Advertisement

ಆ ದಿನಗಳಿಂದ ಈ ದಿನಗಳ ತನಕ ಓ ನನ್ನ ಚೇತನಾ!

05:12 PM Oct 28, 2017 | |

ಚೇತನ್‌ ಮತ್ತೆ ಬಂದಿದ್ದಾರೆ!
ಹಾಗಂತ ಇದುವರೆಗೂ ಅದೆಷ್ಟು ಬಾರಿ ಸುದ್ದಿಯಾಗಿದೆಯೋ ಗೊತ್ತಿಲ್ಲ. ಚೇತನ್‌ ಕನ್ನಡ ಚಿತ್ರರಂಗಕ್ಕೆ ಬಂದು ಒಂಬತ್ತು ವರ್ಷಗಳಾಗಿವೆ. ಈ ಅವಧಿಯಲ್ಲಿ ಅವರು ನಟಿಸಿರುವುದು ಕೇವಲ ಐದು ಚಿತ್ರಗಳಲ್ಲಿ. ಒಂದೊಂದು ಚಿತ್ರದ ಹಿಂದೆಯೂ ಕೆಲವು ವರ್ಷಗಳ ಗ್ಯಾಪ್‌ ಇದ್ದೇ ಇದೆ. ಆ ಗ್ಯಾಪ್‌ ಮುಗಿಸಿಕೊಂಡು, ಅವರು ಹೊಸ ಚಿತ್ರದ ಮೂಲಕ ಬಂದಾಗಲೆಲ್ಲಾ, ಚೇತನ್‌ ಮತ್ತೆ ಬಂದಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಎಂಟ್ರಿ ಕೊಟ್ಟಿದ್ದಾರೆ. ಈಗ ಚೇತನ್‌ ಪುನಃ ಬಂದಿದ್ದಾರೆ. ಈ ಬಾರಿ ಅವರು “ನೂರೊಂದು ನೆನಪು’ ಚಿತ್ರದ ಮೂಲಕ ವಾಪಸ್ಸು ಬಂದಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಇನ್ನು ಕೆಲವೇ ತಿಂಗಳುಗಳಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.

Advertisement

ಇಷ್ಟಕ್ಕೂ ಚೇತನ್‌ ಎಲ್ಲಿದ್ದರು, ಹೇಗಿದ್ದರು, ಏನು ಮಾಡುತ್ತಿದ್ದರು ಮತ್ತು ಕನ್ನಡ ಚಿತ್ರರಂಗದಿಂದ ದೂರವೇಕೆ ಇದ್ದರು ಎಂಬ ಹಲವು ಪ್ರಶ್ನೆಗಳು ಬರುವುದು ಸಹಜ. ಆ ಪ್ರಶ್ನೆಗಳಿಗೆ ಅವರಿಂದಲೇ ಉತ್ತರ ಪಡೆಯೋದು ಸರಿಯಲ್ಲವೇ? ಸರಿ ಎದುರು ಕೂರಿಸಿಕೊಳ್ಳಲಾಯಿತು. ಒಂದೊಂದೇ ಪ್ರಶ್ನೆಗಳನ್ನು ಅವರ ಮುಂದೆ ಇಡಲಾಯಿತು. ಒಂದೊಂದೇ ಪ್ರಶ್ನೆಗಳಿಗೆ ಚೇತನ್‌ ಉತ್ತರಿಸಿದ್ದೂ ಆಯಿತು.

“ಆ ದಿನಗಳು’ ಚೇತನ್‌ನ ಮೊದಲಿಗೆ ಹಿಡಿಯೋದೇ ಕಷ್ಟ! ಹಿಡಿದರೂ ಅವರಿಗೆ ಕಥೆ ಒಪ್ಪಿಸೋದು ಇನ್ನು ಕಷ್ಟ!
ಹೀಗೆ ಹಲವು ಆರೋಪಗಳು ಚೇತನ್‌ ಬಗ್ಗೆ ಕೇಳಿ ಬರುತ್ತವೆ. ಅದಕ್ಕೆ ಸರಿಯಾಗಿ ಚೇತನ್‌ ಮೂರೋ, ನಾಲ್ಕೋ ವರ್ಷಗಳಿಗೆ ಒಂದು ಸಿನಿಮಾ ಮಾಡುತ್ತಾರೆ. “ಮೈನಾ’ ಚಿತ್ರದ ನಂತರ ಚೇತನ್‌, ಯಾವೊಂದು ಚಿತ್ರದಲ್ಲೂ ಕಾಣಿಸಿಕೊಳ್ಳಲಿಲ್ಲ. ಮಧ್ಯದಲ್ಲಿ ಒಂದೆರೆಡು ಚಿತ್ರಗಳಲ್ಲಿ ಚೇತನ್‌ ನಟಿಸುತ್ತಿದ್ದಾರೆ ಎಂಬ ಸುದ್ದಿ ಬಂದಿತ್ತಾದರೂ ಕೊನೆಯ ಕ್ಷಣದಲ್ಲಿ ಆ ಚಿತ್ರಗಳಲ್ಲಿ ಚೇತನ್‌ ಬದಲಿಗೆ ಇನ್ನಾéರೋ ಇದ್ದರು. ಈಗ ಚೇತನ್‌ ನಿಜಕ್ಕೂ ವಾಪಸ್ಸು ಬಂದಿದ್ದಾರೆ. “ನೂರೊಂದು ನೆನಪು’ ಎಂಬ ಹೊಸ ಚಿತ್ರದಲ್ಲಿ ಅವರು ನಾಯಕರಾಗಿ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಇನ್ನಷ್ಟು ಚಿತ್ರಗಳಲ್ಲಿ ನಟಿಸುವ ಸ್ಕೆಚ್‌ ಹಾಕಿಕೊಂಡಿದ್ದಾರೆ. ಅದಕ್ಕೆ ಸರಿಯಾಗಿ “ನೂರೊಂದು ನೆನಪು’ ಚಿತ್ರದ ನಂತರ, ನಿರ್ದೇಶಕ ಮಹೇಶ್‌ ಬಾಬು ಅವರ ಜೊತೆಗೊಂದು ಚಿತ್ರವಿದೆ. ಆ ನಂತರ ಒಂದು ಬಹುಭಾಷಾ ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆಯಂತೆ. ಹಾಗಾದರೆ, ಚೇತನ್‌ ಅವರನ್ನು ಹಿಡಿಯೋದು ಕಷ್ಟ ಎಂಬ ಮಾತು ಯಾಕಾಗಿ ಬರುತ್ತದೆ. “ಸಿನಿಮಾಗಳನ್ನು ಒಪ್ಪದಿದ್ದಾಗ ಈ ತರಹ ಅಪಪ್ರಚಾರ ಎಲ್ಲಾ ನಾರ್ಮಲ್‌’ ಎನ್ನುತ್ತಾರೆ ಚೇತನ್‌.

“ಹಿಡಿಯೋದು ಕಷ್ಟ ಅಂದರೇನರ್ಥ? ಅದೆಷ್ಟೋ ವರ್ಷಗಳಿಂದ ನನ್ನ ಫೋನ್‌ ನಂಬರ್‌ ಚೇಂಜ್‌ ಆಗಿಲ್ಲ. ನಾನು ಅಮೇರಿಕಾಗೆ ಹೋಗದೆ ಮೂರು ವರ್ಷಗಳಾಗಿವೆ. ಕರ್ನಾಟಕವೇ ನನ್ನ ಪ್ರಪಂಚವಾಗಿದೆ. ಹೀಗಿರುವಾಗ ನಾನು ಎಲ್ಲಿಗೆ ಹೋಗಲಿ? ವಿಷಯ ಏನಂದ್ರೆ, ಕೆಲವು ಚಿತ್ರಗಳನ್ನ ರಿಜೆಕ್ಟ್ ಮಾಡಿದಾಗ, ಈ ತರಹದ ಅಪಪ್ರಚಾರಗಳು ಮಾಮೂಲಿ. ಇಷ್ಟು ದಿನಗಳಲ್ಲಿ ಅದೆಷ್ಟೋ ಕಥೆ ಕೇಳಿದ್ದೀನಿ. ಎಷ್ಟೋ ಸಿನಿಮಾಗಳನ್ನ ಬಿಟ್ಟಿದ್ದೀನಿ. ಆಗ ಇವೆಲ್ಲಾ ಸಹಜ’ ಎನ್ನುತ್ತಾರೆ ಚೇತನ್‌.

Advertisement

ಇಷ್ಟಕ್ಕೂ ಚೇತನ್‌ಗೆ ಯಾಕೆ ಕಥೆ ಒಪ್ಪಿಸೋದು ಬಹಳ ಕಷ್ಟವಾಗ್ತಿದೆ?
ಆ ವಿಚಾರದಲ್ಲಿ ಚೇತನ್‌ಗೂ ಸರಿಯಾದ ಕ್ಲಾರಿಟಿ ಇದ್ದಂತಿಲ್ಲ. “ಎಷ್ಟೋ ಬಾರಿ ಕಥೆ ಕೇಳ್ತೀನಿ. ರಾತ್ರಿ ಮಲಗುವಾಗ ಯೋಚನೆ ಮಾಡ್ತೀನಿ. ಬೆಳಿಗ್ಗೆ ಯಾಕೋ ಬೇಡ ಅನಿಸುತ್ತೆ. ಯಾಕೆ ಅಂತ ಉತ್ತರಿಸೋದು ಕಷ್ಟ. ಏಕೆಂದರೆ, ಇಲ್ಲಿ ಹಲವು ವಿಷಯಗಳಿವೆ. ಕಥೆ ಚೆನ್ನಾಗಿಲ್ಲ ಅಂತಲ್ಲ. ಕೆಲವು ಕಥೆಗಳು ಚೆನ್ನಾಗಿರತ್ತೆ. ಆದರೆ, ತಂಡಗಳ ಜೊತೆಗೆ ಕೆಲಸ ಮಾಡೋಕೆ ಇಷ್ಟ ಆಗಲ್ಲ. ಎರಡೂ ಸರಿ ಇರುತ್ತೆ. ಆಗ ಇನ್ನೇನೋ ಪ್ರಾಬ್ಲಿಮ್ಮು. ಹಾಗಾಗಿ ಕೆಲವು ಚಿತ್ರಗಳನ್ನ ಬಿಟ್ಟಿದ್ದು ಇದೆ. ಹಾಗಂತ ನಾನು ರಿಜೆಕ್ಟ್ ಮಾಡಿದ ಚಿತ್ರಗಳೆಲ್ಲಾ ಚೆನ್ನಾಗಿಲ್ಲ ಅಥವಾ ಗೆಲ್ಲಲಿಲ್ಲ ಅಂತಲ್ಲ. ಬೇರೆ ಹೀರೋಗಳನ್ನು ಹಾಕಿಕೊಂಡು ಮಾಡಿ, ಸಿನಿಮಾಗಳು ಗೆದ್ದಿದ್ದೂ ಇದೆ. ಅದೇ ತರಹ ಸೋತಿದ್ದೂ ಇದೆ’ ಎಂದು ಒಪ್ಪಿಕೊಳ್ಳುತ್ತಾರೆ ಚೇತನ್‌.

ಹಾಗಾದರೆ, ಅವರು ಈ ಗ್ಯಾಪ್‌ನಲ್ಲಿ ಏನು ಮಾಡುತ್ತಿದ್ದರು. ಸಾಮಾಜಿಕ ಕೆಲಸಗಳು ಇದೆಯಲ್ಲ ಎಂಬ ಉತ್ತರ ಅವರಿಂದ ಬರುತ್ತದೆ. “ಮಂಗಳೂರು ಕಡೆ ಎಂಡೋ ಸಲ್ಫಾನ್‌ ಸಂತ್ರಸ್ತರಿಗೆ ಸರ್ಕಾರಿದಿಂದ ಸುಮಾರು 90 ಕೋಟಿ ಕೊಡಿಸಿದ್ದೇವೆ. ಮಹಿಳಾ ಪೊಲೀಸ್‌ ಸ್ಟೇಷನ್‌ಗಳು ಬೇಕು ಎಂಬ ನಮ್ಮ ಹೋರಾಟಕ್ಕೆ ಬೆಲೆ ಸಿಕ್ಕಿದೆ. ನಾನು ಎಸ್‌.ಎಫ್.ಐ, ಡಿ.ವೈ.ಎಫ್.ಐ, ಬಿ.ವಿ.ಎಸ್‌ ಜೊತೆಗೆ ಗುರುತಿಸಿಕೊಂಡಿದ್ದೇನೆ. ನನಗೆ ಅವರ ರಾಜಕೀಯ ಇಷ್ಟ. ರಾಜಕೀಯ ಎಂದರೆ ಅದು ಎಲೆಕ್ಷನ್‌ ರಾಜಕೀಯ ಅಲ್ಲ. ಜನರ ಜೀವನವನ್ನ ಹೇಗೆ ಬದಲಾಯಿಸಬಹುದು ಮತ್ತು ಅದನ್ನು ಕಾರ್ಯರೂಪಕ್ಕೆ ತರುವುದು ಮುಖ್ಯ. ಆ ಕೆಲಸಗಳನ್ನು ಈ ಸಂಘಟನೆಗಳ ಮೂಲಕ ಹೋಗಿ ಮಾಡುತ್ತಿರುತ್ತೀನಿ. ನಿಜ ಹೇಳಬೇಕೆಂದರೆ, ನಾನು ಚಿತ್ರರಂಗಕ್ಕೆ ಬಂದ ಉದ್ದೇಶವೇ ಇದು. ಅಮೇರಿಕಾದಲ್ಲಿದ್ದಾಗ ಅಲ್ಲಿ ಲಿಂಗ ತಾರತಮ್ಯ, ವರ್ಣ ತಾರತಮ್ಯ ಎಲ್ಲಾ ಇತ್ತು. ಎಲ್ಲಾ ಅನುಕೂಲಗಳಿರುವ ದೇಶದಲ್ಲೇ ಹೀಗಾದರೆ, ನಮ್ಮಂತಹ ದೇಶಗಳಲ್ಲಿ ಹೇಗೆ. ಹಾಗಾಗಿ ಬೇಧ-ಭಾವದ ವಿರುದ್ಧ ಹೋರಾಡಬೇಕೆಂಬ ಉದ್ದೇಶ ಇಟ್ಟುಕೊಂಡು ಬಂದೆ. ಸುಮ್ಮನೆ ಮಾಡಿದರೆ, ಅದಕ್ಕೆ ಬೆಲೆ ಸಿಗುತ್ತಿರಲಿಲ್ಲ. ಹಾಗಾಗಿ ಸಿನಿಮಾದಲ್ಲಿ ಗುರುತಿಸಿಕೊಂಡರೆ, ಒಂದಿಷ್ಟು ಸಹಾಯವಾಗಬಹುದು ಅಂತ ಸಿನಿಮಾ ಮಾಡಿದೆ. ಈ ಹಿನ್ನೆಲೆಯಿಂದ ಬಂದಾಗ, ಜನ ನಮ್ಮ ಮಾತು ಒಪ್ಪದಿರಬಹುದು. ಆದರೆ, ಮಾತು ಕೇಳ್ತಾರೆ’ ಎನ್ನುತ್ತಾರೆ ಚೇತನ್‌.

ಸಾಮಾಜಿಕ ಕೆಲಸಗಳನ್ನು ಸಿನಿಮಾಗಳ ಮೂಲಕವೇ ಮಾಡಬಹುದಲ್ಲಾ ಎಂಬ ಪ್ರಶ್ನೆ ಸಹಜ. ಆದರೆ, ಸಿನಿಮಾಗಳಿಂದ ಅದು ಸಾಧ್ಯವಿಲ್ಲ ಎನ್ನುವುದು ಚೇತನ್‌ ಉತ್ತರ. “ಸಿನಿಮಾ ಎಂದರೆ, ಹೀರೋ ಎಂದರೆ 20 ಜನರನ್ನು ಹೊಡೆಯೋದಲ್ಲ. ಅದರ ಮೂಲಕ Vಚluಛಿ ಚಿಚsಛಿಛ ವಿಷಯಗಳನ್ನು ಖಂಡಿತಾ ಹೇಳಬಹುದು. ಆದರೆ, ಎಲ್ಲವನ್ನೂ ಸಿನಿಮಾ ಒಳಗಿನಿಂದ ಮಾಡೋಕೆ ಆಗಲ್ಲ. ಏಕೆಂದರೆ, ಎರಡೂಕಾಲು ಗಂಟೆ ಸಿನಿಮಾದಲ್ಲಿ ಕಲೆ, ಮನರಂಜನೆ, ಬಿಝಿನೆಸ್‌ ಎಲ್ಲವೂ ಇದೆ. ಅಲ್ಲಿ ಒಳ್ಳೆಯ ಯೋಚನೆಗಳು ಇರಬಹುದು. ಆದರೆ, ದೊಡ್ಡ ಮಟ್ಟದಲ್ಲಿ ಬದಲಾವಣೆಗಳನ್ನು ತರೋದು ಕಷ್ಟ’ ಎಂಬುದು ಚೇತನ್‌ ಅಭಿಪ್ರಾಯ.

ತಮ್ಮ ಸಿದ್ಧಾಂತಕ್ಕೆ ತಕ್ಕ ಕಥೆಗಳು ಬರುವುದು ಕಡಿಮೆ ಇರುವುದರಿಂದ, ಚೇತನ್‌ ಕಡಿಮೆ ಸಿನಿಮಾ ಮಾಡುತ್ತಾರಾ? ಹೀಗೊಂದು ಪ್ರಶ್ನೆಯೂ ಎದುರಾಯಿತು. ಹಾಗೇನಿಲ್ಲ ಎಂಬ ಉತ್ತರವೂ ಬಂತು. “ನನಗೆ ನನ್ನ ಸಿದ್ಧಂತದ ಬಗ್ಗೆಯೇ ಸಿನಿಮಾ ಮಾಡಬೇಕೆಂದು ಯಾವುದೇ ಉದ್ದೇಶವಿಲ್ಲ. ಸಿನಿಮಾ ಮಾಡೋಕೆ ಬರುವವರು ಅವರ ಸಿದ್ಧಾಂತದ ಮೇಲೆಯೇ ಸಿನಿಮಾ ಮಾಡಲಿ. ನನಗೆ ಅದು ಇಷ್ಟವಾದರೆ ಮಾಡ್ತೀನಿ, ಇಲ್ಲ ಎಂದರೆ ಮಾಡುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಒಳ್ಳೆಯ ಯೋಚನೆಗಳಷ್ಟೇ ಮುಖ್ಯ. ಇಲ್ಲಿ ಇನ್ನೂ ಒಂದು ವಿಷಯ ಇದೆ. ಹೀರೋನ ಸಿದ್ಧಾಂತಕ್ಕೆ ಸಿನಿಮಾ ಮಾಡೋಕೆ ಆಗುವುದಿಲ್ಲ. ನಿರ್ದೇಶಕ ಮತ್ತು ಬರಹಗಾರನ ಸಿದ್ಧಾಂತವೇ ಇಲ್ಲಿ ಮುಖ್ಯ. ಅಂಥದ್ದು ಇಷ್ಟವಾದರೆ ಖಂಡಿತಾ ಮಾಡುತ್ತೀನಿ, ಮಾಡುತ್ತಿದ್ದೀನಿ’ ಎಂದು ಹೇಳಿಕೊಳ್ಳುತ್ತಾರೆ ಚೇತನ್‌.

ಸಾಮಾಜಿಕ ಚಟುವಟಿಕೆ, ಸಿದ್ಧಾಂತ ಎಲ್ಲದರ ನಡುವೆ ಚೇತನ್‌ಗೆàನಾದರೂ ರಾಜಕೀಯದಲ್ಲಿ ತೊಡಗಿಸಿಕೊಳ್ಳುವ ಆಸಕ್ತಿಯಿರಬಹುದು ಎಂಬ ಮಾತು ಆಗಾಗ ಕೇಳಿ ಬರುವುದುಂಟು. ಅದಕ್ಕವರು, “ರಾಜಕೀಯದಿಂದಲೇ ಸೇವೆ ಮಾಡಬೇಕೆಂಬುದೇನೂ ಇಲ್ಲ’ ಎನ್ನುತ್ತಾರೆ. “ಕಳೆದ 70 ವರ್ಷಗಳಲ್ಲಿ ಸಾಕಷ್ಟು ಕೆಲಸ ಆಗಿವೆ. ಜನಸಂಖ್ಯೆಯಲ್ಲಿ ಅರ್ಧ ಜನ ಕಾಂಗ್ರೆಸ್‌ನ್ನಾಗಲೀ, ಬಿಜೆಪಿಯನ್ನಾಗಲೀ ಒಪ್ಪುವುದಿಲ್ಲ. ಕಾರಣ ಸೈದ್ಧಾಂತಿಕವಾದ ಸಮಸ್ಯೆ ಅವೆರಡೂ ಪಕ್ಷಗಳಲ್ಲಿವೆ. ಅವೆರಡೂ ಪಕ್ಷಗಳ ಹೊರತಾಗಿ ಬೇರೆಯವರು ಕೆಲಸ ಮಾಡುತ್ತಿಲ್ಲವೇ. ಅದೆಲ್ಲವೂ ರಾಜಕೀತದಿಂದಲೇ ಮಾಡಬೇಕು ಅಂತಿಲ್ಲ. ವೇರೆ ತರಹ ಮಾಡುವ ಸಾಧ್ಯತೆಯೂ ಇದೆ. ಜಿಗ್ನೇಶ್‌ ಮೆಹವಾನಿ, ಬಿ.ಆರ್‌. ಅಂಬೇಡ್ಕರ್‌, ಮಹಾತ್ಮ ಗಾಂಧಿ ಯಾರೂ ರಾಜಕೀಯ ಮಾಡಿಲ್ಲ. ಅಂದರೆ ಎಲೆಕ್ಷನ್‌ ಪಾಲಿಟಿಕ್ಸ್‌ನಿಂದ ದೂರವೇ ಇದ್ದರು. ಹಾಗಿದ್ದರೂ ಸಾಕಷ್ಟು ಬದಲಾವಣೆಗಳಾಗಿವೆ. ಯಾವ ರೀತಿ ಮಾಡುತ್ತೀವಿ ಎನ್ನುವುದಕ್ಕಿಂತ ನಮ್ಮ ಉದ್ದೇಶ ಮತ್ತು ಕಾಳಜಿ ಮುಖ್ಯ. ಇದೆಲ್ಲಾ ಮಾಡೋದಕ್ಕೆ ನನ್ನ ಬಳಿ ದುಡ್ಡೆಲಿಂದ ಬರುತ್ತದೆ ಎಂಬ ಪ್ರಶ್ನೆ ಸಹಜವೇ. ದುಡ್ಡಿಗಿಂಥ ಕಾಳಜಿ ಮುಖ್ಯ …’

ಇದೆಲ್ಲದರ ಮಧ್ಯೆ ಚೇತನ್‌ ಅವರ ತಂದೆ-ತಾಯಿ ತಮ್ಮ ಮಗನಿಗೆ ಹೆಣ್ಣು  ಹುಡುಕುವ ಪ್ರಯತ್ನವನ್ನೇನೂ ಮಾಡುತ್ತಿಲ್ಲವೆ ಎಂಬ ಪ್ರಶ್ನೆ ಬರಬಹುದು. ಆ ಬಗ್ಗೆ ನೇರವಾಗಿ ಉತ್ತರಿಸದಿದ್ದರೂ, ತಮಗೆ ಫ್ಯಾಮಿಲಿ ಕಮಿಟ್‌ಮೆಂಟ್‌ ಆಗುವುದಿಲ್ಲ ಎನ್ನುತ್ತಾರೆ ಚೇತನ್‌. “ಮನೆಯವರಿಗೆ ನಾನು ಮದುವೆಯಾಗಲಿ ಅಂತ ಆಸೆ ಇರಬಹುದು. ಆದರೆ, ಈ ಕೆಲಸದಲ್ಲಿ ಮನೆಯವರಿಗೆ ಟೈಮ್‌ ಕೊಡೋಕೆ ಆಗಲ್ಲ. ಮದುವೆ ಆದರೆ, ತುಂಬಾ ಸಮಯ ಮತ್ತು ಕಮಿಟ್‌ಮೆಂಟ್‌ ಕೇಳತ್ತೆ. ಎಲ್ಲೆಲ್ಲೋ ಹೋಗಿ ಇರುವುದಕ್ಕೆ ಕಷ್ಟ ಆಗುತ್ತೆ. ಹಾಗಾಗಿ ಮದುವೆಯಿಂದ ಸದ್ಯಕ್ಕೆ ದೂರಾನೇ ಇದ್ದೀನಿ. ಹಾಗಂತ ನಾನು ಸನ್ಯಾಸಿ ಅಲ್ಲ. ಸದ್ಯಕ್ಕೆ ಮದುವೆಯಾಗುವಷ್ಟು ಪುರುಸೊತ್ತೂ ಇಲ್ಲ. ನನಗೆ ಸಾಮಾಜಿಕ ಕಾರ್ಯಕರ್ತರ ಬಗ್ಗೆ ಪ್ರೀತಿ ಜಾಸ್ತಿ. ನೋಡಿ ಮೇಧಾ ಪಾಟ್ಕರ್‌ ಮದುವೇನೇ ಆಗಿಲ್ಲ …’ ಎಂದು ಚೇತನ್‌ ನೆನಪಿಸುತ್ತಾರೆ.

ಬರಹ: ಚೇತನ್‌ ನಾಡಿಗೇರ್‌; ಚಿತ್ರಗಳು: ಮನು ಮತ್ತು ಸಂಗ್ರಹ

Advertisement

Udayavani is now on Telegram. Click here to join our channel and stay updated with the latest news.

Next