ಆನೇಕಲ್: ಕೋವಿಡ್ 19 ಲಾಕ್‌ಡೌನ್ ಮುಗಿದ ನಂತರವೂ ಪರಿಸ್ಥಿತಿ ಅವಲೋಕಿಸಿ ಬನ್ನೇರುಘಟ್ಟ ಉದ್ಯಾನವನಕ್ಕೆ ಬರುವ ಪ್ರವಾಸಿಗರು ಸಾಮಾಜಿಕ ಅಂತರವನ್ನು ಹೇಗೆ ಕಾಪಾಡಿಕೊಳ್ಳಬೇಕೆಂಬ ಕುರಿತು ಉದ್ಯಾನವನದ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ.
ತಾತ್ಕಾಲಿಕ ಬ್ರೇಕ್: ಉದ್ಯಾನವನದ ಪಿಕ್‌ನಿಕ್ ಕಾರ್ನರ್, ಸಫಾರಿ, ಚಿಟ್ಟೆ ಉದ್ಯಾನವನ, ಬೋಟಿಂಗ್ ಸೇರಿದಂತೆ ವಿವಿಧ ಕಡೆ ಇಂತಿಷ್ಟು ಸಮಯ, ಇಂತಿಷ್ಟೇ ಅಂತರ ಕಾಪಾಡಿಕೊಳ್ಳಬೇಕೆಂಬ ನಿಯಮ ಜಾರಿಗೆ ತರಲಿದ್ದಾರೆ.
ಆನ್‌ಲೈನ್ ಟಿಕೆಟ್ ಮಾತ್ರ: ಕೌಂಟರ್ ಬಳಿ ಟಿಕೆಟ್ ಪಡೆದು ಪ್ರವೇಶಿಸುತ್ತಿದ್ದರು. ಆದರೆ, ಇನ್ನು ಮುಂದೆ ಆನ್‌ಲೈನ್‌ನಲ್ಲಿ ಟಿಕೆಟ್ ಪಡೆದವರಿಗಷ್ಟೇ ಪ್ರವೇಶ ನೀಡಲಿದ್ದಾರೆ. ಅದೂ ದಿನ ಒಂದಕ್ಕೆ ಇಂತಿಷ್ಟು ಪ್ರವಾಸಿಗರಿಗೆ ಮಾತ್ರ ಅವಕಾಶವಿದೆ. ಮೃಗಾಲಯ ವೀಕ್ಷಣೆಗೆ ಕೇವಲ 2 ಗಂಟೆ ನಿಗದಿ ಮಾಡಲಾಗಿದ್ದು ಕೇವಲ 2 ಸಾವಿರ ಪ್ರವಾಸಿಗರು ವೀಕ್ಷಣೆ ಮಾಡಬಹುದಾಗಿದೆ ಎಂಬ ಲೆಕ್ಕಾಚಾರದಲ್ಲಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಅಂತರಕ್ಕೆ ಛತ್ರಿ ಬಳಕೆ : ಉದ್ಯಾನವನ ಆರಂಭದ ಬಳಿಕ ನಿಗದಿತ ಗುಂಪು, ಕುಟುಂಬಗಳಿಗೆ ಪ್ರವೇಶ ದ್ವಾರದಲ್ಲೇ ಒಂದು ಛತ್ರಿ ನೀಡಲಾಗುವುದು. ಅದಕ್ಕೊಂದು ಹೆಸರು ಅಥವಾ ಬಣ್ಣ ನೀಡಲಾಗುವುದು. ಹೀಗೆ ಒಂದು ಕುಟುಂಬ ಮತ್ತೂಂದು ಕುಟುಂಬದ ನಡುವೆ ಛತ್ರಿಗಳು ಸಹಜವಾಗಿ ಅಂತರ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ.
ಉದ್ಯಾನವನಕ್ಕೆ 1 ದಿನದಲ್ಲಿ 23000 ಸಾವಿರ ಪ್ರವಾಸಿಗರು ಭೇಟಿ ನೀಡಿರುವ ನಿದರ್ಶನಗಳಿವೆ. ಹೀಗಾಗಿ ಹಲವು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಕೋವಿಡ್ -19 ಪರಿಸ್ಥಿತಿ ಅವಲೋಕಿಸಿ ಉದ್ಯಾನವನ ಆರಂಭಿಸಲಾಗುವುದು.
–ವನಶ್ರೀ ಪಿನ್ ಸಿಂಗ್, ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕರು