Advertisement
ಒಂದೂವರೆ ವರ್ಷದಿಂದ ತೈಲಬೆಲೆ ಏರಿಕೆ ಪ್ರಮಾಣವನ್ನು ಗಮನಿಸಿದರೆ ಇದೀಗ ಸರಕಾರ ಮಾಡಿರುವ ಇಳಿಕೆ ಪ್ರಮಾಣ ದೊಡ್ಡದೇನೂ ಅಲ್ಲದಿದ್ದರೂ ಪ್ರಸಕ್ತ ಸನ್ನಿವೇಶವನ್ನು ಪರಿಗಣಿಸಿದಲ್ಲಿ ಇದು ತೀರಾ ನಗಣ್ಯ ಎಂದು ಹೇಳಲಾಗದು. ಕಳೆದ 18 ತಿಂಗಳುಗಳ ಅವಧಿಯಲ್ಲಿ ಪೆಟ್ರೋಲ್ ಬೆಲೆ ಲೀ. ಗೆ 39 ರೂ. ಮತ್ತು ಡೀಸೆಲ್ ಬೆಲೆ ಲೀ. ಗೆ 30 ರೂ. ಏರಿಕೆಯಾಗಿತ್ತು. ಕೊರೊನಾ ಅಅನಂತರದಲ್ಲಿ ಚೇತರಿಸುತ್ತಿದ್ದ ಆರ್ಥಿಕ ವಹಿವಾಟುಗಳಿಗೆ ಇಂಧನ ಬೆಲೆ ಏರಿಕೆಯು ಬಲುದೊಡ್ಡ ಅಡಚಣೆಯಾಗಿ ಪರಿಣಮಿಸಿತ್ತು. ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಿದ್ದೇ ಅಲ್ಲದೆ ವಾಣಿಜ್ಯ, ವ್ಯಾಪಾರ ಕ್ಷೇತ್ರಗಳ ಮೇಲೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ದುಷ್ಪರಿಣಾಮ ಬೀರಿತ್ತು. ಕೊರೊನಾದ ಸಂಕಷ್ಟಗಳ ಹೊರತಾಗಿಯೂ ಶತಾಯಗತಾಯ ಪ್ರಯತ್ನದಿಂದ ಅಸ್ತಿತ್ವವನ್ನು ಉಳಿಸಿಕೊಂಡ ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕ ಘಟಕಗಳು (ಎಂಎಸ್‌ಎಂಇ) ಇಂಧನ ಬೆಲೆಯೇರಿಕೆಯ ಆಘಾತ, ಕಚ್ಚಾ ಸಾಮಾಗ್ರಿ ಹಾಗೂ ಇತರ ವೆಚ್ಚಗಳಿಂದ ಜರ್ಝರಿತವಾಗಿ ಅವುಗಳ ಉತ್ಪಾದನ ವೆಚ್ಚ ದ್ವಿಗುಣಗೊಂಡಿತ್ತು. ಎಂಎಸ್‌ಎಂಇಗಳು ನಷ್ಟಕ್ಕೆ ಒಳಗಾದರೆ ಇಡೀ ಆರ್ಥಿಕ ವ್ಯವಸ್ಥೆ ಹದಗೆಡುತ್ತದೆ. ಈ ಘಟಕಗಳಲ್ಲಿ ಸರಿಸುಮಾರು ಒಂದು ಕೋಟಿ ಕಾರ್ಮಿಕರಿದ್ದಾರೆ. ಕೇಂದ್ರ ಸರಕಾರ ಇದೀಗ ತೈಲೋತ್ಪನ್ನಗಳ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಿರುವುದರಿಂದ ಇವರಿಗೆ ಕೊಂಚ ಉಪಶಮನ ದೊರೆತಿದೆ.
Advertisement
ಬೆಲೆ ಏರಿಕೆಯನ್ನು ನಿಯಂತ್ರಿಸಿ ಜನಸಾಮಾನ್ಯರ ಕೈಯಲ್ಲಿ ಒಂದಿಷ್ಟು ಹಣ ಓಡಾಡುವಂತಾದರೆ ಆರ್ಥಿಕ ವ್ಯವಸ್ಥೆ ಚೇತರಿಕೆಯಾಗಲಿದೆ ಎಂಬುದನ್ನು ಸರಕಾರಗಳು ಅರಿತುಕೊಂಡಿವೆಯಾದರೂ ಕೊರೊನೋತ್ತರ ಪರಿಸ್ಥಿತಿ ಅವುಗಳ ಪಾಲಿಗೆ ಪ್ರತಿಕೂಲವಾಗಿತ್ತು. ಕೊನೆಗೂ ಕೇಂದ್ರ ಸರಕಾರ ಅಳೆದೂ ತೂಗಿ ತೈಲೋತ್ಪನ್ನಗಳ ಮೇಲಿನ ಅಬಕಾರಿ ಸುಂಕವನ್ನು ತಗ್ಗಿಸಿದೆ. ತನ್ಮೂಲಕ ಕೇಂದ್ರ ಸರಕಾರಕ್ಕೆ ಹಾಲಿ ಹಣಕಾಸು ವರ್ಷದಲ್ಲಿ ಬರಬಹುದಾಗಿದ್ದ ವರಮಾನದಲ್ಲಿ 43,500 ಕೋ. ರೂ. ಕಡಿಮೆಯಾಗಲಿದೆ. ಅದೇ ಸಂದರ್ಭದಲ್ಲಿ ತೈಲೋತ್ಪನ್ನಗಳ ಬಳಕೆ ಹೆಚ್ಚಾಗಿ ಜನಸಂಚಾರ ಮತ್ತು ಆರ್ಥಿಕ ವ್ಯವಹಾರಗಳೂ ವೃದ್ಧಿಸಲಿರುವುದರಿಂದ ಸರಕಾರಕ್ಕೆ ವರಮಾನ ಸಂಗ್ರಹವೂ ವೃದ್ಧಿಯಾಗಲಿದೆ. ತೈಲ ಬೆಲೆ ಇಳಿಕೆಯಿಂದ ಹಣದುಬ್ಬರ ಕಡಿಮೆಯಾಗಿ ಜನರ ಖರೀದಿ ಸಾಮರ್ಥ್ಯ ಹೆಚ್ಚಾಗಿ ಸರಕಾರಕ್ಕೆ ಜಿಎಸ್‌ಟಿ ಆದಾಯವೂ ಹೆಚ್ಚಲಿದೆ. ಡೀಸೆಲ್ ಬೆಲೆ ಇಳಿಕೆ ಅಪಾರ ನಷ್ಟದಲ್ಲಿರುವ ಸಾರಿಗೆ ವಲಯದ ಚೇತರಿಕೆಗೂ ಸಹಾಯಕವಾಗಲಿದೆ.
ಕಚ್ಚಾತೈಲದ ಬೆಲೆಯು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಿರ್ಧಾರವಾಗುವುದರಿಂದ ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳದ ಅನಿವಾರ್ಯತೆ ಎದುರಾಗಬಹುದು. ಅದಲ್ಲದೇ ತೈಲ ಬೆಲೆಯನ್ನು ತಾವೇ ಪರಿಷ್ಕರಿಸುವ ಅಧಿಕಾರ ಹೊಂದಿರುವ ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಮತ್ತೆ ನಿತ್ಯ ಬೆಲೆ ಏರಿಕೆ ಪ್ರಾರಂಭಿಸಬಾರದು.
ಸರಕಾರವು ತುರ್ತು ಗಮನಹರಿಸಬೇಕಾದ ಇನ್ನೊಂದು ವಿಚಾರ ಎಂದರೆ ಎಲ್‌ಪಿಜಿ ಅಡುಗೆ ಅನಿಲ ಬೆಲೆ. ಅಡುಗೆ ಅನಿಲಕ್ಕೆ ಸಬ್ಸಿಡಿ ಪುನರಾರಂಭಿ ಸಲು ಮತ್ತು ತೈಲ ಬೆಲೆ ಮತ್ತೆ ಏರಿಕೆಯಾಗ ದಿರಲು ಸರಕಾರ ಕ್ರಮ ಕೈಗೊಳ್ಳಬೇಕು. ಆರ್ಥಿಕತೆ ಸರಿದಾರಿಗೆ ಬರುತ್ತಿರುವುದರಿಂದ ಇವೆರಡರತ್ತ ಸರಕಾರ ಗಂಭೀರ ಚಿಂತನೆ ನಡೆಸಬೇಕು.
ಚೇತೋಹಾರಿ ಆರ್ಥಿಕತೆಕೊರೊನಾ ಸೋಂಕು ನಿಯಂತ್ರಣಕ್ಕೂ ಆರ್ಥಿಕ ಬೆಳವಣಿಗೆಗೂ ನೇರ ಸಂಬಂಧವಿದೆ. ಭಾರತದಲ್ಲಿ ಲಸಿಕೆ ವಿತರಣೆ ಸಂಪೂರ್ಣವಾಗಿ ಉಚಿತವಾಗಿರುವುದು ಲಸಿಕಾ ಆಂದೋಲನ ಯಶಸ್ವಿಯಾಗಲು ಪ್ರಮುಖ ಕಾರಣವಾಗಿದೆ. ಐಎಂಎಫ್ ಪ್ರಸ್ತುತ ಸಾಲಿನ ಆರ್ಥಿಕ ಬೆಳವಣಿಗೆ ಶೇ. 9.5 ಎಂದು ಅಂದಾಜು ಮಾಡಿದೆ. ವಿಶ್ವದ ಪ್ರಮುಖ ಆರ್ಥಿಕತೆಯ ದೇಶಗಳಲ್ಲಿಯೂ ಆರ್ಥಿಕ ಪ್ರಗತಿ ಕಂಡು ಬರುತ್ತಿಲ್ಲ. ಜಾಗತಿಕ ಮಟ್ಟದಲ್ಲಿ ಈ ವರ್ಷದ ಆರ್ಥಿಕ ಬೆಳವಣಿಗೆ ಶೇ. 5.9 ಮತ್ತು ಮುಂದಿನ ವರ್ಷ ಶೇ. 4.9 ಆಗಲಿದೆ. ಆದರೆ ಭಾರತದ ಬೆಳವಣಿಗೆ 2021ಕ್ಕೆ ಶೇ. 9.5 ಮತ್ತು ಮುಂದಿನ ವರ್ಷ ಶೇ. 8.5 ರಷ್ಟಾಗಲಿದೆ ಎಂದು ವಿಶ್ವಸಂಸ್ಥೆ ಅಂದಾಜು ಮಾಡಿದೆ. ಭಾರತದ ಆರ್ಥಿಕತೆ ದಿನೇದಿನೆ ಹೊಸ ಎತ್ತರದತ್ತ ದಾಪುಗಾಲು ಹಾಕುತ್ತಿದೆ. ನಕಾರಾತ್ಮಕ ವೆಂದು ಪರಿಗಣಿಸಿದ್ದ ಅರ್ಥವ್ಯವಸ್ಥೆ ಸ್ಥಿರತೆಯನ್ನು ಕಾಪಾಡಿಕೊಂಡಿದೆ. ಆದರೆ ದೇಶವು ಸಾಲದ ಹೊರೆ, ಸಾಲ ಪಡೆಯುವ ವಿಚಾರದಲ್ಲಿ ಹೆಚ್ಚಿನ ಸಾಮಥ್ಯವಿಲ್ಲದಿರುವುದರಿಂದ ಎದುರಾಗಬಹು ದಾದ ಅಪಾಯಗಳು ಇನ್ನೂ ಉಳಿದುಕೊಂಡಿವೆ. ಆರ್ಥಿಕ ಚೇತರಿಕೆಯ ಚಟುವಟಿಕೆಗಳು ಚೇತರಿಸಿ ಕೊಳ್ಳುತ್ತಿವೆ ಮತ್ತು ಮುಂದಿನ ಕೆಲವು ವರ್ಷಗಳಲ್ಲಿ ವಿತ್ತೀಯ ಕೊರತೆಯು ಹಂತಹಂತವಾಗಿ ಕಡಿಮೆ ಯಾಗುವ ನಿರೀಕ್ಷೆಯಿದೆ. – ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ