ತಿ.ನರಸೀಪುರ: ಪೂರ್ವಭಾವಿ ಸಭೆಗಳಿಗೆ ನಿರಂತರ ಗೈರು ಹಾಜರಾಗುತ್ತಿರುವ ತಾಲೂಕು ಮಟ್ಟದ ಅಧಿಕಾರಿಗಳ ನಡೆಗೆ ಜನಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ಸೋಮವಾರ ತಾಪಂ ಸಭಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಜರುಗಿತು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರೂ ಆದ ತಹಶೀಲ್ದಾರ್ ಬಸವರಾಜುಚಿಗರಿ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಭೆಗೆ ಬೆರಳೆಣಿಕೆಯಷ್ಟು ಮಂದಿ ಅಧಿಕಾರಿಗಳು ಮಾತ್ರ ಹಾಜರಿದ್ದರು. ಕಸಾಪ ತಾಲೂಕು ಅಧ್ಯಕ್ಷ ರಾಜು ಮಾತನಾಡಿ, ಪೂರ್ವಭಾವಿ ಸಭೆಗೆ ನಿರಂತರ ಗೈರು ಹಾಜರಾಗುತ್ತಿರುವ ಅಧಿಕಾರಿಗಳ ವಿರುದ್ಧ ಏನು ಕ್ರಮವಹಿಸಿದ್ದೀರಿ ಮಾಹಿತಿ ನೀಡಿ ಎಂದು ತಹಶೀಲ್ದಾರ್‌ರನ್ನು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ತಹಶೀಲ್ದಾರ್‌ರವರು, ಸಭೆಗೆ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕಾಗಿ ಜಿಲ್ಲಾಧಿಕಾರಿಯವರಿಗೆ ವರದಿ ನೀಡಲಾಗಿದೆ ಎಂದರು. ಇದರಿಂದ ತೃಪ್ತರಾಗದ ರಾಜು, ಸಭೆಗೆ ಗೈರು ಹಾಜರಾಗಿ ಕನ್ನಡ ಭಾಷೆಗೆ ಅಗೌರವ ತೋರುತ್ತಿದ್ದಾರೆಂದರು. ರಾಜು ಮಾತಿನಿಂದ ವಿಚಲಿತರಾದ ಬಿಇಒ ಮರಿಸ್ವಾಮಿ, ಅಧಿಕಾರಿಗಳು ಬಾರದಿದ್ದರೂ ಈ ಹಿಂದಿನ ಸಭೆಗಳು ಯಶಸ್ಸು ಕಂಡಿವೆ. ಗೈರೆಂದು ಏಕೆ ಪದೇ ಪದೆ ದೂರುತ್ತೀರಿ ಎಂದು ಸಿಡಿಮಿಡಿಗೊಂಡರು.
ಅಧಿಕಾರಿ ಮಾತಿಗೆ ತಾಪಂ ಸದಸ್ಯ ಕುಕ್ಕೂರು ಗಣೇಶ್ ಆಕ್ಷೇಪ ವ್ಯಕ್ತಪಡಿಸಿದರು. ಸಭೆಗೆ ಜಿಪಂ ಪಿಡಬ್ಲೂಡಿ ಸೇರಿದಂತೆ 11 ಪ್ರಮುಖ ಇಲಾಖೆಗಳ ಅಧಿಕಾರಿಗಳು ಗೈರು ಹಾಜರಿದ್ದರು. ಆನಂತರ ನಡೆದ ಚರ್ಚೆಯಲ್ಲಿ ಕನ್ನಡ ರಾಜ್ಯೋತ್ಸವದಂದು 10 ಜನ ಸಾಧಕರಿಗೆ ಸನ್ಮಾನ ಮಾಡಲು ತೀರ್ಮಾನ ಕೈಗೊಳ್ಳಲಾಯಿತು.
ತಾಪಂ ಅಧ್ಯಕ್ಷ ಸಿ.ಚಾಮೇಗೌಡ, ಜಿಪಂ ಸದಸ್ಯ ಟಿ.ಎಚ್.ಮಂಜುನಾಥ್, ಸದಸ್ಯರಾದ ರಮೇಶ್, ರತ್ನರಾಜ್, ಚಂದ್ರಶೇಖರ್, ಸಾಜಿದ್ ಅಹಮ್ಮದ್, ಶಿರಸ್ತೇದಾರ್ ಪ್ರಭುರಾಜ್, ಟಿಒಟಿ ಶಿವಶಂಕರ್‌ಮೂರ್ತಿ, ಷಣ್ಮುಖಸ್ವಾಮಿ, ಇಒ ರಾಜು, ಸಿಡಿಪಿಒ ಬಸವರಾಜು ಮತ್ತಿತರರಿದ್ದರು.