Advertisement

 ಎಣ್ಣೆತಾಳೆ ಕೃಷಿ: ವರವೇ? ಶಾಪವೇ?

06:00 AM Aug 06, 2018 | |

ಸಣ್ಣರೈತರಿಗೆ ಎಣ್ಣೆತಾಳೆ ಕೃಷಿಯಿಂದ ಲಾಭವಿಲ್ಲ. ಯಾಕೆಂದರೆ, ಮೊದಲ ಆರು ವರುಷ ಅದರಿಂದ ಯಾವುದೇ ಆದಾಯವಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ, ಎಣ್ಣೆತಾಳೆ ಕೃಷಿಗೆ ನೀರಾವರಿ ಅತ್ಯಗತ್ಯ. ಒಂದು ಎಣ್ಣೆತಾಳೆ ಮರಕ್ಕೆ ದಿನಕ್ಕೆ 300 ಲೀ. ನೀರುಣಿಸಬೇಕು. ಆಂಧ್ರಪ್ರದೇಶದಲ್ಲಿ ಎಣ್ಣೆತಾಳೆ ಬೆಳೆಸುತ್ತಿರುವ ಪ್ರದೇಶಗಳಲ್ಲಿ ವಾರ್ಷಿಕ ಸರಾಸರಿ ಮಳೆ ಪ್ರಮಾಣ 800ರಿಂದ 1,000 ಮಿಮೀ. ಇದು ಎಣ್ಣೆತಾಳೆ ಕೃಷಿಗೆ ಸಾಕಾಗದು. 

Advertisement

ನಮ್ಮ ದೇಶದಲ್ಲಿ ತಾಳೆ ಎಣ್ಣೆ ಬಳಕೆ 2001ರಿಂದೀಚೆಗೆ 30 ಲಕ್ಷ ಟನ್ನುಗಳಿಂದ ಒಂದು ಕೋಟಿ ಟನ್ನುಗಳಿಗೆ ಏರಿದೆ. ಅಂದರೆ, ಶೇ. 230ರಷ್ಟು ಏರಿಕೆ!

ಯಾಕೆ? ಯಾಕೆಂದರೆ ನಮ್ಮ ಸಸ್ಯಜನ್ಯ ಎಣ್ಣೆಯ ವಹಿವಾಟು ಜಗತ್ತಿನಲ್ಲೇ ನಾಲ್ಕನೆಯ ಸ್ಥಾನದಲ್ಲಿದೆ (ಯುಎಸ್‌ಎ, ಚೀನಾ ಮತ್ತು ಬ್ರೆಜಿಲ್‌ ದೇಶಗಳ ನಂತರ). ಆದರೆ, ಸಸ್ಯಜನ್ಯ ಎಣ್ಣೆಯ ಶೇಕಡಾ 70 ಬೇಡಿಕೆ ಪೂರೈಸಲಿಕ್ಕಾಗಿ, ನಮ್ಮ ದೇಶ ಎಣ್ಣೆಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಹಾಗೂ ನಮ್ಮ ದೇಶದ ಸಸ್ಯಜನ್ಯ ಎಣ್ಣೆ ಬೇಡಿಕೆಯ ಶೇ.60 ತಾಳೆಎಣ್ಣೆ ಮೂಲಕ ಪೂರೈಕೆ.

ಇದಕ್ಕೇನು ಕಾರಣ? 
ಉತ್ತರ ಸರಳ: ತಾಳೆಎಣ್ಣೆ ಅಗ್ಗದ ಎಣ್ಣೆ. ಇತರ ಸಸ್ಯಜನ್ಯ ಎಣ್ಣೆಗಳ ಬೆಲೆಗಿಂತ ಇದರ ಬೆಲೆ ಶೇ.20ರಷ್ಟು ಕಡಿಮೆ. ಮಾತ್ರವಲ್ಲ, ವಿಧವಿಧ ಬಳಕೆಗೆ ತಾಳೆಎಣ್ಣೆ ಸೂಕ್ತ. ಅಡುಗೆಗೆ ಹಾಗೂ ವಿವಿಧ ಆಹಾರ, ಗ್ರಾಹಕ ಬೇಡಿಕೆಯ ವಸ್ತುಗಳ ತಯಾರಿಗೆ ಇದರ ಬಳಕೆಯಾಗುತ್ತಿದೆ. ವನಸ್ಪತಿಯಿಂದ , ಐಸ್‌ಕ್ರೀಮ್‌, ತುಟಿಬಣ್ಣ, ಸಾಬೂನು ಮತ್ತು ಮುಖûೌರದ ನೊರೆಕಾರಕಗಳ ವರೆಗಿನ ಹಲವು ವಸ್ತುಗಳ ತಯಾರಿಗೆ ತಾಳೆಎಣ್ಣೆ ಉಪಯುಕ್ತ.

ಭಾರತ ಸರಕಾರ 1980ರ ದಶಕದ ಆರಂಭದಲ್ಲೇ ತಾಳೆಎಣ್ಣೆಯ ಬೇಡಿಕೆ ಹೆಚ್ಚಲಿದೆ ಎಂದು ನಿರೀಕ್ಷಿಸಿತ್ತು. ಹಾಗಾಗಿ, ಎಣ್ಣೆತಾಳೆ ಮರಗಳನ್ನು ಬೆಳೆಯಲು ಸೂಕ್ತವಾದ ಪ್ರದೇಶಗಳನ್ನು ಗುರುತಿಸಲಿಕ್ಕಾಗಿ ಸಮಿತಿಯೊಂದನ್ನು ರಚಿಸಿತು. 2012ರ ಹೊತ್ತಿಗೆ, ನಮ್ಮ ದೇಶದಲ್ಲಿ ಅಂತಹ 20 ಲಕ್ಷ ಹೆಕ್ಟೇರ್‌ ಜಮೀನನ್ನು ಗುರುತಿಸಲಾಗಿತ್ತು. ಜೊತೆಗೆ, ರಾಷ್ಟ್ರೀಯ ಎಣ್ಣೆಬೀಜ ಮತ್ತು ಎಣ್ಣೆತಾಳೆ ಮಿಷನನ್ನು (ಗುರಿ ನಿರ್ದೇಶಿತ ಯೋಜನೆ) ಜಾರಿ ಮಾಡಲು ನಿರ್ಧರಿಸಲಾಯಿತು. ಈ ಮಿಷನಿನ ಅನುಸಾರ, ರೈತರಿಗೆ ತರಬೇತಿ ಮತ್ತು ಸಬ್ಸಿಡಿ ಬೆಲೆಯಲ್ಲಿ ಗಿಡಗಳು ಹಾಗೂ ಒಳಸುರಿಗಳ ಒದಗಣೆ ಮಾಡುವುದು. ಅದಲ್ಲದೆ, ಎಣ್ಣೆತಾಳೆ ಬೆಳೆಯುವ ಪ್ರದೇಶಗಳಲ್ಲಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಖಾಸಗಿ ಕಂಪೆನಿಗಳನ್ನು ಆಹ್ವಾನಿಸುವುದು. ಈ ಮಿಷನಿನ ಪ್ರಕಾರ, ಎಣ್ಣೆತಾಳೆ ಬೆಳೆಯುವ 12 ರಾಜ್ಯಗಳು (ಕರ್ನಾಟಕ ಸಹಿತ) ಪ್ರತಿ ವರ್ಷ ಎಷ್ಟು ಹೆಚ್ಚುವರಿ ಪ್ರದೇಶದಲ್ಲಿ ಎಣ್ಣೆತಾಳೆ ಬೆಳೆಯಬೇಕೆಂದು ನಿರ್ಧರಿಸುತ್ತವೆ. ಆದರೆ, ಯಾವುದೇ ವರುಷ ಈ ಗುರಿ ಸಾಧನೆ ಆಗಿಲ್ಲ. ಇದರ ಪರಿಣಾಮವಾಗಿ, 2017-18ರಲ್ಲಿ ತಾಳೆ ಎಣ್ಣೆ ಆಮದಿಗಾಗಿ ಕೇಂದ್ರ ಸರಕಾರ ರೂ.45,917 ಕೋಟಿಯನ್ನು ವೆಚ್ಚ ಮಾಡಿದೆ. ಇದು, ಹಿಂದಿನ ವರ್ಷಗಳಿಗೆ ಹೋಲಿಸಿದಾಗ, ತಾಳೆಎಣ್ಣೆ ಆಮದಿಗೆ ಮಾಡಿದ ಅತ್ಯಧಿಕ ವೆಚ್ಚ!

Advertisement

ಕಳೆದ 40 ವರ್ಷಗಳಲ್ಲಿ ಸರಕಾರ ತೀವ್ರ ಪ್ರಯತ್ನ ಮಾಡಿದ್ದರೂ, ತಾಳೆಎಣ್ಣೆ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ನಮ್ಮ ದೇಶಕ್ಕೆ ಯಾಕೆ ಸಾಧ್ಯವಾಗಿಲ್ಲ? ಕಾರಣಗಳು ಹತ್ತು ಹಲವು. ಭಾರತದಲ್ಲಿ, ಎಣ್ಣೆತಾಳೆ ಕೃಷಿಯಲ್ಲಿ ಮೊದಲ ಸ್ಥಾನದಲ್ಲಿರುವ ಆಂಧ್ರಪ್ರದೇಶದ ಸ್ಥಿತಿಗತಿ ಪರಿಶೀಲಿಸೋಣ. ಅಲ್ಲಿ ಎಣ್ಣೆತಾಳೆ ಕೃಷಿ ಲಾಭದಾಯಕ ಎನ್ನುವವರು ದೊಡ್ಡ ಜಮೀನಾರರು. ಉದಾಹರಣೆಗೆ, ಅಲ್ಲಿನ ಪಶ್ಚಿಮ ಗೋದಾವರಿ ಜಿಲ್ಲೆಯ ಚಿನ್ನತಾಡೆಪಲ್ಲಿ ಗ್ರಾಮದ 63 ವಯಸ್ಸಿನ ರಾಜಾರಾಮ ಪಿಚಿಕುಳ 12 ಹೆಕ್ಟೇರ್‌ ಜಮೀನಿನ ಮಾಲೀಕ. ಅದರಲ್ಲಿ ಮೂರು ಹೆಕ್ಟೇರಿನಲ್ಲಿ ಎಣ್ಣೆತಾಳೆ ಕೃಷಿ. ಪ್ರತಿ ವಾರ, ಎಣ್ಣೆತಾಳೆಯ ಹಣ್ಣುಗಳನ್ನು ತನ್ನ ಗ್ರಾಮದಲ್ಲಿರುವ ತ್ರೀ-ಎಫ್ ಆಯಿಲ್‌ ಪಾಮ್‌ ಅಗ್ರೋಟೆಕ್‌ ಲಿಮಿಟೆಡ್‌ ಕಂಪೆನಿಯ ಸಂಗ್ರಹಣಾ ಕೇಂದ್ರಕ್ಕೆ ಒಯ್ಯುತ್ತಾರೆ. ಅದರ ಬೆಲೆ ನೇರವಾಗಿ ಅವರ ಬ್ಯಾಂಕ್‌ ಖಾತೆಗೆ ಜಮೆಯಾಗುತ್ತದೆ. ಎಣ್ಣೆತಾಳೆ ಕೃಷಿಯಿಂದ ನನಗೆ ಪ್ರತಿ ಹೆಕ್ಟೇರಿನಿಂದ ವರ್ಷಕ್ಕೆ ಸರಾಸರಿ ಒಂದು ಲಕ್ಷ$ ರೂಪಾಯಿ ಆದಾಯ ಎನ್ನುತ್ತಾರೆ. ಹತ್ತಿರದ ಕೊಮ್ಮುಗುಡೆಮ… ಗ್ರಾಮದಲ್ಲಿ 12 ಹೆಕ್ಟೇರಿನಲ್ಲಿ ಎಣ್ಣೆತಾಳೆ ಬೆಳೆಯುತ್ತಿರುವ ಬಿ.ವಿ. ಸುಬ್ಬರಾವ್‌ ಕೂಡ, ಅದರಿಂದ ನಿಶ್ಚಿತ ಆದಾಯವಿದೆ ಎಂದು ಹೇಳುತ್ತಾರೆ.

ಆದರೆ, ಎಲ್ಲ ರೈತರೂ ಇದನ್ನು ಒಪ್ಪುವುದಿಲ್ಲ. ಉದಾಹರಣೆಗೆ, ಪಕ್ಕದ ಕೃಷ್ಣಾ ಜಿಲ್ಲೆಯ ಪೊತುರೆಡ್ಡಿಪಳ್ಳಿ ಗ್ರಾಮದ ಶ್ರೀಮನ್‌ ನಾರಾಯಣ ಎಂಬ ರೈತ 2.6 ಹೆಕ್ಟೇರಿನಲ್ಲಿ ಎಣ್ಣೆತಾಳೆ ಮರಗಳನ್ನು ಬೆಳೆಸಿದ್ದರು. ಈ ವರ್ಷ ಮೇ ತಿಂಗಳಿನಲ್ಲಿ ತಾವು ಬೆಳೆಸಿದ್ದ ಮೂರು ವರ್ಷ ವಯಸ್ಸಿನ 400 ಎಣ್ಣೆತಾಳೆ ಮರಗಳನ್ನೆಲ್ಲ ಬೇರು ಸಹಿತ ಕಿತ್ತು ಹಾಕಿದರು. ಇನ್ನು ಎರಡೇ ವರ್ಷಗಳಲ್ಲಿ ಆ ಮರಗಳಿಂದ ಫ‌ಸಲು ಸಿಗುತ್ತಿತ್ತು. ಆದರೆ ನನಗೆ ಅವುಗಳನ್ನು ನಿರ್ವಹಿಸುವ ವೆಚ್ಚ ತಾಳಿಕೊಳ್ಳಲು ಸಾಧ್ಯವಾಗಲಿಲ್ಲ ಎನ್ನುತ್ತಾರೆ ಶ್ರೀಮನ್‌ ನಾರಾಯಣ. ಎಣ್ಣೆತಾಳೆ ಮರಗಳಿಗೆ ಪೂ›ನಿಂಗ್‌ ಮತ್ತು ನೀರಾವರಿ ಅಗತ್ಯ. ಇದಕ್ಕಾಗಿ ಅವರು ಒಬ್ಬ ಕೆಲಸಗಾರನಿಗೆ ಪಾವತಿಸುತ್ತಿದ್ದ ಮಜೂರಿ ವರ್ಷಕ್ಕೆ ರೂ.84,000. ಸಣ್ಣರೈತರಿಗೆ ಎಣ್ಣೆತಾಳೆ ಕೃಷಿಯಿಂದ ಲಾಭವಿಲ್ಲ. ಯಾಕೆಂದರೆ, ಮೊದಲ ಆರು ವರುಷ ಅದರಿಂದ ಯಾವುದೇ ಆದಾಯವಿಲ್ಲ. ಅದಲ್ಲದೆ, ಎಣ್ಣೆತಾಳೆ ಹಣ್ಣುಗಳ ಬೆಲೆಯ ಏರಿಳಿತ ಆಗುತ್ತಲೇ ಇರುತ್ತದೆ ಎನ್ನುತ್ತಾರೆ. 

ಅದು ನಿಜ. ರೈತರಿಂದ ಎಣ್ಣೆತಾಳೆ ಹಣ್ಣುಗಳ ಖರೀದಿ ಬೆಲೆಯನ್ನು ಪ್ರತಿ ತಿಂಗಳೂ ರಾಜ್ಯ ಸರಕಾರ ನಿಗದಿ ಪಡಿಸುತ್ತದೆ. ಕಳೆದ 15 ವರ್ಷಗಳ ಮಾರುಕಟ್ಟೆ ಬೆಲೆ ಪರಿಶೀಲಿಸಿದರೆ ಸ್ಪಷ್ಟವಾಗುವ ಒಂದು ಅಂಶ: ಮಾರುಕಟ್ಟೆ ಬೆಲೆಯಲ್ಲಿ ಶೇ.50 ತನಕ ಏರಿಕೆ ಮತ್ತು ಇಳಿಕೆ ಆಗಿದೆ!

ಎಲ್ಲದಕ್ಕಿಂತ ಮುಖ್ಯವಾಗಿ, ಎಣ್ಣೆತಾಳೆ ಕೃಷಿಗೆ ನೀರಾವರಿ ಅತ್ಯಗತ್ಯ. ಒಂದು ಎಣ್ಣೆತಾಳೆ ಮರಕ್ಕೆ ದಿನಕ್ಕೆ 300 ಲೀ. ನೀರುಣಿಸಬೇಕು. ಆಂಧ್ರಪ್ರದೇಶದಲ್ಲಿ ಎಣ್ಣೆತಾಳೆ ಬೆಳೆಸುತ್ತಿರುವ ಪ್ರದೇಶಗಳಲ್ಲಿ ವಾರ್ಷಿಕ ಸರಾಸರಿ ಮಳೆ ಪ್ರಮಾಣ 800ರಿಂದ 1,000 ಮಿಮೀ. ಇದು ಎಣ್ಣೆತಾಳೆ ಕೃಷಿಗೆ ಸಾಕಾಗದು. ಆದ್ದರಿಂದ, ಎಣ್ಣೆತಾಳೆ ಮರಗಳಿಗೆ ನೀರೊದಗಿಸಲು ಅಂತರ್ಜಲದ ಬಳಕೆ. ಭತ್ತ ಮತ್ತು ಕಬ್ಬಿನ ಬೆಳೆಗೂ ಎಕರೆಗೆ ಅಷ್ಟೇ ಪ್ರಮಾಣದ ನೀರು ಬೇಕೆಂದು ವಾದಿಸುವವರು ಗಮನಿಸಬೇಕಾದ ಸತ್ಯಾಂಶ: ಎಣ್ಣೆತಾಳೆ ಬಹುವಾರ್ಷಿಕ ಬೆಳೆ ಮತ್ತು ಆ ಮರಗಳಿಗೆ ವರ್ಷವಿಡೀ ಪ್ರತಿದಿನ ನೀರುಣಿಸಬೇಕು. ಆದ್ದರಿಂದ, ಭಾರೀ ಮಳೆಯಾಗುವ ಪ್ರದೇಶಗಳಲ್ಲಿ ಮಾತ್ರ ಎಣ್ಣೆತಾಳೆ ಮರಗಳನ್ನು ಬೆಳೆಸಬಹುದು. ಕಡಿಮೆ ಮಳೆಯಾಗುವಲ್ಲಿ ಎಣ್ಣೆತಾಳೆ ಬೆಳೆಸಿದರೆ, ನಮ್ಮ ದೇಶದ ನೀರಿನ ಕೊರತೆಯ ಸಮಸ್ಯೆ ಉಲ್ಬಣವಾಗಲಿದೆ.

ಭಾರತದಲ್ಲಿ 2ನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ ಎಣ್ಣೆತಾಳೆ ಕೃಷಿಯ ಸ್ಥಿತಿಗತಿ ಹೇಗಿದೆ? ಇಲ್ಲಿ, 2,60,000 ಹೆಕ್ಟೇರುಗಳಲ್ಲಿ ಎಣ್ಣೆತಾಳೆ ಬೆಳೆಯಬಹುದೆಂದು ಮಾರ್ಚ್‌ 2017ರವರೆಗೆ ಅಂದಾಜಿಸಲಾಗಿದೆ. ಆದರೆ, ಬೆಳೆದಿರೋದು 42,397 ಹೆಕ್ಟೇರುಗಳಲ್ಲಿ ಮಾತ್ರ. ಈಗಿರುವ ಎಣ್ಣೆತಾಳೆ ತೋಟಗಳಿಂದ 2016-17ರಲ್ಲಿ ಪಡೆಯಲಾಗಿರುವ ಹಣ್ಣುಗಳ ಫ‌ಸಲು 11,912 ಟನ್‌ ಮತ್ತು ಪಾಮೆಣ್ಣೆ 2,051 ಟನ್‌. ಅದೇನಿದ್ದರೂ, ದಶಕಗಳ ಮುಂಚೆ ಶಿವಮೊಗ್ಗ ಪ್ರದೇಶದಲ್ಲಿ ಎಣ್ಣೆತಾಳೆ ಬೆಳೆಸಿದ್ದ ಹಲವು ರೈತರು, ಸಂಸ್ಕರಣಾ ಕಾರ್ಖಾನೆಗಳಿಲ್ಲದ ಕಾರಣ ಅವನ್ನು ಬೇರುಸಹಿತ ಕಿತ್ತುಹಾಕಿದ್ದನ್ನು ಮರೆಯಲಾದೀತೇ? ಈಗಲೂ ನಮ್ಮ ದೇಶದಲ್ಲಿರೋದು ಕೇವಲ 24 ತಾಳೆಎಣ್ಣೆ ಸಂಸ್ಕರಣಾ ಕಾರ್ಖಾನೆಗಳು (ಆಂಧ್ರಪ್ರದೇಶದಲ್ಲಿ 11 ಮತ್ತು ಕರ್ನಾಟಕದಲ್ಲಿ ಕೇವಲ 4). ಹೆಚ್ಚುತ್ತಿರುವ ಎಣ್ಣೆತಾಳೆ ಹಣ್ಣುಗಳ ಸಂಸ್ಕರಣೆಗೆ ಇವು ಸಾಲುವುದಿಲ್ಲ. ಮೇ 2018ರಲ್ಲಿ ಆಂಧ್ರಪ್ರದೇಶದ ಚಿಂತಂಪಲ್ಲಿಯಲ್ಲಿ ಎಣ್ಣೆತಾಳೆ ಹಣ್ಣು ಖರೀದಿಸುವ ಗೋದ್ರೆಜ… ಎಣ್ಣೆ ಕಾರ್ಖಾನೆಯಲ್ಲಿ ರೈತರು ಉಪವಾಸ ಮುಷ್ಕರ ನಡೆಸಿದ್ದು (ಕನಿಷ್ಠ ಬೆಂಬಲ ಬೆಲೆ ಪಡೆಯಲಿಕ್ಕಾಗಿ) ಎಲ್ಲ ರೈತರಿಗೂ ಎಚ್ಚರಿಕೆಯ ಗಂಟೆಯಾಗಲಿ.
 
– ಅಡ್ಡೂರು ಕೃಷ್ಣ ರಾವ್‌ 

Advertisement

Udayavani is now on Telegram. Click here to join our channel and stay updated with the latest news.

Next