ಬೆಂಗಳೂರು: ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆ ವಿಚಾರದಲ್ಲಿ ರಾಜಕೀಯ ಹಸ್ತಕ್ಷೇಪ ದೊಡ್ಡ ದುರಂತ. ಇದನ್ನು ತಪ್ಪಿಸಲು ನಾಗರಿಕ ಸೇವೆಗಳ ಮಂಡಳಿ ರಚನೆ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾ. ಎಂ.ಎನ್. ವೆಂಕಟಾಚಲಯ್ಯ ಅಭಿಪ್ರಾಯಪಟ್ಟರು.
ನಗರದ ವಾಡಿಯಾ ಸಭಾಂಗಣದಲ್ಲಿ ಭಾನುವಾರ ಅಂಕಿತ ಪುಸ್ತಕ ಪ್ರಕಾಶನ ಹಮ್ಮಿಕೊಂಡಿದ್ದ ನಿವೃತ್ತ ಐಎಎಸ್ ಅಧಿಕಾರಿ ಕೆ. ಜೈರಾಜ್ ಅವರ ಆಡಳಿತದ ಅನುಭವಗಳನ್ನು ಒಳಗೊಂಡ “ರಾಜಮಾರ್ಗ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ನಾಗರಿಕ ಸೇವೆಯಲ್ಲಿರುವ ಅಧಿಕಾರಿ ವರ್ಗದ ನಿಯೋಜನೆ ಮತ್ತು ವರ್ಗಾವಣೆ ರಾಜಕೀಯದಿಂದ ಹೊರತಾಗಿರಬೇಕು.
ಆದರೆ, ಅಧಿಕಾರಿಗಳ ವರ್ಗಾವಣೆಯಲ್ಲಿ ರಾಜಕೀಯ ಅತಿಯಾಗಿ ಮೂಗು ತೂರಿಸುತ್ತಿರುವುದು ದುರಂತ. ಇದೇ ಪರಿಸ್ಥಿತಿ ಮುಂದುವರಿದರೆ, ಆಡಳಿತ ವ್ಯವಸ್ಥೆ ಮೇಲೆ ಇದು ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರಾಜಕೀಯದ ನಿಯಂತ್ರಣದಿಂದ ಈ ವರ್ಗಾವಣೆ ವ್ಯವಸ್ಥೆಯನ್ನು ಹೊರತರಬೇಕು. ಇದಕ್ಕಾಗಿ ನಾಗರಿಕ ಸೇವೆಗಳ ಮಂಡಳಿ ಅಸ್ತಿತ್ವಕ್ಕೆ ಬರಬೇಕು ಎಂದು ಪ್ರತಿಪಾದಿಸಿದರು.
ಗ್ರಾಮೀಣಾಭಿವೃದ್ಧಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಪ್ರಸ್ತುತ ವ್ಯವಸ್ಥೆಯಲ್ಲಿ ನಕಾರಾತ್ಮಕ ವಿಚಾರಗಳಿಗೇ ಹೆಚ್ಚು ಸ್ಪಂದನೆ ಸಿಗುತ್ತಿದೆ. ಸರ್ಕಾರ ಯಾವುದೇ ಸಕಾರಾತ್ಮಕ ಯೋಜನೆಗೆ ಮುಂದಾಗಿದೆ ಎಂದಾದರೆ, ಅದರ ಹಿಂದೆ ಯಾವುದೋ ಗೌಪ್ಯ ಕಾರ್ಯಸೂಚಿ ಇದೆ ಎಂಬಂತೆ ಅನುಮಾನದಿಂದ ನೋಡುವ ವಾತಾವರಣ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ ಮಾತನಾಡಿ, ಪುಸ್ತಕದಲ್ಲಿ ಎಲ್ಲಿಯೂ ವೈಯಕ್ತಿಕ ಜೀವನದ ಬಗ್ಗೆ ಹೇಳಿಕೊಂಡಿಲ್ಲ. ಯಾರ ಬಗ್ಗೆಯೂ ಕೊಂಕು, ವ್ಯಂಗ್ಯಗಳು ಇಲ್ಲ. ಜೈರಾಜ್ ತಮ್ಮ ರಾಜಮಾರ್ಗದಲ್ಲಿ ಈ ತಪ್ಪು ಮಾಡಿಲ್ಲ ಎಂದರು. ಚಿತ್ರನಿರ್ದೇಶಕ ಟಿ.ಎನ್. ಸೀತಾರಾಂ,ಇನ್ಫೋಸಿಸ್ ಸಂಸ್ಥಾಪನಾ ಸದಸ್ಯ ನಾರಾಯಣಮೂರ್ತಿ, ಕೆ. ಜೈರಾಜ್ ಮಾತನಾಡಿದರು. ಅ.ನ.ಪ್ರಹ್ಲಾದ್‌ರಾವ್ ಮತ್ತಿರರು ಉಪಸ್ಥಿತರಿದ್ದರು.
ಜನ ದನಿಯಿಲ್ಲದೆ ಬದಲಾವಣೆ ಅಸಾಧ್ಯ: ನಿವೃತ್ತ ಮತ್ತು ದಕ್ಷ ಅಧಿಕಾರಿಗಳು ಈ ಮಂಡಳಿಯಲ್ಲಿ ಇರಬೇಕು. ಅವರು ಮಾತ್ರ ಅಧಿಕಾರಿಗಳ ನಿಯೋಜನೆ ಮತ್ತು ವರ್ಗಾವಣೆಯನ್ನು ನಿರ್ಧರಿಸಬೇಕು. ಅಲ್ಲದೆ, ಸರ್ಕಾರಕ್ಕೂ ಈ ನಿವೃತ್ತ ಅಧಿಕಾರಿಗಳು ಸೂಕ್ತ ಸಲಹೆಗಳನ್ನು ನೀಡಬೇಕು. ಎಲ್ಲವೂ ಹಾಳಾಗಿದೆ ಎಂದು ನಾನು ಹೇಳುವುದಿಲ್ಲ. ಈಗಿರುವ ವ್ಯವಸ್ಥೆಯಲ್ಲೂ ಕೆಲ ಉತ್ತಮ ರಾಜಕಾರಣಿಗಳು ಮತ್ತು ಅಧಿಕಾರಿಗಳಿದ್ದಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ ಜನ ದನಿ ಎತ್ತದೆ ಬದಲಾವಣೆ ಅಸಾಧ್ಯ ಎಂದು ಹೇಳಿದರು.