Advertisement

ಇಂದಿನಿಂದ ಯಾಂತ್ರಿಕ ಮೀನುಗಾರಿಕೆಗೆ ಅಧಿಕೃತ ನಿಷೇಧ

11:14 PM Jun 14, 2020 | Sriram |

ಮಲ್ಪೆ /ಗಂಗೊಳ್ಳಿ : ನಾಳೆ ಯಿಂದ 47 ದಿನಗಳವರೆಗೆ ಯಾಂತ್ರಿಕ ಮೀನುಗಾರಿಕೆಗೆ ಅಧಿಕೃತವಾಗಿ ನಿಷೇಧ ಹೇರಲಾಗಿದೆ. 10 ಅಶ್ವಶಕ್ತಿ ಮೇಲ್ಪಟ್ಟ ಎಂಜಿನ್‌ ಬಳಸಿಕೊಂಡು ಮೀನುಗಾರಿಕೆ ನಡೆಸುವಂತಿಲ್ಲ. ಹಾಗಾಗಿ ಜು. 31ರ ವರೆಗೆ ಬಹುತೇಕ ಕರಾವಳಿಯ ಎಲ್ಲ ಬಂದರುಗಳಲ್ಲಿ ಯಾಂತ್ರಿಕ ಮೀನುಗಾರಿಕೆ ಸ್ಥಗಿತಗೊಳ್ಳಲಿದೆ.

Advertisement

ಪ್ರತಿ ವರ್ಷ ಮೇ 31ರಿಂದ ಯಾಂತ್ರೀಕೃತ ಮೀನುಗಾರಿಕೆ ಮುಕ್ತಾಯಗೊಳ್ಳುತ್ತಿದೆ. ಈ ಬಾರಿ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮೀನುಗಾರರ ಸಂಕಷ್ಟವನ್ನು ಅರಿತ ಕೇಂದ್ರ ಮತ್ತು ರಾಜ್ಯ ಸರಕಾರ ಯಾಂತ್ರೀಕೃತ ಮೀನು ಗಾರಿಕೆಗೆ ಜೂ. 14ರ ವರೆಗೆ ಅವಕಾಶ ನೀಡಿತ್ತು.

ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಕಾರ್ಮಿಕರ ಕೊರತೆ, ಸರಿಯಾದ ಮಾರುಕಟ್ಟೆ ಇಲ್ಲದೆ ಇನ್ನಿತರ ಕಾರಣಗಳಿಂದ ಮೇ 31ರಿಂದಲೇ ದೋಣಿ ಕಡಲಿಗೆ ಹೋಗುವುದನ್ನು ನಿಲ್ಲಿಸಲಾಗಿದ್ದು, ಮೀನು ಮಾರಾಟದ ಚಟುವಟಿಕೆಗಳು ಜೂ. 8ರ ವರೆಗೆ ವಿಸ್ತರಿಸಲಾಗಿತ್ತು. ಪ್ರಸ್ತುತ ಸಣ್ಣ ದೋಣಿಗಳಿಂದ ಬರುವ ಮೀನು ಗಳು ಸಿಗುತ್ತಿದ್ದು, ಮೀನುಗಳ ದರವೂ ದುಬಾರಿ. ಸದ್ಯ ಮಾರುಕಟ್ಟೆಯಲ್ಲಿ ಸ್ಥಳೀಯ ಮೀನಿನ ಜತೆಯಲ್ಲಿ ಹೊರ ರಾಜ್ಯದ ಮೀನಿನ ಮಾರಾಟವೂ ನಡೆಯುತ್ತಿದೆ.

ಸ್ಥಳಾವಕಾಶದ ಕೊರತೆ
ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಸುಮಾರು 2,000 ಯಾಂತ್ರೀಕೃತ ಬೋಟುಗಳಿವೆ. ಈಗಿರುವ 1 ಮತ್ತು 2ನೇ ಹಂತದ ದಕ್ಕೆಯಲ್ಲಿ 600 ಬೋಟುಗಳು, 3ನೇ ಹಂತದ ಬಾಪುತೋಟದ ಬಳಿ 300ರಷ್ಟು ಬೋಟುಗಳಿಗೆ ಮಾತ್ರ ನಿಲ್ಲಲು ಅವಕಾಶವಿದೆ. ಉಳಿದಂತೆ ಎಲ್ಲ ಬೋಟುಗಳನ್ನು ಇತರ ಪ್ರದೇಶಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಒಂದರ ಹಿಂದೆ ಒಂದರಂತೆ 10-14 ಸಾಲುಗಳು ನಿಲ್ಲುವ ಪರಿಸ್ಥಿತಿ ಇದೆ. ಮರದ ಮತ್ತು ಸ್ಟೀಲ್‌ ಬೋಟುಗಳು ಇರುವುದರಿಂದ ಬಹಳಷ್ಟು ಬಾರಿ ಬೋಟುಗಳು ಒಂದಕ್ಕೊಂದು ತಾಗಿ ಹಾನಿ ಸಂಭವಿಸುತ್ತದೆ. ಮಳೆಗಾಲದಲ್ಲಿ ಹೊಳೆಯ ನೀರಿನ ಹರಿವಿನ ಸೆಳೆತ ಹೆಚ್ಚಾ ದಾಗ ಮತ್ತಷ್ಟು ಅಪಾಯ ಉಂಟಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಬೋಟು ಮಾಲಕ ಸತೀಶ್‌ ಕುಂದರ್‌.

ಗಂಗೊಳ್ಳಿ : ಯಾಂತ್ರಿ ಕ ಮೀನುಗಾರಿಕೆ ಅಧಿಕೃತ ಮುಕ್ತಾಯ
ಗಂಗೊಳ್ಳಿ: ಈ ಋತುವಿನ ಯಾಂತ್ರೀಕೃತ ಮೀನುಗಾರಿಕೆಗೆ ಕೇಂದ್ರ ಸರಕಾರ ನೀಡಿದ್ದ ಹೆಚ್ಚುವರಿ ಕಾಲಾವ ಕಾಶವು ಜೂ.14ಕ್ಕೆ ಮುಗಿದಿದೆ. ಇನ್ನು ಜು. 31 ರ ವರೆಗೆ ಆಳ ಸಮುದ್ರ ಮೀನುಗಾರಿಕೆಗೆ ರಜೆಯಿದ್ದು, ಆ.1ರಿಂದ ಮತ್ತೆ ಆರಂಭವಾಗಲಿದೆ.

Advertisement

ರವಿವಾರ ಗಂಗೊಳ್ಳಿ ಬಂದರಿನಲ್ಲಿ ಬೋಟ್‌ಗಳನ್ನು ಸಮುದ್ರದಿಂದ ಮೇಲೆಳೆದು ಮಳೆಗಾಲದಲ್ಲಿ ಏನೂ ಆಗದಂತೆ ಸುರಕ್ಷಿತವಾಗಿ ಇಡುವ ಕೊನೆಯ ಹಂತದ ಕೆಲಸದಲ್ಲಿ ಮೀನುಗಾರರು ನಿರತರಾಗಿದ್ದರು. ಕೆಲವರು ಬೋಟ್‌ಗಳಿಗೆ ಈಗಾಗಲೇ ಮಳೆ ನೀರು ಬೀಳದಂತೆ ತಟ್ಟಿಯ ಮಾಡುಗಳನ್ನು ನಿರ್ಮಿಸಿದ್ದರೆ, ಮತ್ತೆ ಕೆಲವರು ಈಗಷ್ಟೇ ನಿರ್ಮಿಸುತ್ತಿದ್ದಾರೆ.

ಪ್ರತಿ ವರ್ಷದಂತೆ ಈ ಋತುವಿನ ಆಳ ಸಮುದ್ರ ಮೀನುಗಾರಿಕೆಯೂ ಕೂಡ ಮೇ 31 ಕ್ಕೆ ಮುಗಿಯಬೇಕಿತ್ತು. ಆದರೆ ಈ ಬಾರಿ ಲಾಕ್‌ಡೌನ್‌ನಿಂದಾಗಿ ಮೀನುಗಾರಿಕೆಗೆ ಕೆಲ ಕಾಲ ಅಡ್ಡಿಯಾಗಿದ್ದರಿಂದ ಕೇಂದ್ರ ಸರಕಾರ ರಜೆಯನ್ನು ಸ್ವಲ್ಪ ಮಟ್ಟಿಗೆ ವಿಸ್ತರಿಸಿದ್ದು, ಜೂ.14ರ ವರೆಗೆ ಮೀನುಗಾರಿಕೆ ಮಾಡಬಹುದು ಎನ್ನುವ ಆದೇಶ ಹೊರಡಿಸಿತ್ತು. ಆದರೆ ಜೂ. 1 ರಿಂದ 4ರವರೆಗೆ ಚಂಡಮಾರು ತದ ಮುನ್ಸೂಚನೆಯಿಂದಾಗಿ ಮೀನುಗಾರಿಕೆಗೆ ತೆರಳ ದಂತೆ ಸೂಚಿಸಲಾಗಿತ್ತು.

ಆಗಲೇ ಬಹುತೇಕ ಮೀನುಗಾರರು ಬೋಟ್‌ಗಳನ್ನು ದಡಕ್ಕೆಳೆದು ತಂದಿದ್ದರು. ಶೇ. 80ರಷ್ಟು ಬೋಟ್‌ಗಳು ಅವಧಿಗೂ ಮೊದಲೇ ಮೀನುಗಾರಿಕೆ ಮುಗಿಸಿದ್ದವು.

19 ಸಾವಿರ ಮೆಟ್ರಿಕ್‌ ಟನ್‌
ಈ ವರ್ಷದಲ್ಲಿ ಕುಂದಾಪುರ ತಾಲೂ ಕಿನ ಗಂಗೊಳ್ಳಿ, ಮರವಂತೆ, ತ್ರಾಸಿ, ಕೊಡೇರಿ, ಉಪ್ಪುಂದ, ಮಡಿಕಲ್‌, ಶಿರೂರು ಮತ್ತಿತರ ಕಡೆಗಳಲ್ಲಿ ಒಟ್ಟು 19 ಸಾವಿರ ಮೆಟ್ರಿಕ್‌ ಟನ್‌ಗೂ ಅಧಿಕ ಮೀನು ಸಂಗ್ರಹವಾಗಿದ್ದು, ಅಂದಾಜು 30,100 ಲಕ್ಷ ರೂ. ವಾರ್ಷಿಕ ವಹಿವಾಟು ಆಗಿದೆ.
ಆಶಾದಾಯಕವಾಗಿರಲಿಲ್ಲ

ಮತ್ಸ್ಯಕ್ಷಾಮ, ಚಂಡಮಾರುತ, ಹವಾಮಾನ ವೈಪರೀತ್ಯ, ಲೈಟ್‌ ಫಿಶಿಂಗ್‌, ಕೊರೊನಾದಿಂದಾಗಿ ಲಾಕ್‌ಡೌನ್‌ ಮುಂತಾದ ಅಡ್ಡಿ, ಸವಾಲು ಗಳಿಂದ ಕೂಡಿದ್ದ ಈ ಮೀನು ಗಾರಿಕೆ ಋತುವು ಅಷ್ಟೇನೂ ಆಶಾ ದಾಯಕವಾಗಿರಲಿಲ್ಲ ಎನ್ನುವುದು ಮೀನುಗಾರರ ಅಭಿಪ್ರಾಯ.

ಜೂ.22ರಿಂದ ನಾಡದೋಣಿ ಕಡಲಿಗೆ
ಯಾಂತ್ರಿಕ ಮೀನುಗಾರಿಕೆ ನಿಷೇಧ ಅವಧಿಯಲ್ಲಿ ನಾಡದೋಣಿಗಳು ಸಮುದ್ರತೀರ ಮತ್ತು ಹೊಳೆಭಾಗದಲ್ಲಿ ಮೀನುಗಾರಿಕೆ ನಡೆಸುತ್ತವೆ. ಈ ಬಾರಿ ಜೂ. 22ರಿಂದ ನಾಡದೋಣಿಗಳು ಕಡಲಿಗಿಳಿಯಲಿವೆ ಎಂದು ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಜನಾರ್ದನ ತಿಂಗಳಾಯ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next