ಬೆಂಗಳೂರು: ಲಹರಿ ಆಡಿಯೋ ಸಂಸ್ಥೆಗೆ ಸೇರಿದ ಚಿತ್ರಗೀತೆಗಳನ್ನು ಓಲಾ ಕಂಪೆನಿ ಪ್ರೈಮ್ ಪ್ಲೇ ಟ್ಯಾಬ್ ಮೂಲಕ ಡೌನ್‌ಲೋಡ್ ಮಾಡಿಕೊಂಡು ಕ್ಯಾಬ್‌ಗಳಲ್ಲಿ ಅಳವಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಸಂಸ್ಥೆಯ ಮಾಲೀಕ ಲಹರಿ ವೇಲು ನೀಡಿದ ದೂರಿನ ಮೇರೆಗೆ ಜೀವನ್ ಭೀಮಾ ನಗರ ಠಾಣೆ ಸಿಬ್ಬಂದಿ ಓಲಾ ಕಂಪೆನಿಯ ಮೇಲೆ ದಾಳಿ ನಡೆಸಿದ್ದಾರೆ.
ಈ ವೇಳೆ ಓಲಾ ಸಂಸ್ಥೆ ಎಫ್ಎಂ ರೀತಿಯಲ್ಲಿ ತನ್ನ ಮುಖ್ಯಕಚೇರಿಯಿಂದ ಹಾಡುಗಳ ನಿರ್ವಹಣೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಹಾಗಾಗಿ ಸಂಸ್ಥೆಯ ವಿರುದ್ಧ ಕಾಪಿ ರೈಟ್ ಆಕ್ಟ್ ಅಡಿ ಪ್ರಕರಣ ದಾಖಲಿಸಲಾಗಿದೆ. ಈ ವೇಳೆ ಸಿಪಿಯು, ಡಿಸ್ ಪ್ಲೇ ಬೋರ್ಡ್, ಟ್ಯಾಬ್‌ಗಳು, ಮಾನಿಟರ್‌ಗಳು, ಕೀಬೋರ್ಡ್ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಓಲಾ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಭಾವೇಶ್ ಅಗರ್‌ವಾಲ್ ಮತ್ತು ಮುಖ್ಯ ತಾಂತ್ರಿಕ ಅಧಿಕಾರಿ ಅಂಕಿತ್ ಭಾತಿ ನಾಪತ್ತೆಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ. ಮೂಲಗಳ ಪ್ರಕಾರ ಆರೋಪಿಗಳು ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಆರೋಪಿಗಳು ಮೊಬೈಲ್ ನೆಟ್‌ವರ್ಕ್ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಹರಿ ಸಂಸ್ಥೆ ಹಕ್ಕು ಪಡೆದಿರುವ ಕನ್ನಡ, ತೆಲುಗು, ಹಿಂದಿ ಮುಂತಾದ ಭಾಷೆಗಳ ಮಾರುಕಟ್ಟೆಗೆ ಬಿಡುಗಡೆಯಾಗದಿರುವ ಚಿತ್ರಗೀತೆಗಳನ್ನು ಸಿಂಗಪುರದಲ್ಲಿ ಸ್ಥಾಪನೆ ಮಾಡಿರುವ ವಿಶೇಷ ಸರ್ವರ್ ಬಳಸಿ ಓಲಾ ಸಂಸ್ಥೆ ಡೌನ್‌ಲೋಡ್ ಮಾಡಿಕೊಳ್ಳುತ್ತಿದೆ. ನಂತರ ಕರ್ನಾಟಕ, ಕೊಲ್ಕತ್ತಾ, ದೆಹಲಿ, ತಮಿಳುನಾಡು ಸೇರಿದಂತೆ ನಾನಾ ರಾಜ್ಯಗಳಲ್ಲಿ ತಮ್ಮ ಕಂಪೆನಿಯ ಕಾರುಗಳಲ್ಲಿ ಪ್ರಸಾರ ಮಾಡುತ್ತಿದೆ. ಈ ಮೂಲಕ ಹಣ ಸಂಪಾದನೆ ಮಾಡುತ್ತಿದೆ.
ಬಾಹುಬಲಿ, ಸುಂದರಾಂಗ ಜಾಣ, ಗೌತಮಿ ಪುತ್ರ ಶಾತಕರ್ಣಿ ಇತರೆ ಚಿತ್ರಗಳ ಹಾಡುಗಳನ್ನು ಡೌನ್‌ಲೋಡ್ ಮಾಡಿಕೊಂಡು, ಓಲಾ ಕಂಪೆನಿಯ ಮುಖ್ಯಕಚೇರಿಯಿಂದ ನಿರ್ವಹಣೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ಓಲಾ ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ ಅಂಕಿತ್ ಭಾತಿ ಸಿಂಗಪುರದಲ್ಲಿ ಮುಖ್ಯ ಸರ್ವರ್‌ನ್ನು ಇಟ್ಟುಕೊಂಡು ಅಲ್ಲಿಂದಲೇ ಅಕ್ರಮ ನಡೆಸುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.