Advertisement

ಹಳೇ ಬ್ಯಾಟು ಹಳೇ ಚೆಂಡು

07:59 PM Dec 20, 2019 | Team Udayavani |

ಅಪಾರ ಪ್ರತಿಭಾವಂತ,ಅಷ್ಟೇ ಜಗಳಗಂಟ!
ಕ್ರಿಕೆಟ್‌ ಲೋಕ ಕಂಡ ಮರೆಯಲಾಗದ ಆಟಗಾರರ ಪೈಕಿ ಪಾಕಿಸ್ತಾನದ ಜಾವೆದ್‌ ಮಿಯಾಂದಾದ್‌ ಕೂಡ ಒಬ್ಬ. ಸಂದರ್ಭಕ್ಕೆ ತಕ್ಕ ಹಾಗೆ ತನ್ನ ಬ್ಯಾಟಿಂಗ್‌ ಶೈಲಿಯನ್ನು ಬದಲಿಸಿಕೊಂಡು ಎದುರಾಳಿ ತಂಡಕ್ಕೆ ತಲೆನೋವು ತರುತ್ತಿದ್ದುದು ಮಿಯಾಂದಾದ್‌ ಹೆಚ್ಚುಗಾರಿಕೆ. ಬ್ಯಾಟ್‌ ಮಾಡುವ ಸಂದರ್ಭದಲ್ಲಿ ಆತನ ಆಕ್ರಮಣಕಾರಿ ಶೈಲಿಯನ್ನು ಕಂಡೇ ಕ್ರಿಕೆಟ್‌ ಪ್ರೇಮಿಗಳು ಅವನನ್ನು ಮಿಯಾಂ ದಾದಾ ಎಂದು ಕರೆಯುತ್ತಿದ್ದರು.

Advertisement

ಮಿಯಾಂದಾದ್‌ಗೆ ಅತೀ ಅನ್ನುವಷ್ಟು ಮುಂಗೋಪ. ಸಿಟ್ಟಿನ ಕಾರಣದಿಂದಲೇ ಆಟದ ಅಂಗಳದಲ್ಲಿಯೇ ಎಷ್ಟೋ ಬಾರಿ ಜಗಳಗಳಾಗಿದ್ದೂ ಉಂಟು. ಬೌಲರ್‌ ಏನಾದರೂ ಅತ್ಯಂತ ವೇಗವಾಗಿ ಚೆಂಡೆಸೆದರೆ, ಕೀಪರ್‌ ಏನಾದರೂ ಪದೇಪದೆ ಔಟ್‌ಗಾಗಿ ಮನವಿ ಮಾಡಿದರೆ, ಈ ಪುಣ್ಯಾತ್ಮ ಸಿಟ್ಟಾಗುತ್ತಿದ್ದ. ನನ್ನ ಮುಂದೇನೇ ವರಸೆ ತೆಗೀತೀಯಾ ಎನ್ನುತ್ತ, ತಾನೇ ಕೆಣಕಿಕೊಂಡು ಹೋಗುತ್ತಿದ್ದ. 1980ರ ದಶಕದಲ್ಲಿ, ಆಸ್ಟ್ರೇಲಿಯದ ಹೆಸರಾಂತ ಬೌಲರ್‌ ಡೆನಿಸ್‌ ಲಿಲ್ಲಿಗೆ ಬ್ಯಾಟ್‌ನಿಂದ ಹೊಡೆಯಲು ಹೋಗಿದ್ದನ್ನು ಯಾರೂ ಮರೆಯಲಾರರು. ಈ ಸಂದರ್ಭದಲ್ಲಿ ಎಲ್ಲರಿಂದ ಛೀಮಾರಿ ಹಾಕಿಸಿಕೊಂಡರೂ ಮಿಯಾಂದಾದ್‌ ಬುದ್ಧಿ ಕಲಿಯಲಿಲ್ಲ.

ವರ್ಷಗಳ ನಂತರ, ಭಾರತದ ವಿರುದ್ಧ ಆಡುವಾಗ, ಕಿರಣ್‌ ಮೋರೆ ಪದೇಪದೇ ಔಟ್‌ಗಾಗಿ ಮನವಿ ಮಾಡಿದರೆಂದು ಅವರನ್ನೇ ಅಣಕಿಸಿ, ಜಗಳಕ್ಕೆ ಹೋಗಿದ್ದರು! ಇದನ್ನು ಮೀರಿದ ಇನ್ನೊಂದು ಅತಿರೇಕದ ವರ್ತನೆಯೂ ಮಿಯಾಂದಾದ್‌ಗೆ ಇತ್ತು. ಏನೆಂದರೆ, ಎದುರಾಳಿ ತಂಡದ ಆಟಗಾರರ ಕುರಿತು ತುಂಬಾ ಸಿಟ್ಟು ಬಂದರೆ, ಆತ ಬೌಲಿಂಗ್‌ ಮಾಡಲು ಬಂದು ಬಿಡುತ್ತಿದ್ದ! ಎದುರಾಳಿ ತಂಡದ ಬೌಲರ್‌ಗಳ ಹಾವಭಾವವನ್ನು ಯಥಾವತ್‌ ಅನುಕರಿಸಿ, ಚೆಂಡೆಸೆಯುತ್ತಿದ್ದ. ಇದರಿಂದ ಸಹಜವಾಗಿಯೇ ಮುಜುಗರಕ್ಕೀಡಾಗುತ್ತಿದ್ದ ಎದುರಾಳಿಗಳು ಅಪಾರ ಪ್ರತಿಭಾವಂತ, ಆದರೆ ಅಷ್ಟೇ ಜಗಳಗಂಟ ಎಂದುಕೊಂಡು ಸುಮ್ಮನಾಗುತ್ತಿದ್ದರು.

ಒಂದೊಂದು ಚೆಂಡಿಗೂ ಬೇರೆ ಬೇರೆ ವಿಕೆಟ್‌ ಬಿತ್ತು!
1987ರಲ್ಲಿ ನಡೆದಿದ್ದು, ನಾಲ್ಕನೇ ವಿಶ್ವಕಪ್‌ ಕ್ರಿಕೆಟ್‌ ಕೂಟ. ಎಲ್ಲರಿಗೂ ಗೊತ್ತಿರುವಂತೆ ಮೊದಲೆರಡು ವಿಶ್ವಕಪ್‌ ಗೆದ್ದಿದ್ದು ವೆಸ್ಟ್‌ ಇಂಡೀಸ್‌. ಮೂರನೇ ಬಾರಿ ಕಪ್‌ ಗೆದ್ದಿದ್ದು ಕಪಿಲ್‌ ದೇವ್‌ ನಾಯಕತ್ವದ ಭಾರತ ತಂಡ. ಮೂರು ವಿಶ್ವಕಪ್‌ ಪಂದ್ಯಗಳು ನಡೆದರೂ, ಅದುವರೆಗೂ ಯಾರೊಬ್ಬರೂ ಹ್ಯಾಟ್ರಿಕ್‌ ವಿಕೆಟ್‌ ಪಡೆದಿರಲಿಲ್ಲ. 1987ರಲ್ಲಿ ರಿಲಯನ್ಸ್‌ ಕಪ್‌ ಕ್ರಿಕೆಟ್‌ ನಡೆಯಿತಲ್ಲ; ಆಗ ಯಾರೂ ಊಹಿಸದಿದ್ದ ಪವಾಡವೊಂದು ನಡೆಯಿತು. ನಾಗ್ಪುರದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಆ ಪಂದ್ಯದಲ್ಲಿ, ಭಾರತದ ಚೇತನ್‌ ಶರ್ಮ, ಸತತ ಮೂರು ಎಸೆತಗಳಲ್ಲಿ ಮೂರು ವಿಕೆಟ್‌ ಪಡೆದರು.

ಆ ಮೂಲಕ, ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್‌ ಪಡೆದ ಮೊದಲ ಬೌಲರ್‌ ಎನಿಸಿಕೊಂಡರು. ಬಹಳಷ್ಟು ಬೌಲರ್‌ಗಳು ಒಂದೇ ವಿಕೆಟ್‌ಗೆ ಗುರಿಯಿಟ್ಟು ಚೆಂಡು ಎಸೆಯುವುದುಂಟು. ಆದರೆ ಚೇತನ್‌ ಶರ್ಮ ಅವರ ಬೌಲಿಂಗ್‌ನಲ್ಲಿ ಅಸಾಧ್ಯ ಅನ್ನುವಂತಹ ಸೂಕ್ಷ್ಮತೆಯಿತ್ತು. ಈತ ಅದೆಷ್ಟು ನೈಪುಣ್ಯದಿಂದ, ಅದೆಂಥ ಆತ್ಮವಿಶ್ವಾಸದಿಂದ ಚೆಂಡೆಸೆದಿದ್ದ ಅಂದರೆ, ಪ್ರತೀ ಚೆಂಡೂ ಬೇರೆ ಬೇರೆ ಸ್ಟಂಪ್‌ಗೆ ಬಡಿದಿತ್ತು. ಮೂರೂ ಬಾರಿಯೂ ಒಂದೊಂದೇ ಸ್ಟಂಪ್‌ ಉರುಳಿತ್ತು ಎಂದು ಆ ಪಂದ್ಯದ ಮತ್ತೂಂದು ಸ್ವಾರಸ್ಯ..

Advertisement
Advertisement

Udayavani is now on Telegram. Click here to join our channel and stay updated with the latest news.

Next