ಯಳಂದೂರು: ತಾಲೂಕಿನ ವಿವಿಧ ಗ್ರಾಮಗಳಲ್ಲಿ ನೂರಾರು ಹಿರಿಯ ನಾಗರಿಕರಿಗೆ ಸರ್ಕಾರದ ವಿವಿಧ ಯೋಜನೆಗಳಲ್ಲಿ ವೃದ್ಧಾಪ್ಯ ವೇತನ ಹಣವು ಹಲವು ತಿಂಗಳಿಂದ ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿದ್ದು ಫಲಾನುಭವಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಪಿಂಚಣಿ, ವಿಧವೆ ವೇತನ, ಅಂಗವಿಕಲ, ಮೈತ್ರಿ, ಮನಸ್ವಿನಿ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಒಟ್ಟು 18,500 ಕ್ಕೂ ಹೆಚ್ಚು ಫಲಾನುಭವಿಗಳು ತಾಲೂಕಿನಲ್ಲಿದ್ದಾರೆ. ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಕಳೆದ ಹಲವು ತಿಂಗಳಿಂದ ಹಣ ಲಭಿಸುತ್ತಿಲ್ಲ. ಇದಕ್ಕೆ ಹಲವು ತಾಂತ್ರಿಕ ತೊಂದರೆಗಳು ಕಾರಣ ಎಂದು ಇಲಾಖೆಯ ಅಧಿಕಾರಿಗಳು ಸಬೂಬು ನೀಡುತ್ತಿದ್ದಾರೆ. ಆಧಾರ್, ಬ್ಯಾಂಕ್ ಖಾತೆ, ಸೇರಿದಂತೆ ಇತರೆ ಸೂಕ್ತ ದಾಖಲೆಗಳು ಸಮಸ್ಯೆಯಾಗಿದೆ. ಹಲವು ತಿಂಗಳಿಂದ ಹಣವು ಫಲಾನುಭವಿಗಳಿಗೆ ಖಾತೆ ಜಮಾವಾಗುತ್ತಿಲ್ಲ, ಹಾಗಾಗಿ ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸಿ ಪಿಂಚಣಿ ಪಡೆಯ ಬೇಕೆಂದು ಕಂದಾಯ ಇಲಾಖೆ ಅಧಿಕಾರಿಗಳು ಸೂಚಿಸುತ್ತಿದ್ದಾರೆ.
ಹೊಸದಾಗಿ ಅರ್ಜಿ ಸಲ್ಲಿಸಲು ಪರದಾಟ: ಹಲವು ವರ್ಷಗಳಿಂದ ವೃದ್ಧಾಪ್ಯ ಯೋಜನೆಯಲ್ಲಿ ಹಣ ನೀಡುತ್ತಿದ್ದ, ಫಲಾನುಭವಿಗಳಿಗೆ ಕಳೆದ 2 ರಿಂದ 3 ತಿಂಗಳ ವೇತನ ಹಲವು ತಾಂತ್ರಿಕ ಕಾರಣಗಳಿಂದ ಯೋಜನೆಯ ಹಣವು ಖಾತೆಗೆ ಪಾವತಿಯಾಗುವುದು ಸ್ಥಗಿತಗೊಂಡಿದೆ ಎಂದು ಹೇಳಿ ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸಿ ಇದರಿಂದ ಹಿರಿಯ ನಾಗರಿಕರು ಮತ್ತೆ ಹೊಸದಾಗಿ ವೈದ್ಯಕೀಯ ಪ್ರಮಾಣ ಪತ್ರ ಸೇರಿದಂತೆ ಫೋಟೋ ಅಗತ್ಯ ದಾಖಲಾತಿಗಳನ್ನು ಮಾಡಿಸಿಕೊಂಡು ಅರ್ಜಿ ಸಲ್ಲಿಸಬೇಕಾಗಿದೆ ಇದರಿಂದ ಹಿರಿಯ ನಾಗರೀಕರು ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಮಸ್ಯೆಗೆ ತಾಂತ್ರಿಕ ಕಾರಣ ನೀಡಿದ ಅಧಿಕಾರಿಗಳು: ತಾಲೂಕಿನಲ್ಲಿ ವಿವಿಧ ಯೋಜನೆಗಳಿಂದ ನೂರಾರು ಹಿರಿಯ ನಾಗರಿಕರು, ಮಹಿಳೆಯರು ವಿವಿಧ ಯೋಜನೆಗಳಿಂದ ಹಣವನ್ನು ಪಡೆಯುತ್ತಿರುವ ನಾಗರಿಕರಿಗೆ ಕಳೆದ ಹಲವು ತಿಂಗಳಿಂದ ಸ್ಥಗಿತಗೊಂಡಿರುವ ಬಗ್ಗೆ ಕಂದಾಯ ಇಲಾಖೆಯಲ್ಲಿ ಪರಿಶೀಲಿಸಿದ್ದಾರೆ. ಆಧಾರ್ ಗೆ ಮೊಬೈಲ್ ಸಂಖ್ಯೆ ನೋಂದಣಿ, ಬ್ಯಾಂಕ್ ಖಾತೆಗೂ ಆಧಾರ್ ಜೋಡಣೆ ಮಾಡದ ಕಾರಣ ಕೆಲವು ಫಲಾನುಭವಿಗಳಿಗೆ ಸಮಸ್ಯೆಯಾಗಿದೆ ಎಂದು ಕಂದಾಯ ಇಲಾಖೆಯ ಸಿಬ್ಬಂದಿಗಳು ಮಾಹಿತಿ ನೀಡುತ್ತಾರೆ.
Related Articles
ಆದರೆ ಆ ಹಣವನ್ನು ಪಾವತಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮವಹಿಸಿದೇ ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸಿ ಎಂದು ಹೇಳಿ ಕೈ ತೊಳೆದು ಕೊಳ್ಳುತ್ತಿದ್ದಾರೆ. ಇದರಿಂದ ಔಷಧಿ ಖರೀದಿ, ಸೇರಿದಂತೆ ಜೀವನೋಪಾಯಕ್ಕಾಗಿ ಪಿಂಚಣಿಯ ಹಣವನ್ನು ನಂಬಿಕೊಂಡೆ ಜೀವಿಸುವರಿಗೆ ಸಮಸ್ಯೆಯಾಗಿದೆ ಎಂದು ಕಂದಹಳ್ಳಿ ಮಹೇಶ್ ಆರೋಪಿಸಿದ್ದಾರೆ.
ಆಧಾರ್‌ಕಾರ್ಡ್‌ಗೆ ಮೊಬೈಲ್ ಸಂಖ್ಯೆ ನೋಂದಣಿ, ಖಾತೆಗೆ ನೋಂದಣಿ ಸಮಸ್ಯೆಯಿಂದ ತಾಲೂಕಿನ ವಿವಿಧ ಯೋಜನೆಯ ಫಲಾನುಭವಿಗಳು ವೇತನದ ಹಣವು ಹಲವು ತಿಂಗಳಿಂದ ಸ್ಥಗಿತಗೊಂಡಿದೆ. ಈ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಫಲಾನುಭವಿಗಳನ್ನು ಪಟ್ಟಿ ಮಾಡಿ ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಬರೆದು ಮತ್ತೆ ಹಣವು ಮರುಪಾವತಿಗೆ ಕ್ರಮವಹಿಸಲಾಗುವುದು. -ಶಿವರಾಜ್, ತಹಶೀಲ್ದಾರ್, ಯಳಂದೂರು
ಸಂಧ್ಯಾ ಸುರಕ್ಷಾ ಯೋಜನೆಯ ಪತ್ರ ಸಂಖ್ಯೆ ಆರ್‌ಐಕೆಪಿಆರ್ 725/08-09 ಸಾಲಿನಲ್ಲಿ ಯೋಜನೆಯು ಮಂಜೂರಾಗಿದೆ. ಆದರೆ ಕಳೆದ ಎರಡು ತಿಂಗಳಿಂದ ಹಣ ಪಾವತಿಯಾಗುತ್ತಿಲ್ಲ. ಈ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ನಿಮ್ಮ ದಾಖಲೆಗಳಲ್ಲಿ ತಾಂತ್ರಿಕ ಸಮಸ್ಯೆಯಾಗಿದ್ದು, ಈ ಯೋಜನೆ ರದ್ದು ಪಡಿಸಿ ಹೊಸದಾಗಿ ಅರ್ಜಿ ಸಲ್ಲಿಸುವಂತೆ ಸೂಚಿಸಿ ಕಳುಹಿಸಿದ್ದಾರೆ ಇದನ್ನು ಮಾಡಿಸಲು ನನ್ನಂತಹವರಿಗೆ ತುಂಬಾ ತೊಂದರೆಯಾಗುತ್ತಿದೆ. – ಮಹದೇವಶೆಟ್ಟಿ, ಫಲಾನುಭವಿ, ದುಗ್ಗಹಟ್ಟಿ ಗ್ರಾಮ
– ಫೈರೋಜ್ ಖಾನ್