Advertisement
ತೈಲ ಉತ್ಪಾದಕ ರಾಷ್ಟ್ರಗಳು ಮತ್ತು ರಷ್ಯಾ ನೇತೃತ್ವದ ಇತರೆ ಮಿತ್ರರಾಷ್ಟ್ರಗಳ ಒಕ್ಕೂಟವು ಅಕ್ಟೋಬರ್ ಮೊದಲ ವಾರದಲ್ಲೇ ತೈಲ ಉತ್ಪಾದನೆಯನ್ನು ದಿನಕ್ಕೆ 2 ದಶಲಕ್ಷ ಬ್ಯಾರೆಲ್‌ಗೆ ಕಡಿತಗೊಳಿಸುವ ತೀರ್ಮಾನವನ್ನು ಕೈಗೊಂಡಿತ್ತು. ನವೆಂಬರ್ 1ರಿಂದಲೇ ಇದು ಅನುಷ್ಠಾನಗೊಳ್ಳಲಿದೆ ಎಂದೂ ಒಕ್ಕೂಟ ತಿಳಿಸಿತ್ತು. ಜಾಗತಿಕ ಆರ್ಥಿಕತೆಯ ಇಂದಿನ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದೂ ಒಕ್ಕೂಟದ ರಾಷ್ಟ್ರಗಳು ತಿಳಿಸಿದ್ದವು.
Related Articles
ತೈಲ ಉತ್ಪಾದನೆ ಕಡಿತ ನಿರ್ಧಾರದಿಂದ ಜಗತ್ತು “ಆರ್ಥಿಕ ಅನಿಶ್ಚಿತತೆ’ಯನ್ನು ಎದುರಿಸಬಹುದು ಎಂಬ ಅಮೆರಿಕ ರಾಯಭಾರಿಯ ಎಚ್ಚರಿಕೆಯ ಹೊರತಾಗಿಯೂ ಸೌದಿ ಅರೇಬಿಯಾ ಮತ್ತು ಸಂಯುಕ್ತ ಅರಬ್ ಒಕ್ಕೂಟ(ಯುಎಇ)ವು ಒಪೆಕ್ ರಾಷ್ಟ್ರಗಳ ನಿರ್ಧಾರವನ್ನು ಸಮರ್ಥಿಸಿಕೊಂಡಿವೆ. ಇದು ಅಮೆರಿಕ ಮತ್ತು ಗಲ್ಫ್ ಅರಬ್ ರಾಷ್ಟ್ರಗಳ ನಡುವೆ ದೊಡ್ಡಮಟ್ಟದ ಬಿರುಕು ಮೂಡಿರುವುದನ್ನು ದೃಢಪಡಿಸಿದೆ. ಅಬುಧಾಬಿ ಅಂತಾರಾಷ್ಟ್ರೀಯ ಪೆಟ್ರೋಲಿಯಂ ಪ್ರದರ್ಶನ ಮತ್ತು ಸಮಾವೇಶದಲ್ಲಿ ಮಾತನಾಡಿದ ಸೌದಿ ಅರೇಬಿಯಾ ಇಂಧನ ಸಚಿವ, ರಾಜಕುಮಾರ ಅಬ್ದುಲ್‌ಅಜೀಜ್ ಬಿನ್ ಸಲ್ಮಾನ್, “ನಾವು ನಮಗಲ್ಲದೇ ಬೇರ್ಯಾರಿಗೂ ಋಣಿಯಾಗಿಲ್ಲ. ಜಗತ್ತಿಗೆ ಎಷ್ಟು ಅಗತ್ಯವಿದೆಯೋ ಅಷ್ಟು ತೈಲವನ್ನು ನಾವು ಪೂರೈಕೆ ಮಾಡುತ್ತಿದ್ದೇವೆ’ ಎಂದಿದ್ದಾರೆ.
Advertisement
ಅಮೆರಿಕ ಕೆಂಡ:ಒಪೆಕ್ ನಿರ್ಧಾರದ ವಿರುದ್ಧ ಅಮೆರಿಕದ ಜನಪ್ರತಿನಿಧಿಗಳು ಕೆಂಡ ಕಾರಿದ್ದು, ನಿಮ್ಮ ನಿರ್ಧಾರದಿಂದಾಗಿ ಗ್ಯಾಸೊಲಿನ್ ದರ ಮತ್ತಷ್ಟು ಹೆಚ್ಚಳವಾಗುತ್ತಾ ಸಾಗಲಿದೆ. ಅಂತಿಮವಾಗಿ ನಾವು ಆರ್ಥಿಕ ಅನಿಶ್ಚಿತತೆಯ ಬೆಂಕಿಗೆ ಬೀಳಲಿದ್ದೇವೆ. ಇಂಧನ ದರವು ಯಾವತ್ತೂ ಆರ್ಥಿಕ ಪ್ರಗತಿಗೆ ಪೂರಕವಾಗಿರಬೇಕು. ಇಲ್ಲದಿದ್ದರೆ, ಅವುಗಳ ದರವು ಗಗನಕ್ಕೇರಿ, ಆರ್ಥಿಕತೆಯ ಪತನಕ್ಕೆ ಕಾರಣವಾಗುತ್ತದೆ ಎಂದಿದ್ದಾರೆ. ಇನ್ನು, ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕ ಮತ್ತು ಯುರೋಪ್‌ನ ವಿಶ್ಲೇಷಕರು, ಹಣದುಬ್ಬರ ಮತ್ತು ಬಡ್ಡಿ ದರ ಏರಿಕೆ, ಉಕ್ರೇನ್ ಮೇಲೆ ರಷ್ಯಾ¬ ಯುದ್ಧದಿಂದ ಆಹಾರ ಮತ್ತು ತೈಲ ಸರಬರಾಜಿನ ಮೇಲೆ ಪ್ರತಿಕೂಲ ಪರಿಣಾಮದಿಂದಾಗಿ ಆರ್ಥಿಕ ಹಿಂಜರಿತದ ತೂಗುಕತ್ತಿ ಪಾಶ್ಚಿಮಾತ್ಯ ರಾಷ್ಟ್ರಗಳ ಮೇಲೆ ತೂಗುತ್ತಿದೆ ಎಂದು ಹೇಳಿದ್ದಾರೆ. ಕಚ್ಚಾ ತೈಲ ಬೆಲೆ ಇಳಿಕೆ
ಚೀನದಲ್ಲಿ ಮತ್ತೆ ಕೊರೊನಾ ನಿಯಂತ್ರಣ ಕ್ರಮಗಳನ್ನು ಕಟ್ಟು ನಿಟ್ಟಾಗಿ ಜಾರಿ ಮಾಡಿದ್ದರಿಂದ, ಕೈಗಾರಿಕಾ ಉತ್ಪಾದನೆ ಪ್ರಮಾಣ ಉಳಿಮುಖಗೊಳ್ಳುವ ಭೀತಿಯ ಹಿನ್ನೆಲೆಯಲ್ಲಿ ಸೋಮವಾರ ಕಚ್ಚಾ ತೈಲ ಬೆಲೆ ಇಳಿಕೆಯಾಗಿದೆ. ಬ್ರೆಂಟ್ ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ ಶೇ.0.7 ಇಳಿಕೆಯಾಗಿ, 95.08 ಡಾಲರ್‌ಗೆ ಇಳಿಕೆಯಾಗಿದೆ. ಶುಕ್ರವಾರ (ಅ.28)ಕ್ಕೆ ಹೋಲಿಕೆ ಮಾಡಿದರೆ ಶೇ.1.2ರ ವರೆಗೆ ಇಳಿಕೆಯಾಗಿದೆ. ಭಾರತದ ಮೇಲೇನು ಪರಿಣಾಮ?
– ಪೆಟ್ರೋಲ್, ಡೀಸೆಲ್ ಸೇರಿದಂತೆ ತೈಲೋತ್ಪನ್ನಗಳ ದರದಲ್ಲಿ ಭಾರೀ ಏರಿಕೆಯಾಗಬಹುದು.
– ತೈಲ ದರ ಏರಿಕೆಯಾದ ಕೂಡಲೇ ಸಹಜವಾಗಿಯೇ ಹಣದುಬ್ಬರ ಮತ್ತಷ್ಟು ಏರಿಕೆಯಾಗಬಹುದು
– ಹಣದುಬ್ಬರ ಹೆಚ್ಚಾದಾಗ ಆಹಾರ ಸೇರಿದಂತೆ ಅಗತ್ಯ ವಸ್ತುಗಳಿಗೆ ಜನ ವೆಚ್ಚ ಮಾಡುವುದನ್ನು ತಗ್ಗಿಸಬಹುದು
– ಹಣದುಬ್ಬರದ ಬರೆ ತಗ್ಗಿಸಲು ಆರ್‌ಬಿಐ ಸಾಲದ ಮೇಲಿನ ಬಡ್ಡಿಯನ್ನು ಇನ್ನಷ್ಟು ಹೆಚ್ಚಿಸಬಹುದು