Advertisement

ಮಕ್ಕಳು ಕಾಲುವೆಗೆ ಬಿದ್ದರೆ ಅಧಿಕಾರಿಗಳೇ ಹೊಣೆ

12:19 PM Sep 04, 2018 | Team Udayavani |

ಬೆಂಗಳೂರು: ರಾಜಕಾಲುವೆಗಳ ಅಭಿವೃದ್ಧಿಗೆ ಮುಂದಾಗದ ಬಿಬಿಎಂಪಿ ಅಧಿಕಾರಿಗಳನ್ನು ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್‌ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಕಾಲುವೆಗೆ ಹಿರಿಯರು, ಮಕ್ಕಳು ಬಿದ್ದು ಅನಾಹುತ ಸಂಭವಿಸಿದರೆ ಅಧಿಕಾರಿಗಳನ್ನು ಹೊಣೆಯಾಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

Advertisement

ಸಿ.ವಿ.ರಾಮನ್‌ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಾಲಿಕೆಯಿಂದ ಕೈಗೆತ್ತಿಕೊಂಡಿರುವ ಅಭಿವೃದ್ಧಿ ಕಾಮಗಾರಿಗಳು ಹಾಗೂ ಸಮಸ್ಯೆಗಳನ್ನು ಸೋಮವಾರ ಪರಿಶೀಲನೆ ನಡೆಸಿದ ಅವರು, ಆದಷ್ಟು ಬೇಗ ರಾಜಕಾಲುವೆಗಳಲ್ಲಿ ಹೂಳು ತೆಗೆಯುವ ಮೂಲಕ ನೀರು ಸುಗಮವಾಗಿ ಹರಿಯಲು ಅವಕಾಶ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಜೀವನ್‌ ಭೀಮನಗರದಲ್ಲಿ ಚರಂಡಿ ಮತ್ತು ರಾಜಕಾಲುವೆ ಪರಿಶೀಲಿಸುವ ವೇಳೆ ರಸ್ತೆ ಬದಿಯ ರಾಜಕಾಲುವೆಗೆ ತಡೆಗೋಡೆ ಇಲ್ಲದ್ದನ್ನು ಕಂಡು ಗರಂ ಆದ ಪರಮೇಶ್ವರ್‌ ಅವರು, ಮಕ್ಕಳು, ಹಿರಿಯ ನಾಗರಿಕರು ಅದರಲ್ಲಿ ಬಿದ್ದರೆ ಯಾರು ಹೊಣೆ. ನೀರು ಸರಾಗವಾಗಿ ಹರಿಯುವಂತೆ ಮಾಡಲು ಕೂಡಲೆ ಹೂಳು ತೆಗೆಯಿರಿ. ಒಂದು ವೇಳೆ ಅನಾಹುತ ಸಂಭವಿಸಿದರೆ ಅದಕ್ಕೆ ನಿಮ್ಮನ್ನೇ ಹೊಣೆಯಾಗಿಸಿ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. 

ಈ ಮೊದಲು ಕೋರಮಂಗಲ ಹಾಗೂ ಚಲ್ಲಘಟ್ಟ ವ್ಯಾಲಿ ರಾಜಕಾಲುವೆ ವೀಕ್ಷಿಸಿದ ಅವರು, ರಾಜಕಾಲುವೆಯಲ್ಲಿ ಹೂಳು ತುಂಬಿರುವುದನ್ನು ಕಂಡು, ಕೂಡಲೇ ತೆರವುಗೊಳಿಸುವಂತೆ ಸೂಚಿಸಿದರು. 

ಇಂದಿರಾನಗರ ಕಾಂಪ್ಲೆಕ್ಸ್‌ ವಿವಾದ – ಚರ್ಚಿಸಿ ತೀರ್ಮಾನ: ಇಂದಿರಾ ನಗರ ಬಿಡಿಎ ಕಾಂಪ್ಲೆಕ್ಸ್‌ ಪರಿಸ್ಥಿತಿ ಪರಿಶೀಲಿಸಿದರು. ಈ ವೇಳೆ ನೂತನವಾಗಿ ಶಾಪಿಂಗ್‌ ಕಾಂಪ್ಲೆಕ್ಸ್‌ ನಿರ್ಮಾಣಕ್ಕೆ ವಿರೋಧಿಸಿ ಸ್ಥಳೀಯ ನಿವಾಸಿಗಳು ತಮ್ಮ ಆಕ್ಷೇಪ ವ್ಯಕ್ತಪಡಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್‌, ಬೆಂಗಳೂರನ್ನು ಸುಂದರ ನಗರವನ್ನಾಗಿಸುವ ಉದ್ದೇಶದಿಂದ ಹೊಸದಾಗಿ ಕಾಂಪ್ಲೆಕ್ಸ್‌ ನಿರ್ಮಿಸುತ್ತಿದ್ದು,

Advertisement

ಮೊದಲೆ ಸ್ಥಳೀಯ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದರೆ ಅದರ ಬಗ್ಗೆ ಅವಲೋಕಿಸಬಹುದಿತ್ತು. ಈಗಾಗಲೆ ಯೋಜನೆ ಸಿದ್ಧವಾಗಿ, ಗುತ್ತಿಗೆ ನೀಡಲಾಗಿದೆ. ಜತೆಗೆ ಎಲ್ಲ ರೀತಿಯ ನಿಯಮಗಳನ್ನು ಪಾಲಿಸಿ ಗುತ್ತಿಗೆ ನೀಡಲಾಗಿದೆ. ಆದರೂ ನಿವಾಸಿಗಳೊಂದಿಗೆ ನೂತನ ಕಾಂಪ್ಲೆಕ್ಸ್‌ ನಿರ್ಮಾಣ ಕುರಿತು ಚರ್ಚೆ ನಡೆಸಲಾಗುವುದು ಎಂದು ಭರವಸೆ ನೀಡಿದರು. 

ಹಕ್ಕುಪತ್ರ ನೀಡಲು ಮನವಿ: ಹಲವು ವರ್ಷಗಳಿಂದ ವ್ಯಾಪಾರ ನಡೆಸುತ್ತಿರುವುದರಿಂದ ಮಳಿಗೆಗಳಿಗೆ ಹಕ್ಕುಪತ್ರ ನೀಡಬೇಕೆಂದು ಮರ್ಫಿಟೌನ್‌ ಮಾರುಕಟ್ಟೆ ವ್ಯಾಪಾರಿಗಳು ಪರಮೇಶ್ವರ್‌ ಅವರಿಗೆ ಮನವಿ ಮಾಡಿದರು. ಅದಕ್ಕೆ ಸ್ಪಂದಿಸಿದ ಅವರು, ಕೂಡಲೇ ಹಕ್ಕುಪತ್ರ ವಿತರಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ಫ್ರಿಕಾಸ್ಟ್‌ ಡ್ರೈನ್‌ ನಿರ್ಮಿಸಲು ಸೂಚನೆ: ದೊಮ್ಮಲೂರು ಮೇಲ್ಸೇತುವೆ ಕೆಳ ಭಾಗದಲ್ಲಿ ಹಾದುಹೋಗಿರುವ ರಾಜಕಾಲುವೆ ಪರಿಶೀಲಿಸಿದ ಉಪಮುಖ್ಯಮಂತ್ರಿಗಳು, ಶೀಘ್ರ ಫ್ರಿಕಾಸ್ಟ್‌ ಡ್ರೈನ್‌ ನಿರ್ಮಿಸಲು ಕ್ರಮಕೈಗೊಳ್ಳುವಂತೆ ಆಯುಕ್ತರಿಗೆ ಸೂಚಿಸಿದರು. ಹಳೆ ವಿಮಾನ ನಿಲ್ದಾಣ ಮಾರ್ಗವಾದ ಪರಿಣಾಮ ವಾಹನ ಸಂಚಾರ ದಟ್ಟಣೆ ಹೆಚ್ಚಿದ್ದು,

ಕಾಮಗಾರಿ ನಡೆಯುವ ಸಂದರ್ಭದಲ್ಲಿ ಪರ್ಯಾಯ ರಸ್ತೆ ವ್ಯವಸ್ಥೆ ಕಲ್ಪಿಸುವಂತೆಯೂ ಸಂಚಾರ ಪೊಲೀಸ್‌ ಹೆಚ್ಚುವರಿ ಆಯುಕ್ತ ಹಿತೇಂದ್ರ ಅವರಿಗೆ ಸೂಚಿಸಿದರು. ಜತೆಗೆ ಕಾಮಗಾರಿಯನ್ನು ತಿಂಗಳೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದರು. ನಗರ ವೀಕ್ಷಣೆ ವೇಳೆ ಸಂಸದ ಪಿ.ಸಿ. ಮೋಹನ್‌, ಮೇಯರ್‌ ಸಂಪತ್‌ರಾಜ್‌, ಬಿಬಿಎಂಪಿ ಆಯುಕ್ತ ಮಂಜುನಾಥ್‌ಪ್ರಸಾದ್‌, ಆಡಳಿತ ಪಕ್ಷದ ನಾಯಕ ಎಂ.ಶಿವರಾಜು ಸೇರಿ ಪ್ರಮುಖರು ಹಾಜರಿದ್ದರು.

ಕಾಮಗಾರಿಗೆ ಭೂಮಿ ಪೂಜೆ: ನಗರೋತ್ಥಾನ ಅನುದಾನದಲ್ಲಿ 45ಕೋಟಿ ರೂ. ವೆಚ್ಚದಲ್ಲಿ ಸುರಂಜನ್‌ದಾಸ್‌ ರಸ್ತೆ ಮತ್ತು ಒಎಂಆರ್‌ ಜಂಕ್ಷನ್‌ನಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಕೆಳಸೇತುವೆ ಕಾಮಗಾರಿಗೆ ಪರಮೇಶ್ವರ್‌ ಶಂಕುಸ್ಥಾಪನೆ ನೆರವೇರಿಸಿದರು. ಕಾಮಗಾರಿ 18 ತಿಂಗಳೊಳಗೆ ಪೂರ್ಣಗೊಳ್ಳಲಿದ್ದು, 4 ಸಂಚಾರಿ ಮಾರ್ಗವನ್ನು ಕೆಳಸೇತುವೆ ಹೊಂದಿರಲಿದೆ. 

ಶಾಸಕರು ಪಕ್ಷ ಬಿಡಲ್ಲ: ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಪತನಕ್ಕೆ ಕಾಂಗ್ರೆಸ್‌ ಶಾಸಕರನ್ನು ಬಿಜೆಪಿ ಸಳೆಯುತ್ತಿದೆ ಎಂಬ ವಿಚಾರದ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್‌, ಕಾಂಗ್ರೆಸ್‌ನಿಂದ ಯಾವುದೇ ಶಾಸಕರು ಬಿಜೆಪಿಗೆ ಹೋಗುವುದಿಲ್ಲ. ನಮ್ಮ ಶಾಸಕರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನದಲ್ಲಿರುವ ಆ ಪಕ್ಷದ ಮುಖಂಡರಿಗೆ ನಿರಾಸೆಯಾಗಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next