Advertisement

ಆಹಾರ ಕಲಬೆರಕೆ ಪತ್ತೆ ಕೇಂದ್ರಕ್ಕೆ ಅಧಿಕೃತ ಮಾನ್ಯತೆ ಲಭ್ಯ

11:56 PM Oct 25, 2022 | Team Udayavani |

ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಧಾನ್ಯ, ಅಡುಗೆ ಎಣ್ಣೆ ಸೇರಿ ದಿನನಿತ್ಯದ ಆಹಾರ ವಸ್ತುಗಳ ಕಲಬೆರಕೆ ಪತ್ತೆಗೆ ಇನ್ನು ಮುಂದೆ ಖಾಸಗಿ ಲ್ಯಾಬ್‌ಗಳಿಗೆ ಮೊರೆ ಹೋಗುವುದು ತಪ್ಪಲಿದೆ.

Advertisement

ಏಕೆಂದರೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ 4 ಆಹಾರ ಪ್ರಯೋಗಾಲಯಗಳ ಪೈಕಿ ಮೈಸೂರಿನ ತಿಲಕನಗರ ಹಾಗೂ ಬೆಳಗಾವಿಯ ತಿಲಕವಾಡಿಯಲ್ಲಿರುವ ಆಹಾರ ಕಲಬೆರಕೆ ಪತ್ತೆ ಹಚ್ಚುವ ಕೇಂದ್ರಕ್ಕೆ ಕೊನೆಗೂ ರಾಷ್ಟ್ರೀಯ ಮಾನ್ಯತೆ ಮಂಡಳಿಯಿಂದ (ಎನ್‌ಎಬಿಎಲ್ ) ಮಾನ್ಯತೆ ದೊರೆತಿದೆ. ಇದರಿಂದಾಗಿ ಖಾಸಗಿ ಲ್ಯಾಬ್‌ಗಳಿಂದ ವರದಿಗಾಗಿ ಕಾಯುವುದು ತಪ್ಪಲಿದ್ದು, ಆಹಾರ ಕಲಬೆರಕೆ ಮಾಡುವವರ ವಿರುದ್ಧ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ.

ರಾಜ್ಯದಲ್ಲಿ ಇದುವರೆಗೆ ಎನ್‌ಎಬಿಎಲ್‌ನಿಂದ ಮಾನ್ಯತೆ ಹೊಂದಿರುವ ಖಾಸಗಿ ಲ್ಯಾಬ್‌ಗಳ ಮೊರೆ ಹೋಗಿ ಈ ಉತ್ಪನ್ನಗಳನ್ನು ಪರೀಕ್ಷಿಸುವ ಅನಿವಾರ್ಯತೆ ಇತ್ತು. ಇದರಿಂದ ಪ್ರತೀ ಸ್ಯಾಂಪಲ್‌ ಪರೀಕ್ಷೆಗೆ 5 ಸಾವಿರ ರೂ. ಖರ್ಚಾಗುತ್ತಿದ್ದವು. ವರ್ಷಕ್ಕೆ ಅಂದಾಜು 5-6 ಕೋಟಿ ರೂ.ಗಳನ್ನು ಇಲಾಖೆಯು ಖಾಸಗಿ ಲ್ಯಾಬ್‌ಗಳಿಗೆ ಪಾವತಿಸುತ್ತಿತ್ತು. ಈ ವೆಚ್ಚ ತಪ್ಪಲಿದೆ.

ಪ್ರಮಾಣೀಕರಿಸಬಹುದು
ಇದೀಗ ಇಲಾಖೆಯ ಅಧೀನದಲ್ಲಿರುವ ಲ್ಯಾಬ್‌ಗಳಲ್ಲೇ ಆಹಾರ ಉತ್ಪನ್ನಗಳ ಎಲ್ಲ ಮಾದರಿಯ ಪರೀಕ್ಷೆ ನಡೆಸಿ ಪ್ರಮಾಣೀಕರಿಸಬಹುದಾಗಿದೆ. ಜತೆಗೆ ಆಹಾರ ಕಲಬೆರಕೆ ಮಾಡುವವರ ವಿರುದ್ಧ ಇಲಾಖೆಯ ಅಧಿಕಾರಿಗಳಿಗೆ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲು ಅವಕಾಶಗಳಿವೆ. ಆಹಾರ ಕಲಬೆರಕೆ ಹಾಗೂ ಮಿಸ್‌ ಬ್ರಾಂಡ್‌ ಮಾಡುವವರ ವಿರುದ್ಧ ನ್ಯಾಯಾಲಯಕ್ಕೆ ಬಲವಾದ ಸಾಕ್ಷ್ಯ ಒದಗಿಸಬಹುದು. ನ್ಯಾಯಾಲ ಯವು ತಪ್ಪಿತಸ್ಥರಿಗೆ 25 ಸಾವಿರ ರೂ.ನಿಂದ 10 ಲಕ್ಷ ರೂ.ವರೆಗೆ ದಂಡ ವಿಧಿಸಿ 2 ತಿಂಗಳಿಂದ 7ವರ್ಷವರೆಗೆ ಶಿಕ್ಷೆ ವಿಧಿಸಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.

4 ಆಹಾರ ಪ್ರಯೋಗಾಲಯ
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧೀನದಲ್ಲಿ ಬೆಂಗಳೂರಿನಲ್ಲಿ ರಾಜ್ಯ ಆಹಾರ ಪ್ರಯೋಗಾಲಯ, ಮೈಸೂರು, ಬೆಳಗಾವಿ ಹಾಗೂ ಕಲಬುರಗಿಯಲ್ಲಿ ತಲಾ 1 ವಿಭಾಗೀಯ ಆಹಾರ ಪ್ರಯೋಗಾಲಯಗಳಿವೆ. ಆದರೆ, ಇದುವರೆಗೆ ಇವುಗಳಿಗೆ ಎನ್‌ಎಬಿಎಲ್‌ನಿಂದ ಮಾನ್ಯತೆ ಸಿಕ್ಕಿರಲಿಲ್ಲ. ಹೀಗಾಗಿ 2020ರ ಡಿಸೆಂಬರ್‌ನಲ್ಲಿ ಕೇಂದ್ರ ಎಫ್ಎಸ್‌ಎಸ್‌ಎಐ ಇದರ ಮಾನ್ಯತೆಯನ್ನು ರದ್ದುಪಡಿಸಿತ್ತು. ನಂತರ ವಿಎಸ್‌ಐಎಕ್ಸ್‌ ಹಾಗೂ ಟಿಯುವಿ ನಾರ್ಡ್‌ ಎಂ ಖಾಸಗಿ ಲ್ಯಾಬೋರೇಟರಿ ಜತೆ ಆಹಾರ ಉತ್ಪನ್ನಗಳ ಪರೀಕ್ಷೆಗೆ ಇಲಾಖೆಯು ಒಪ್ಪಂದ ಮಾಡಿಕೊಂಡಿತ್ತು. 2017 ರಿಂದ 2022 ಜುಲೈವರೆಗೆ 983 ಆಹಾರ ಉದ್ದಿಮೆಗಳ ವಿರುದ್ಧ ಪ್ರಕರಣ ದಾಖಲಿಸಿ 41.9 ಲಕ್ಷ ದಂಡ ವಿಧಿಸಲಾಗಿದೆ.

Advertisement

ಕಲಬೆರಕೆ ಹೇಗೆ?
-ಕಾಫಿ ಮತ್ತು ಟೀಪುಡಿಗೆ ಮರದ ಹೊಟ್ಟು, ಬಣ್ಣದಿಂದ ಆಕರ್ಷಿಸಲು ಅಪಾಯಕಾರಿ ರಾಸಾಯನಿಕ ಅಂಶ ಬಳಕೆ.
-ಹಾಲಿಗೆ ಡಿಟರ್ಜೆಂಟ್‌, ಅಡುಗೆ ಎಣ್ಣೆಗೆ ನಕಲಿ ಎಣ್ಣೆ, ಬೆಣ್ಣೆ ಮತ್ತು ಕೊಬ್ಬು ಮಿಶ್ರಣ.
-ಸಿಹಿ, ಖಾರ ತಿನಿಸು ಮತ್ತು ಕರಿದ ಪದಾಥಗಳಲ್ಲೂ ರುಚಿ ಹೆಚ್ಚಿಸಲು ರಾಸಾಯನಿಕ ಬಳಕೆ.
-ಹಣ್ಣು ಹಾಗೂ ತರಕಾರಿಗಳ ಬಣ್ಣ ಆಕರ್ಷಿಸಲು ರಾಸಾಯನಿಕ ಬೆರಕೆ.
-ಕಲಬೆರಕೆ ಆಹಾರದಿಂದ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳು ಬರುವ ಸಾಧ್ಯತೆಗಳಿವೆ.

ಬೆಂಗಳೂರಿನಲ್ಲಿ ರಾಜ್ಯ ಆಹಾರ ಪ್ರಯೋಗಾಲಯಕ್ಕೂ ಸದ್ಯದಲ್ಲೇ ಎನ್‌ಎಬಿಎಲ್ ಮಾನ್ಯತೆ ದೊರೆಯಲಿದೆ. ಆಹಾರ ಕಲಬೆರಕೆ ಮಾಡುವವರ ವಿರುದ್ಧ ನಿಗಾ ಇಡಲಾಗಿದ್ದು, ನಮ್ಮ ಸಿಬಂದಿ ಆಗಾಗ ಪರಿಶೀಲನೆ ಕೈಗೊಳ್ಳುತ್ತಿದ್ದಾರೆ.
-ಡಾ. ಶಮ್ಲಾ ಇಕ್ಬಾಲ್‌,
ಆಯುಕ್ತೆ, ಆಹಾರ ಸುರಕ್ಷತೆ ಮತ್ತು
ಗುಣಮಟ್ಟ ಇಲಾಖೆ

– ಅವಿನಾಶ್‌ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next