ಕೋವಿಡ್ ಹಾಗೂ ಲಾಕ್‌ಡೌನ್ ಎದುರಿಟ್ಟ ಸವಾಲುಗಳಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಸಾಮಾನ್ಯ ಭಾರತೀಯರಿಗೆ ಈಗ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯು ಹೊಸ ಸಮಸ್ಯೆಯಾಗಿ ಬದಲಾಗುತ್ತಿದೆ. ಕಳೆದೊಂದು ತಿಂಗಳಿಂದ ಸ್ಥಿರತೆ ಕಾಯ್ದುಕೊಂಡಿದ್ದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಹಠಾತ್ತನೆ ಹೆಚ್ಚಳವಾಗಿದೆ. ಸರಕಾರಿ ಸ್ವಾಮ್ಯದ ತೈಲ ಮಾರಾಟ ಕಂಪೆನಿಗಳು ಇಂಧನ ಬೆಲೆಯನ್ನು ಹೆಚ್ಚಿಸಿದ ಕಾರಣ, ಪೆಟ್ರೋಲ್ ಬೆಲೆಯು ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿ ಜನಸಾಮಾನ್ಯರು ತತ್ತರಿಸುವಂತೆ ಮಾಡಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆ ಕಾಣಿಸಿಕೊಂಡಿರುವುದೇ ಭಾರತದಲ್ಲಿ ಬೆಲೆ ದುಬಾರಿಯಾಗಲು ಕಾರಣ ಎನ್ನಲಾಗುತ್ತದೆ. ಮಾರುಕಟ್ಟೆ ತಜ್ಞರ ಪ್ರಕಾರ, ಜಗತ್ತಿನ ಅತೀದೊಡ್ಡ ತೈಲ ರಫ್ತುದಾರ ರಾಷ್ಟ್ರವಾಗಿರುವ ಸೌದಿ ಅರೇಬಿಯಾ ತೈಲೋತ್ಪಾದನೆಯನ್ನು ಕಡಿತಗೊಳಿಸುವ ನಿರ್ಧಾರಕ್ಕೆ ಬಂದಿರುವುದೇ ಬೆಲೆ ಏರಿಕೆಗೆ ಕಾರಣ. ಒಪೆಕ್ ರಾಷ್ಟ್ರಗಳು ಹಾಗೂ ಇತರ ಪ್ರಮುಖ ತೈಲೋತ್ಪಾದನಾ ರಾಷ್ಟ್ರಗಳೊಂದಿಗೆ ನಡೆದ ಸಭೆಯಲ್ಲಿ ಸೌದಿ ಅರೇಬಿಯಾ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ನಿತ್ಯ 10 ಲಕ್ಷ ಬ್ಯಾರೆಲ್‌ಗಳಷ್ಟು ಆಂತರಿಕ ಉತ್ಪಾದನೆಯನ್ನು ಕಡಿತಗೊಳಿಸುವುದಾಗಿ ಹೇಳಿದೆ. ಈ ಕಾರಣದಿಂದಾಗಿ, ಕಳೆದು 10 ತಿಂಗಳುಗಳಲ್ಲೇ ಜಾಗತಿಕ ಕಚ್ಚಾ ತೈಲದ ಬೆಲೆಯಲ್ಲಿ ಈ ಪರಿ ಹೆಚ್ಚಳ ಕಾಣಿಸಿಕೊಂಡಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಪೆಟ್ರೋಲ್ ಬೆಲೆ ಇನ್ನೆಷ್ಟು ಹೆಚ್ಚಬಹುದೋ ಎನ್ನುವ ಆತಂಕ ಭಾರತೀಯರನ್ನು ಕಾಡುತ್ತಿದೆ.
ಆದಾಗ್ಯೂ ತೈಲ ಮಾರುಕಟ್ಟೆಯಲ್ಲಿ ಆಗುವ ಬದಲಾವಣೆಗಳಿಗೆ ಅನುಗುಣವಾಗಿ ಇಂಧನ ಬೆಲೆಯನ್ನು ನಿತ್ಯ ಪರಿಷ್ಕರಿಸಬೇಕಿದ್ದರೂ ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸರಕಾರಿ ಸ್ವಾಮ್ಯದ ತೈಲ ಮಾರಾಟ ಕಂಪೆನಿಗಳು ಹಲವು ಸಮಯದವರೆಗೆ ಹಾಗೆ ಮಾಡಿರಲಿಲ್ಲ. ಆದರೆ ಈಗ ಏಕಾಏಕಿ ಬೆಲೆ ಹೆಚ್ಚಿಸುತ್ತಾ ಹೊರಟಿರುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಎದುರಾಗುತ್ತದೆ. ಏಕೆಂದರೆ ಪೆಟ್ರೋಲ್ ಹಾಗೂ ಡೀಸೆಲ್‌ನ ಮೇಲಿನ ಅಧಿಕ ತೆರಿಗೆಯೂ ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳಕ್ಕೆ ಕಾರಣ ಎನ್ನುವುದನ್ನು ಅಲ್ಲಗಳೆಯಲಾಗದು.
ಒಂದೆಡೆ ಜಾಗತಿಕ ಕಚ್ಚಾತೈಲದ ಬೆಲೆ ಹೆಚ್ಚುತ್ತಿದ್ದಂತೆಯೇ, ಬೆಲೆ ಹೆಚ್ಚಿಸುವ ಕಂಪೆನಿಗಳು, ಕಚ್ಚಾತೈಲದ ಬೆಲೆ ಇಳಿಕೆಯಾದಾಗ ಮಾತ್ರ ಸುಮ್ಮನಾಗಿಬಿಡುತ್ತವೆ. ಕಳೆದ ಮಾರ್ಚ್ ತಿಂಗಳಲ್ಲಿ ಕೋವಿಡ್ ಹಾವಳಿ, ತತ್ಪರಿಣಾಮವಾಗಿ ವಿವಿಧ ದೇಶಗಳಲ್ಲಿ ಜಾರಿಯಾದ ಲಾಕ್‌ಡೌನ್‌ನಿಂದಾಗಿ ಜಾಗತಿಕ ಕಚ್ಚಾತೈಲದ ಬೇಡಿಕೆಯಲ್ಲಿ ಅಪಾರ ಕುಸಿತವಾಗಿ, ಬೆಲೆಯೂ ಗಣನೀಯವಾಗಿ ತಗ್ಗಿತ್ತು.
ಆಗ ತೈಲ ಮಾರಾಟ ಕಂಪೆನಿಗಳು, ಅದರ ಪ್ರಯೋಜನವನ್ನು ಗ್ರಾಹಕರಿಗೆ ತಲುಪಿಸುವ ಪ್ರಯತ್ನ ಮಾಡಲಿಲ್ಲ. ಆದರೆ ಕಚ್ಚಾತೈಲದ ಬೆಲೆ ಏರಿಕೆಯಾದಾಗ ಮಾತ್ರ, ಇದು ಅನಿವಾರ್ಯ ಎಂಬಂತೆ ಅತ್ತ ಬೆರಳು ತೋರಿಸುತ್ತದೆ. ಕೇಂದ್ರವು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವ ಆಲೋಚನೆ ಇಲ್ಲ ಎಂಬ ನಿಲುವಿನಲ್ಲಿದೆ. ಇತ್ತ, ಪೆಟ್ರೋಲಿಯಂನಿಂದ ಕುಸಿದ ತಮ್ಮ ಆರ್ಥಿಕತೆಯನ್ನು ಸರಿಪಡಿಸಬೇಕು ಎಂಬ ಹಠಕ್ಕೆ ಬಿದ್ದಿರುವ ರಾಜ್ಯ ಸರಕಾರಗಳೂ ತೆರಿಗೆ ತಗ್ಗಿಸಲು ಸಿದ್ಧವಿಲ್ಲ. ರಾಜ್ಯ ಸರಕಾರಗಳು ಮಾರಾಟ ತೆರಿಗೆ ಹೆಚ್ಚಿಸಿದಾಗ ಕಂಪೆನಿಗಳೂ ಆ ಹೊರೆಯನ್ನು ಗ್ರಾಹಕರ ಮೇಲೆ ಹಾಕಿದ್ದನ್ನು ಗಮನಿಸಿದ್ದೇವೆ.
ಈಗಲೂ ದೇಶವಾಸಿಗಳು ಕೊರೊನಾ ನೀಡಿರುವ ಆರ್ಥಿಕ ಪೆಟ್ಟಿನಿಂದ ಚೇತರಿಸಿಕೊಳ್ಳಲು ಪರದಾಡುತ್ತಿದ್ದಾರೆ. ಈ ಕಾರಣಕ್ಕಾಗಿಯೇ, ರಾಜ್ಯ-ಕೇಂದ್ರ ಸರಕಾರ ಗಳು-ಪೆಟ್ರೋಲಿಯಂ ಕಂಪೆನಿಗಳು ಒಂದಾಗಿ ಕುಳಿತು, ಜನರ ಮೇಲಿನ ಹೊರೆ ತಗ್ಗಿಸುವ ನಿಟ್ಟಿನಲ್ಲಿ ನಿರ್ಧಾರಗಳನ್ನು ಕೈಗೊಳ್ಳುವಂತಾಗಲಿ.