ್ಮ ಜಾವಗಲ್ ಶ್ರೀನಾಥ್ ಅವರನ್ನು ಕರ್ನಾಟಕ ಎಕ್ಸ್‌ಪ್ರೆಸ್ ಎಂದು ಕರೆಯುತ್ತಾ ಇದ್ದುದನ್ನೂ ಇಲ್ಲಿ ಮಾಡಿಕೊಳ್ಳಬೇಕು. ಅಂತೂ ಆಟಗಾರರ ನೆಪದಲ್ಲಿ ರೈಲುಗಳ ಖ್ಯಾತಿಯೂ, ರೈಲುಗಳ ಹೆಸರಿನಿಂದ ಊರ ಮೇಲಿನ ಪ್ರೀತಿಯೂ ಹೆಚ್ಚಾಯಿತು.