Advertisement

ಹಳೇ ಬ್ಯಾಟು ಹಳೇ ಚೆಂಡು

07:33 PM Feb 28, 2020 | Lakshmi GovindaRaj |

ಕಪಿಲ್‌ ಶ್ರೇಷ್ಠ ಅನ್ನೋದಕ್ಕೆ ಸಾಕ್ಷಿ ಸಿಕ್ತು!
ಯಾವುದೇ ಕ್ರೀಡೆಯಾಗಿರಲಿ, ಅಲ್ಲೆಲ್ಲ ಯಾರಾದರೂ ಇಬ್ಬರು ಆಟಗಾರರನ್ನು ಹೆಸರಿಸಿ, ಈ ಇಬ್ಬರಲ್ಲಿ ಯಾರು ಶ್ರೇಷ್ಠ ಆಟಗಾರ ಎಂದು ಅಳೆಯುವ ಪ್ರಯತ್ನ ಆಗಿಂದಾಗ್ಗೆ ನಡೆಯುತ್ತಲೇ ಇರುತ್ತದೆ. ಸ್ವಾರಸ್ಯವೆಂದರೆ, ಆ ಇಬ್ಬರೂ ಆಟಗಾರರು, ಇಂಥದೊಂದು ಯೋಚನೆಯನ್ನೇ ಮಾಡದೆ ತಮ್ಮ ಪಾಡಿಗೆ ತಾವು ಆಟದಲ್ಲಿ ಮೈಮರೆತಿರುತ್ತಾರೆ. ಅವರ ಸುತ್ತಮುತ್ತ ಇರುವವರಿಗೆ, ಏನಾದರೂ ಬಿಸಿ ಸುದ್ದಿ ಹುಡುಕುವ ಕ್ರೀಡಾ ಪತ್ರಕರ್ತರಿಗೆ, ಸ್ಕೂಪ್‌ ನ್ಯೂಸ್‌ ಹುಡುಕುವ ಹುಮ್ಮಸ್ಸು ಬಂದಿರುತ್ತದೆ. ಕಪಿಲ್‌ದೇವ್‌ ವರ್ಸಸ್‌ ಗಾವಸ್ಕರ್‌, ಕಪಿಲ್‌ ದೇವ್‌ ವರ್ಸಸ್‌ ವೆಂಗ್‌ಸರ್ಕಾರ್‌, ಕಪಿಲ್‌ ದೇವ್‌ ವರ್ಸಸ್‌ ಕೆ.ಶ್ರೀಕಾಂತ್‌ ಎಂಬಂಥ ಸುದ್ದಿಗಳು 80ರ ದಶಕದಲ್ಲಿ ಸದ್ದು ಮಾಡಿದ್ದವು.

Advertisement

ಹರ್ಯಾಣದ ಒಂದು ಪುಟ್ಟ ಹಳ್ಳಿಯಿಂದ ಬಂದ ಕಪಿಲ್‌ ದೇವ್‌, ಭಾರತ ಕ್ರಿಕೆಟ್‌ ರಂಗದ ಧೃವತಾರೆಯಂತೆ ಮೆರೆಯುವುದನ್ನು ಸಹಿಸಿಕೊಳ್ಳಲು ಎಷ್ಟೋ ಮಂದಿಗೆ ಸಾಧ್ಯವಾಗಲಿಲ್ಲ. ಅವರೆಲ್ಲ ಸೇರಿಕೊಂಡು ಗಾವಸ್ಕರ್‌, ವೆಂಗ್‌ಸರ್ಕಾರ್‌, ಶ್ರೀಕಾಂತ್‌ರನ್ನು ಎತ್ತಿ ಕಟ್ಟಿದರು. ಈ ಪೈಕಿ ಶ್ರೀಕಾಂತ್‌, ಅಯ್ಯೋ ಹೋಗ್ರಿ ಸುಮ್ನೆ, ಕಪಿಲ್‌ ನನ್ನ ಆಪ್ತಮಿತ್ರ ಎಂದರು. ಜೊತೆಗೆ ಸುದ್ದಿ ಹಬ್ಬಿಸಿದವರನ್ನು ವಾಪಸ್‌ ಕಳಿಸಿದರು. ಆದರೆ, ಗಾವಸ್ಕರ್‌ ಮತ್ತು ವೆಂಗ್‌ಸರ್ಕಾರ್‌ ಮಾತ್ರ ಇದನ್ನು ಖಾಸಗಿಯಾಗಿ ತೆಗೆದುಕೊಂಡರು. ಅವನಿಗಿಂತ ತಾವೇನು ಕಡಿಮೆ ಎಂಬಂತೆಯೇ ವರ್ತಿಸಿದರು.

ಕಡೆಗೊಮ್ಮೆ ಯಾರು ಗ್ರೇಟ್‌ ಎಂದು ಕ್ರೀಡಾಪ್ರೇಮಿಗಳೆಲ್ಲ ಪ್ರತ್ಯಕ್ಷವಾಗಿ ನೋಡುವಂಥ ಸಂದರ್ಭವೊಂದು ಮುಂಬೈನ ವಾಂಖೇಡೆ ಮೈದಾನದಲ್ಲೇ ಒದಗಿಬಂತು. ಅದು 1991ರಲ್ಲಿ ನಡೆದ ರಣಜಿ ಪಂದ್ಯದ ಫೈನಲ್‌. ಮುಂಬೈ ತಂಡದಲ್ಲಿ, ವೆಂಗ್‌ಸರ್ಕಾರ್‌ ಸೇರಿದಂತೆ ಪ್ರಚಂಡ ಆಟಗಾರರಿದ್ದರು. ಕಪಿಲ್‌ ದೇವ್‌ ನೇತೃತ್ವದ ಹರ್ಯಾಣ ತಂಡದಲ್ಲಿ ಚಿಳ್ಳೆ ಪಿಳ್ಳೆ ಎಂಬಂಥವರಿದ್ದರು. ಆದರೆ, ಪ್ರಚಂಡ ನಾಯಕತ್ವ ಪ್ರದರ್ಶಿಸಿದ ಕಪಿಲ್‌, ಈ ಪಂದ್ಯ ಗೆದ್ದುಕೊಂಡರು. ಆಗ, ಇದೇ ವೆಂಗ್‌ಸರ್ಕಾರ್‌ ಹೇಳಿದ ಮಾತು: ಕಪಿಲ್‌ ದೇವ್‌ ಉಳಿದೆಲ್ಲರಿಗಿಂತ ಯಾಕೆ ಶ್ರೇಷ್ಠ ಎಂಬುದಕ್ಕೆ ಇವತ್ತು ಉತ್ತರ ಸಿಕ್ಕಿತು…

ನಾಟ್ಯರಾಣಿ ಆಗಬೇಕಿದ್ದಾಕೆ, ಕ್ರಿಕೆಟ್‌ ರಾಣಿ ಆದಳು!
ಭಾರತದ ಮಹಿಳಾ ಕ್ರಿಕೆಟ್‌ ತಂಡಕ್ಕೆ ಘನತೆ ತಂದುಕೊಟ್ಟ ಆಟಗಾರ್ತಿ ಎಂದಾಗ ತಕ್ಷಣ ನೆನಪಾಗುವ ಹೆಸರು ಮಿಥಾಲಿ ರಾಜ್‌ ಅವರದ್ದು. ಎಂಥ ಸಂದರ್ಭದಲ್ಲೂ ತಾಳ್ಮೆ ಕಳೆದುಕೊಳ್ಳದೇ ಸಂದರ್ಭಗಳನ್ನು ನಿಭಾಯಿಸುತ್ತಿದ್ದ ಮಿಥಾಲಿಗೆ ಕ್ಯಾಪ್ಟನ್‌ ಕೂಲ್‌ ಎಂದೂ ಹೆಸರಿತ್ತು. ತಂಡ ಕಷ್ಟದಲ್ಲಿದೆ ಅನ್ನುವಂಥ ಸಂದರ್ಭದಲ್ಲಿ ನೆಲಕಚ್ಚಿ ನಿಂತು ಆಡಿಯೇ ಈಕೆ ತಂಡವನ್ನು ಗೆಲ್ಲಿಸುತ್ತಿದ್ದರು. ಮೇಲಿಂದ ಮೇಲೆ ಶತಕ ಹೊಡೆಯುತ್ತಿದ್ದರು. ಅದೇ ಕಾರಣಕ್ಕೆ ಲೇಡಿ ತೆಂಡುಲ್ಕರ್‌ ಎಂದೂ ಕರೆಸಿಕೊಂಡರು. ಸ್ವಾರಸ್ಯವೇನು ಗೊತ್ತೇ? ಶ್ರೇಷ್ಠ ಕ್ರಿಕೆಟ್‌ ಆಟಗಾರ್ತಿ ಅನಿಸಿ­ಕೊಂಡ ಮಿಥಾಲಿಗೆ, ಚಿಕ್ಕಂದಿನಲ್ಲಿ ಕ್ರಿಕೆಟ್‌ ಅಂದರೆ ಸ್ವಲ್ಪವೂ ಇಷ್ಟವಿರಲಿಲ್ಲವಂತೆ.

ಅದನ್ನು ಆಕೆಯೇ ಹೀಗೆ ಹೇಳಿಕೊಂಡಿದ್ದಾರೆ: “ಭವಿಷ್ಯ­ದಲ್ಲಿ ನರ್ತಕಿ ಆಗಬೇಕು ಎಂಬುದು ನನ್ನ ಕನಸಾಗಿತ್ತು. ಚಿಕ್ಕಂದಿನಲ್ಲಿ ಭರತನಾಟ್ಯ ಕಲಿತಿದ್ದೆ. ಸಭಾ ಕಾರ್ಯಕ್ರಮ ಕೂಡ ನೀಡಿದ್ದೆ. ಆದರೆ ಮುದ್ದಿನ ಮಗಳಾದ ಕಾರಣಕ್ಕೆ ವಿಪರೀತ ಸೋಮಾರಿಯಾಗಿದ್ದೆ. ಮಿಲಿಟರಿ ಅಧಿಕಾರಿಯಾಗಿದ್ದ ಅಪ್ಪ, ನನ್ನಲ್ಲಿ ಶಿಸ್ತು ತರಲೆಂದು ನನ್ನನ್ನು ಕ್ರಿಕೆಟ್‌ ಅಂಗಳಕ್ಕೆ ಕರೆದೊಯ್ದರು. ಮುಂದೆ, ಅದೇ ನನ್ನ ಬದುಕಾದದ್ದು ಮಾತ್ರ ವಿಚಿತ್ರವೂ ಹೌದು, ಸ್ವಾರಸ್ಯವೂ ಹೌದು! ನಾನು ನಾಟ್ಯರಾಣಿ ಆಗಬೇಕಿತ್ತು. ಆದರೆ ಕ್ರಿಕೆಟ್‌ ರಾಣಿ ಆಗಿಬಿಟ್ಟೆ…’

Advertisement
Advertisement

Udayavani is now on Telegram. Click here to join our channel and stay updated with the latest news.

Next