Advertisement

ಓ ನನ್ನ ಸ್ನೇಹವೇ !

07:30 AM Mar 23, 2018 | Team Udayavani |

ಏಕಾಂತದಲ್ಲಿ ವಿಹರಿಸುತ್ತಿತ್ತು ಈ ನನ್ನ ಮನ, ಒಮ್ಮೊಮ್ಮೆ “ಖುಷಿ’ಯೆಂಬ ಹಿಮದ ಬಯಲಿನಲ್ಲಿ, ಮತ್ತೂಮ್ಮೆ “ನೋವು’ಎಂಬ ಸುಡುಬಿಸಿಲಿನ ಮರುಭೂಮಿಯಲ್ಲಿ. ಕಣ್ಣೆದುರೇ ಅದೆಷ್ಟೋ ಜೋಡಿ ಹಕ್ಕಿಗಳು, ಜೋಡಿ ನಕ್ಷತ್ರಗಳು, ಜೋಡಿ ಚಿಟ್ಟೆಗಳು ಕಾಣಿಸಿಕೊಂಡು ಒಂಟಿಯಾಗಿದ್ದ ಈ ಮನಸ್ಸನ್ನೂ ಅಲ್ಲೋಲ ಕಲ್ಲೋಲವಾಗಿಸಿತ್ತು. ಖುಷಿ-ನೋವನ್ನು ಹಂಚಲು ಯಾರಿಲ್ಲವೆಂದು ಜೀವನವೆಂಬ ವಿಶಾಲವಾದ ಸಮುದ್ರದಲ್ಲಿ ಹುಡುಕಿದ್ದೇ ಹುಡುಕಿದ್ದು, ಅದೆಷ್ಟೋ ಮಂದಿ ಸಿಕ್ಕರೂ ಯಾರೂ ಮನಕ್ಕೆ ಹಿಡಿಸಲಿಲ್ಲ. ಕಾರಣ, ಮೊಗ್ಗಾಗಿದ್ದ ಈ ಮನದ ಒಳಗಿನ ಖುಷಿಯನ್ನು, ನೋವನ್ನು, ಭಾವನೆಯನ್ನು ಯಾರೂ ಅರ್ಥಮಾಡಿಕೊಳ್ಳಲೇ ಇಲ್ಲ. ನಗುವಿನ ಹಿಂದಿರುವ ನನ್ನ ಮನದ ಕಣ್ಣೀರನ್ನು ಯಾರೂ ನೋಡಲಿಲ್ಲ.

Advertisement

ಆಗ ಅನಿಸಿತ್ತು ಮನಕ್ಕೆ- ಈ ಜೀವನವೆಂಬ ಸಮುದ್ರದಲ್ಲಿ ಈ ಮನವನ್ನು ಅರ್ಥೈಸಿಕೊಳ್ಳುವವರು ಯಾರೂ ಇಲ್ಲ, ಈ ಮನಕ್ಕೆ ಜೊತೆಯೇ ಇಲ್ಲ . ಈ ಸಮುದ್ರದ ನೀರು ಬರಿ ಉಪ್ಪೇ ಉಪ್ಪು ಎನ್ನುತ್ತಿರುವಾಗಲೇ ಕಾಣಿಸಿತ್ತು ಮುದ್ದಾದ ಮಣಿ, ಕಣ್ಣು ಕೋರೈಸುವ ಮಣಿ ಅದುವೇ ನನ್ನ ಮುತ್ತು- ಫ್ರೆಂಡ್‌. ಮೊಗ್ಗಾಗಿದ್ದ  ಈ ಮನವನ್ನ  ಅರಳಿಸಿದ ಮುತ್ತದು. ಭಾವನೇನ ಹೊರಗೆಡಹಿದ ಈ ನನ್ನ ಮುತ್ತು, ನನ್ನ ಮನದ ಪ್ರತಿ ನೋವು-ನಲಿವಿಗೂ ಜೊತೆಯಾಯಿತು. ಎಲ್ಲರನ್ನು ಸೆಳೆಯುವ ಗುಣ, ಸದಾ ಮಾತಿನಿಂದ ಹೊಳೆಯತ್ತಿರುವ ಈ ಫ್ರೆಂಡ್‌ ಎಂಬ ಮುತ್ತನ್ನು ಯಾರು ತಾನೆ ಇಷ್ಟಪಡಲ್ಲ? ಎಲ್ಲರನ್ನೂ ಸೆಳೆಯುವ ಗುಣವುಳ್ಳ ನನ್ನ ಈ ಮುತ್ತು ಬೆಸ್ಟ್ ಫ್ರೆಂಡ್‌ ಅನ್ನೋದೆ ಒಂದು ರೀತಿಯ ಹೆಮ್ಮೆ ನನಗೆ.

ದೇವರೇ, ನನ್ನ ಈ ಸ್ನೇಹವನ್ನು ನನ್ನಿಂದ ದೂರ ಮಾಡಬೇಡ. ಒಂದು ವೇಳೆ ದೂರವಾದರೆ ಮತ್ತೆ ಈ ಜೀವನವೆಂಬ ವಿಶಾಲವಾದ ಸಮುದ್ರದಲ್ಲಿ ನನ್ನಿಂದ ಹುಡುಕಲಾಗುವುದಿಲ್ಲ. ಮತ್ತೆ ನಾನು ಒಂಟಿಯಾಗಿಬಿಡುತ್ತೇನೆ.

ನವ್ಯಾ ತೃತೀಯ ಬಿ. ಕಾಂ.  ಪ್ರಥಮದರ್ಜೆ ಕಾಲೇಜು, ಹಿರಿಯಡಕ

Advertisement

Udayavani is now on Telegram. Click here to join our channel and stay updated with the latest news.

Next