ಅಲ್ಮಾಟಿ(ಕಝಕಿಸ್ತಾನ್): ಕಝಕಿಸ್ತಾನ್ ನಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿರುವ ಭಾರೀ ಪ್ರತಿಭಟನೆ, ಘರ್ಷಣೆಯಲ್ಲಿ 160ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ:ದಿಟ್ಟ ಹೋರಾಟದ ಚಂಪಾ; ಇಂದಿರಾಗಾಂಧಿ ತುರ್ತು ಪರಿಸ್ಥಿತಿ ವಿರೋಧಿಸಿ ಅಂದು ಜೈಲು ಸೇರಿದ್ರು…
ಸಚಿವಾಲಯದ ಮಾಹಿತಿ ಪ್ರಕಾರ, ದೇಶದ ಅತೀ ದೊಡ್ಡ ನಗರವಾದ ಅಲ್ಮಾಟಿಯಲ್ಲಿ 103 ಮಂದಿ ಸಾವನ್ನಪ್ಪಿದ್ದು, ಘಟನೆಯಲ್ಲಿ ನಾಗರಿಕರು ಮಾತ್ರವೇ ಸಾವನ್ನಪ್ಪಿದ್ದಾರೆಯೇ ಅಥವಾ ಭದ್ರತಾ ಸಿಬಂದಿಗಳು ಮೃತಪಟ್ಟಿದ್ದಾರೆಯೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ ಎಂದು ವರದಿ ಹೇಳಿದೆ.
ಗಲಭೆ ಪ್ರಕರಣದಲ್ಲಿ ಈವರೆಗೆ ಸುಮಾರು 6,000 ಮಂದಿಯನ್ನು ಬಂಧಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಸಾವಿನ ಪ್ರಮಾಣ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ ಎಂದು ವರದಿ ವಿವರಿಸಿದೆ.
ಈ ಮೊದಲು ಅಧಿಕಾರಿಗಳು ನೀಡಿದ್ದ ಮಾಹಿತಿ ಪ್ರಕಾರ, 26 ಮಂದಿ ಶಸ್ತ್ರ ಸಜ್ಜಿತ 26 ಮಂದಿ ಕ್ರಿಮಿನಲ್ಸ್ ಹಾಗೂ 16 ಮಂದಿ ಭದ್ರತಾ ಅಧಿಕಾರಿಗಳು ಸಾವನ್ನಪ್ಪಿರುವುದಾಗಿ ತಿಳಿಸಿದ್ದರು. ಆದರೆ ಭಾನುವಾರ ಸಂಜೆ ಸರ್ಕಾರ ನೀಡಿದ್ದ ಅಧಿಕೃತ ಮಾಹಿತಿಯನ್ನು ತೆಗೆದುಹಾಕಲಾಗಿತ್ತು ಎಂದು ವರದಿ ಹೇಳಿದೆ.
ಇಂಧನ ಬೆಲೆ ಏರಿಕೆ, ಭುಗಿಲೆದ್ದ ಹಿಂಸಾಚಾರ:
ಕಝಕಿಸ್ತಾನ್ ಅತೀ ದೊಡ್ಡ ಇಂಧನ ಉತ್ಪಾದನ ದೇಶವಾಗಿದ್ದರೂ ಕೂಡಾ ದೇಶದಲ್ಲಿ ಇಂಧನ ಬೆಲೆ ಹೆಚ್ಚಳವಾದ ಪರಿಣಾಮ ಕಳೆದ ಒಂದು ವಾರದ ಹಿಂದೆ ಸಂಘರ್ಷ ಆರಂಭವಾಗಿತ್ತು. ದೇಶದ ಪ್ರಮುಖ ನಗರವಾದ ಅಲ್ಮಾಟಿಯಲ್ಲಿ ಗಲಭೆ ಭುಗಿಲೆದ್ದ ಸಂದರ್ಭದಲ್ಲಿ ಪೊಲೀಸರು ಗುಂಡಿನ ದಾಳಿ ನಡೆಸಿರುವುದಾಗಿ ವರದಿ ತಿಳಿಸಿದೆ.
ಕಝಕಿಸ್ತಾನದಲ್ಲಿ ನಡೆದ ಹಿಂಸಾಚಾರದಲ್ಲಿ ಸುಮಾರು 175 ಮಿಲಿಯನ್ ಯುರೋದಷ್ಟು ಆಸ್ತಿ ಹಾನಿಗೊಂಡಿದೆ. ನೂರಕ್ಕೂ ಅಧಿಕ ಉದ್ಯಮ ಮತ್ತು ಬ್ಯಾಂಕ್ ಗಳ ಮೇಲೆ ದಾಳಿ ನಡೆಸಿ ಹಣವನ್ನು ಲೂಟಿ ಮಾಡಿದ್ದಾರೆ. 400ಕ್ಕೂ ಅಧಿಕ ವಾಹನಗಳನ್ನು ಸುಟ್ಟು ಹಾಕಲಾಗಿದೆ ಎಂದು ಸಚಿವಾಲಯ ತಿಳಿಸಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.
ದೇಶದ್ರೋಹದ ಆರೋಪದಡಿ ಮಾಜಿ ಭದ್ರತಾ ಮುಖ್ಯಸ್ಥನನ್ನು ಬಂಧಿಸಲಾಗಿದೆ ಎಂದು ಕಝಕಿಸ್ತಾನ್ ತಿಳಿಸಿದೆ. ದೇಶದ್ರೋಹ ಆರೋಪದ ಮೇಲೆ ಮಾಸಿಮೊಮ್ ನನ್ನು ಗುರುವಾರ ಬಂಧಿಸಲಾಗಿತ್ತು ಎಂದು ಕಝಕಿಸ್ತಾನ್ ಗುಪ್ತಚರ ಸಂಸ್ಥೆ, ನ್ಯಾಷನಲ್ ಸೆಕ್ಯುರಿಟಿ ಕಮಿಟಿ ತಿಳಿಸಿದೆ.