Advertisement

ರಾಜ್ಯದಲ್ಲಿ ಒಲಾ, ಉಬರ್‌ ಆಟೋ, ರಾಪಿಡೋ ಬಂದ್‌

09:11 AM Oct 08, 2022 | Team Udayavani |

ಬೆಂಗಳೂರು: ಇನ್ಮುಂದೆ ಬೆಂಗಳೂರು ಸೇರಿದಂತೆ ರಾಜ್ಯ ದ ಮಹಾನಗರಗಳಲ್ಲಿ ಒಲಾ, ಉಬರ್‌ ಆಟೋ, ರಾಪಿಡೋ ಬೈಕ್‌ಗಳ ಸೇವೆ ಲಭ್ಯ ಇರುವುದಿಲ್ಲ. ಯಾಕೆಂದರೆ, ಒಲಾ, ಉಬರ್‌ ಸೇರಿದಂತೆ ವಿವಿಧ ಅಗ್ರಿಗೇಟರ್‌ಗಳಡಿ ಆಟೋ -ದ್ವಿಚಕ್ರ ವಾಹನಗಳ ಸೇವೆಯನ್ನು ತಕ್ಷಣ ಸ್ಥಗಿತಗೊಳಿಸುವಂತೆ ಸಾರಿಗೆ ಇಲಾಖೆ ಸೂಚನೆ ನೀಡಿದೆ.

Advertisement

ಒಲಾ ಮತ್ತು ಉಬರ್‌ ಎರಡು ಕಿ.ಮೀ.ಗಿಂತ ಕಡಿಮೆ ದೂರವಿದ್ದರೂ ಕನಿಷ್ಠ 100 ರೂ.ಪ್ರಯಾಣ ಶುಲ್ಕ ವಿಧಿಸುತ್ತಿವೆ. ಈ ಬಗ್ಗೆ ಹಲವಾರು ಪ್ರಯಾಣಿಕರು ಸಾರಿಗೆ ಇಲಾಖೆಗೆ ದೂರು ನೀಡಿದ್ದರು. 1ರಿಂದ 1.5 ಕಿ.ಮೀ. ಅಂತರಕ್ಕೆ ಅಗ್ರಿಗೇಟರ್‌ ಆ್ಯಪ್‌ಗ್ಳಲ್ಲಿ ರೈಡ್‌ ದರ 60-65 ರೂ. ಮತ್ತು ಪ್ರವೇಶ ಶುಲ್ಕ 40 ರೂ. ಸೇರಿದಂತೆ ಒಟ್ಟು 100-105 ರೂ. ದರ ತೋರಿಸುತ್ತಿದೆ. ಇದು ಹಗಲುದರೋಡೆ ಎಂದು ಸಾಮಾಜಿಕ ಜಾಲತಾಣದಲ್ಲಿ ಗ್ರಾಹಕರೊಬ್ಬರು ಸಾರಿಗೆ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಈ ನೋಟಿಸ್‌ ಜಾರಿ ಮಾಡಲಾಗಿದೆ.

ಅದರಂತೆ ಒಲಾ, ಉಬರ್‌, ರ್ಯಾಪಿಡೋ ಸೇರಿದಂತೆ ವಿವಿಧ ಆ್ಯಪ್‌ ಆಧಾರಿತ ಅಗ್ರಿಗೇಟರ್‌ ಸೇವಾ ಕಂಪನಿಗಳಡಿ ಆಟೋ ಮತ್ತು ದ್ವಿಚಕ್ರ ವಾಹನಗಳ ಸೇವೆ ನಿಯಮ ಬಾಹಿರವಾಗಿದೆ. ತಕ್ಷಣ ಅಗ್ರಿಗೇಟರ್‌ ಸೇವೆ ಅಡಿ ಆಟೋ ಅಥವಾ ದ್ವಿಚಕ್ರ ವಾಹನಗಳ ಸೇವೆಯನ್ನು ಸ್ಥಗಿತಗೊಳಿಸಬೇಕು. ಜತೆಗೆ ಆಟೋ ಚಾಲಕರಿಗೆ ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ದರ ಪಡೆಯಬಾರದು ಎಂದು ತಾಕೀತು ಮಾಡಿದೆ. ಈ ಆ್ಯಪ್‌ ಕಂಪನಿಗಳು ಶನಿವಾರದ ಒಳಗೆ ತಾವು ಜಾರಿ ಮಾಡಿರುವ ನೋಟಿಸ್‌ ಗೆ ಉತ್ತರ ನೀಡಬೇಕು. ಇಲ್ಲದಿದ್ದರೆ, ಕಾನೂನು ಕ್ರಮ ಜರುಗಿಸಲಾಗುವುದು ಎಂದೂ ರಾಜ್ಯ ರಸ್ತೆ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಎಚ್ಚರಿಕೆ ನೀಡಿದ್ದಾರೆ.

ಆ್ಯಪ್‌ ಆಧಾರಿತ ಅಗ್ರಿಗೇಟರ್‌ ಆಗಿ ಕಾರ್ಯ ನಿರ್ವಹಿಸಲು ಇಲಾಖೆ “ಕರ್ನಾಟಕ ಆನ್‌- ಡಿಮ್ಯಾಂಡ್‌ ಟ್ರಾನ್ಸ್‌ಪೋರ್ಟೇಷನ್‌ ಟೆಕ್ನಾಲಜಿ ಅಗ್ರಿಗೇಟರ್ ನಿಯಮಾವಳಿ- 2016′ ಅಡಿ ಟ್ಯಾಕ್ಸಿಗಳು ಅಂದರೆ ಚಾಲಕರಿಗೆ ಅನ್ವಯ ಆಗುವುದಿಲ್ಲ. ಕೆಲ ಅಗ್ರಿಗೇಟರ್‌ಗಳು, ಗ್ರಾಹಕರು ಮತ್ತು ಟ್ಯಾಕ್ಸಿ ಚಾಲಕರನ್ನು ಸಂಪರ್ಕಿಸಿಕೊಡುವುದು ಕಂಡುಬಂದಿದೆ. ಇದು ನಿಯಮ ಬಾಹಿರವಾಗಿದ್ದರಿಂದ ತಕ್ಷಣ ಸ್ಥಗಿತಗೊಳಿಸಬೇಕು ಎಂದು ಸೂಚಿಸಿದೆ.

ಈವರೆಗೆ ಯಾಕೆ ಮೌನ ವಹಿಸಿದ್ರು?: ನಿಜವಾಗಿಯೂ ನಮಗೆ ಆ್ಯಪ್‌ಗ್ಳು ವಿಧಿಸುವ ದರ ಎಷ್ಟೋ ಸಲ ಅಚ್ಚರಿ ಮೂಡಿಸಿದೆ. ಉದಾಹರಣೆಗೆ ಗ್ರಾಹಕರಿಂದ 80 ರೂ. ಪಡೆದರೆ, ನಮ್ಮ ಖಾತೆಗೆ 50 ರೂ. ಬರುತ್ತದೆ. ಉಳಿದದ್ದು ಕಂಪನಿಗಳಿಗೆ ಕಮೀಷನ್‌ ಹೋಗುತ್ತದೆ. ಆದರೆ, ನಾವೇನೂ ಮಾಡದ ಸ್ಥಿತಿ ಇದೆ. ಈಗ ಸ್ಥಗಿತಗೊಳಿಸುವುದಾಗಿ ಹೇಳುತ್ತಿದ್ದಾರೆ. ಆದರೆ, ನಿಯಮದಲ್ಲಿ ಇಲ್ಲದಿದ್ದರೂ ಇದುವರೆಗೆ ಯಾಕೆ ಸಾರಿಗೆ ಇಲಾಖೆ ಮೌನ ವಹಿಸಿತ್ತು ಎನ್ನುವುದೂ ಅಚ್ಚರಿಯಾಗಿದೆ ಎಂದು ರಾಜಾಜಿ ನಗರದ ಆಟೋ ಚಾಲಕ ಸಂತೋಷ್‌ ಕೇಳುತ್ತಾರೆ.

Advertisement

ಆ್ಯಪ್‌ಗಳಲ್ಲಿ ಪ್ರಯಾಣ ದರವನ್ನು ಹೆಚ್ಚಿಸಿದ ನಂತರ ಆಟೋಗಳಿಗೆ ಅರ್ಧಕ್ಕರ್ಧದಷ್ಟು ಗ್ರಾಹಕರ ಇಳಿಕೆ ಕಂಡುಬಂದಿದೆ. ತುರ್ತು ಸಂದರ್ಭಗಳಲ್ಲಿ ಪ್ರಯಾಣಿಸುವವರು, ವಾಹನಗಳಿಲ್ಲದವರು ಮಾತ್ರ ಆಟೋ ಅವಲಂಬಿಸುವಂತಾಗಿದೆ. ಸದ್ಯ ಸಾರಿಗೆ ಇಲಾಖೆ ಕ್ರಮ ಕೈಗೊಂಡಿದ್ದು ಸ್ವಾಗತಾರ್ಹ ಕ್ರಮ. ಇದರಿಂದ ದುಬಾರಿ ದರಕ್ಕೆ ಕಡಿವಾಣ ಬೀಳುವ ನಿರೀಕ್ಷೆ ಇದೆ ಎನ್ನುತ್ತಾರೆ ಆಟೋರಿಕ್ಷಾ ಚಾಲಕರ ಒಕ್ಕೂಟದ ಅಧ್ಯಕ್ಷ ಡಿ. ರುದ್ರಮೂರ್ತಿ.

ಇದನ್ನೂ ಓದಿ:5ಜಿ ಅಪ್‌ಡೇಟ್‌ ನೆಪದಲ್ಲಿ ವಂಚನೆ ಸಾಧ್ಯತೆ : ಲಿಂಕ್‌, ಒಟಿಪಿ ನೀಡಬೇಡಿ: ಪೊಲೀಸರ ಎಚ್ಚರಿಕೆ

ಒಲಾ-ಉಬರ್‌ ಚಾಲಕರ ಸಂಘದ ಅಧ್ಯಕ್ಷ ತನ್ವೀರ್‌ ಪಾಷ ಅವರು, ‘ಒಂದೂವರೆ ವರ್ಷದಿಂದ ಅಗ್ರಿಗೇಟರ್‌ ಆಟೋ, ದ್ವಿಚಕ್ರವಾಹನ ಸೇವೆ ಆರಂಭವಾಗಿದ್ದು, ಅನುಮತಿ ಇಲ್ಲದೆ ಆಟೋ ಓಡಿಸುತ್ತಿದ್ದಾರೆ. ಕ್ಯಾಬ್‌ಗಳಿಗೂ ಹೆಚ್ಚು ದರ ವಿಧಿಸಿ, ಸರ್ಕಾರ ನಿಗದಿಪಡಿಸಿದ ಹಣವನ್ನು ನಮಗೆ ಪಾವತಿಸಲಾಗುತ್ತಿತ್ತು. ಉಳಿದ ಹಣ ಅಗ್ರಿಗೇಟರ್‌ಗಳ ಪಾಲಾಗುತ್ತಿತ್ತು. ಈ ಬಗ್ಗೆ ಸಾರಿಗೆ ಇಲಾಖೆಗೆ ದೂರು ನೀಡಲಾಗಿತ್ತು. ಪ್ರಸ್ತುತ ಕ್ರಮ ಸ್ವಾಗತಾರ್ಹ’ ಎನ್ನುತ್ತಾರೆ.

ಒಲಾ, ಉಬರ್‌, ರ್ಯಾಪಿಡೊ ಮತ್ತಿತರ ಆ್ಯಪ್‌ ಅಗ್ರಿಗೇಟರ್‌ಗಳು ಗ್ರಾಹಕರಿಂದ ದುಪ್ಪಟ್ಟು ದರ ವಸೂಲು ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಆ ಕಂಪನಿಗಳಿಗೆ ನೋಟಿಸ್‌ ಜಾರಿ ಮಾಡಿ, ವಿವರಣೆ ನೀಡಲು ಸೂಚಿಸಲಾಗಿದೆ. ಒಂದು ವೇಳೆ ಸೂಕ್ತ ಪ್ರತಿಕ್ರಿಯೆ ಬರದಿದ್ದರೆ, ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಸಾರಿಗೆ ಇಲಾಖೆ ಆಯುಕ್ತರಾದ ಟಿ.ಎಚ್‌.ಎಂ. ಕುಮಾರ್‌.

ಆಟೋರಿಕ್ಷಾ ಪ್ರಸ್ತುತ ದರ

* 2 ಕಿ.ಮೀ.ಗೆ-30 ರೂ. (ಮೂರು ಜನ ಪ್ರಯಾಣ)

* 2 ಕಿ.ಮೀ. ನಂತರ ಪ್ರತಿ ಕಿ.ಮೀ.ಗೆ-15 ರೂ. ಹೆಚ್ಚಳ

ಕಾಯುವಿಕೆ ದರ

* ಮೊದಲ ಐದು ನಿಮಿಷ- ಉಚಿತ

* ನಂತರ ಪ್ರತಿ ಹದಿನೈದು ನಿಮಿಷಕ್ಕೆ- 5 ರೂ.

ಪ್ರಯಾಣಿಕರ ಲಗೇಜು ದರ

* ಮೊದಲ 20 ಕೆ.ಜಿ.ಗೆ- ಉಚಿತ

* ನಂತರದ ಪ್ರತಿ 20 ಕೆ.ಜಿ.ಗೆ- 5 ರೂ.

* ರಾತ್ರಿ ವೇಳೆ (ರಾ. 10-ಬೆ. 5ವರೆಗೆ)

* ಸಾಮಾನ್ಯ ದರ ಮತ್ತು ಸಾಮಾನ್ಯ ದರದ ಅರ್ಧಪಟ್ಟು

Advertisement

Udayavani is now on Telegram. Click here to join our channel and stay updated with the latest news.

Next