Advertisement

ವೃದ್ಧೆಗೆ ಒದ್ದು ಕಾಲುಮುರಿದ ಒಂಟಿ ಸಲಗ

06:18 PM Apr 27, 2022 | Team Udayavani |

ಹುಣಸೂರು: ಒಂಟಿಕೊಂಬಿನ ಸಲಗದ ದಾಳಿಗೆ ವೃದ್ಧೆಯೊಬ್ಬರು ಕಾಲು ಮುರಿದುಕೊಂಡಿರುವ ಘಟನೆ ಹನಗೋಡು ಭಾಗದ ಹರಳಹಳ್ಳಿ ಬಳಿ ನಡೆದಿದೆ. ಸೋಮವಾರದಂದು ಮೂರು ಕಾಡಾನೆಗಳ ಹಿಂಡು ಜನರಿಂದ ಕಾಡಿಸಿಕೊಂಡು ರಾತ್ರಿ ಕಾಡು ಸೇರಿಕೊಂಡರೆ, ಮಂಗಳವಾರ ಹನಗೋಡು ಭಾಗದ ಹರಳಹಳ್ಳಿ ಬಳಿಯಿಂದ ಒಂಟಿ ಕೊಂಬಿನ ಸಲಗವು ಜನರನ್ನು ಕಾಡಿಸಿದ್ದಲ್ಲದೆ, ದನಗಾಹಿ ವೃದ್ಧ ಮಹಿಳೆ ಹರಳಹಳ್ಳಿಯ ಪುಟ್ಟಲಕ್ಷ್ಮಮ್ಮ (60) ಮೇಲೆ
ದಾಳಿ ನಡೆಸಿ, ನಾಗಾಪುರದ ವುಡ್‌ ಲಾಟ್‌ನಲ್ಲಿ ಸೇರಿಕೊಂಡರೂ ರಾತ್ರಿ ವೇಳೆಗೆ ಉದ್ಯಾನದ ರೈಲ್ವೆ ಹಳಿ ಗೇಟ್‌ ತೆರೆದು ಕಾಡಿಗೆ ಸೇರಿಸುವಲ್ಲಿ ಅರಣ್ಯ ಸಿಬ್ಬಂದಿ ಯಶಸ್ವಿಯಾದರು.

Advertisement

ದನಗಳಂತೆ ಅಟ್ಟಾಡಿಸಿದರು: ಇಲ್ಲಿ ಕಾಡಾನೆಗಳ ನಿತ್ಯ ಹಾವಳಿಯಾದರೂ ಮಂಗಳವಾರ ಮಾತ್ರ ಒಂಟಿ ಕೊಂಬಿನ ಸಲಗ ಕಾಣಿಸಿಕೊಂಡು ಗ್ರಾಮ ಸ್ಥರಲ್ಲಿ ಭೀತಿ ಹುಟ್ಟಿಸಿತ್ತು. ವಿಷಯ ತಿಳಿಯುತ್ತಿದ್ದಂತೆ ಅಕ್ಕಪಕ್ಕದ 500ಕ್ಕೂ ಹೆಚ್ಚು ಗ್ರಾಮಸ್ಥರು, ಯುವ ಪಡೆ, ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಸೇರಿ ಸಲಗವನ್ನು ಕಾಡಿಗಟ್ಟಲು ಹರಸಾಹಸ ಪಟ್ಟರು. ಜನರ ಕೂಗಾಟದಿಂದ ಬೆದರಿದ ಸಲಗ ಅತ್ತಿಂದಿತ್ತ ಓಡಾಡುತ್ತಾ ಅದ್ವಾಳ ಕೆರೆ ಬಳಿ ಸೇರಿಕೊಂಡಿತು.

ಮಹಿಳೆ ಮೇಲೆ ದಾಳಿ: ಅರಣ್ಯ ಸೇರಿಕೊಳ್ಳುವ ಆತುರದಲ್ಲಿದ್ದ ಸಲಗವು ಅದ್ವಾಳು ಕೆರೆ ಬಳಿ ತಮ್ಮ ಜಾನುವಾರು ಮೇಯಿಸುತ್ತಿದ್ದ ಹರಳಹಳ್ಳಿಯ ವೃದ್ಧೆ ಪುಟ್ಟಲಕ್ಷ್ಮಮ್ಮ(60) ಅವರನ್ನು ಸೊಂಡಲಿನಿಂದ ತಿವಿದು, ಒದ್ದು ಓಡಿಹೋಯಿತು. ಸಲಗದ ಒದೆತ ದಿಂದ ತೀವ್ರ ಗಾಯಗೊಂಡು ವೃದ್ದೆ ಜ್ಞಾನತಪ್ಪಿದರು.

ನಂತರ ಅರಣ್ಯ ಸಿಬ್ಬಂದಿ ಮಹಿಳೆಗೆ ನೀರು ಕುಡಿಸಿ ಉಪಚರಿಸಿ ಹುಣಸೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಕೊಡಿಸಿ ಮೈಸೂರಿನ ಕೆ.ಆರ್‌.ಆಸ್ಪತ್ರೆಗೆ ದಾಖಲಿಸಿದ್ದು ಎಡಗಾಲು ಮುರಿದಿದೆ.

ಕೊನೆಗೂ ಕಾಡು ಸೇರಿತು: ಸ್ಥಳಕ್ಕೆ ಎಸಿಎಫ್‌ ಸತೀಶ್‌, ಆರ್‌ಎಫ್‌ಒ ನಮನ್‌ ನಾರಾಯಣ್‌ ನಾಯ್ಕ, ಡಿಆರ್‌ಎಫ್‌ಒಗಳಾದ ದ್ವಾರಕನಾಥ್‌, ಚಂದ್ರೇಶ್‌, ಅರಣ್ಯ ಹಾಗೂ ಎಸ್‌ಟಿಪಿಎಫ್‌ ಸಿಬ್ಬಂದಿ ಸಂಜೆ ವೇಳೆಗೆ ನಾಗರಹೊಳೆ ಉದ್ಯಾನಕ್ಕೆ ಸೇರಿಸುವಲ್ಲಿ ಯಶಸ್ವಿಯಾದರು.

Advertisement

ಕಾಡಾನೆ ಕಾಟ ತಪ್ಪಿಸಿ: ಈ ಭಾಗದಲ್ಲಿ ನಿತ್ಯ ಕಾಡಾನೆಗಳ ಕಾಟದಿಂದ ರೈತರು ಕಂಗಾಲಾಗಿದ್ದು, ಬೆಳೆ, ಜೀವಹಾನಿಯೊಂದಿಗೆ ಬದುಕಬೇಕಾದ ಅನಿವಾರ್ಯತೆ ಎದುರಾಗಿದೆ. ಸರ್ಕಾರ ಈ ಭಾಗದಲ್ಲಿ ರೈಲ್ವೆ ಕಂಬಿ ತಡೆಗೋಡೆ ಪೂರ್ಣಗೊಳಿಸದೇ, ರೈತರು ಸಂಕಷ್ಟ ಎದುರಿಸಬೇಕಾಗಿದೆ. ಇನ್ನಾದರೂ ಶಾಸಕರು ಸರ್ಕಾರದ ಮೇಲೆ ಒತ್ತಡ ಹಾಕಿ, ಬೇಲಿ ಪೂರ್ಣಗೊಳಿಸುವಂತೆ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next