Advertisement

ರೈತರಿಗೆ ಮಾರುಕಟ್ಟೆ ಕಲ್ಪಿಸಿದ ಅಧಿಕಾರಿಗಳು

06:01 PM May 07, 2020 | Suhan S |

ಕೊಪ್ಪಳ: ಕೋವಿಡ್‌-19 ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಜಾರಿಯಲ್ಲಿದ್ದು, ಈ ವೇಳೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರಿಗೆ ಸ್ಪಂದಿಸಿದ್ದಾರೆ. ಸಕಾಲಕ್ಕೆ ಸೂಕ್ತ ಸಲಹೆ, ಮಾರ ಕಟ್ಟೆಯ ವ್ಯವಸ್ಥೆ ಕಲ್ಪಿಸಿ ಗಮನ ಸೆಳೆದಿದ್ದಾರೆ.

Advertisement

ಜಿಲ್ಲೆಯ ಗಂಗಾವತಿ ತಾಲೂಕಿನ ಬೊಮಚ್ಚಿಹಾಳ ಗ್ರಾಮದ ರೈತ ದುರಗನಗೌಡ ಕಳೆದ 2019ರ ಜುಲೈನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಸಹಾಯಕ ತೋಟಗಾರಿಕೆ ಅಧಿಕಾರಿ ಚಂದಾಲಿಂಗ ಅವರ ಮಾರ್ಗದರ್ಶನದಲ್ಲಿ ತೈವಾನ್‌-786 ಎನ್ನುವ ಪಪ್ಪಾಯ ತಳಿಯನ್ನು 6×6 ಅಡಿ ಅಂತರದಲ್ಲಿ 4 ಎಕರೆಗೆ ಸುಮಾರು 4800 ಸಸಿಗಳನ್ನು ನಾಟಿ ಮಾಡಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ವೆಚ್ಚ ಮತ್ತು ಸಾಮಾಗ್ರಿ ವೆಚ್ಚ ಸೇರಿ ರೂ. 1.64 ಲಕ್ಷ ಭರಿಸಲಾಗಿದೆ. ತೋಟಗಾರಿಕೆ ಅಧಿಕಾರಿಗಳ ಮಾರ್ಗದರ್ಶನದಂತೆ ಪೋಷಕಾಂಶ ಮತ್ತು ಕೀಟನಾಶಕಗಳ ಬಳಕೆ ಮಾಡಿ ಉತ್ತಮ ಫಸಲು ಪಡೆದಿದ್ದಾರೆ.

ಫೆಬ್ರುವರಿ-2020ರಿಂದಲೇ ಕಾಯಿ ಬಿಡಲು ಆರಂಭಿಸಿ ಉತ್ತಮ ಫಸಲು ಬಂದು ಒಳ್ಳೆಯ ಆದಾಯದ ನಿರೀಕ್ಷೆಯಲ್ಲಿದ್ದಾಗ ಹೆಮ್ಮಾರಿಯಂತೆ ಕೋವಿಡ್‌-19 ಅಪ್ಪಳಿಸಿ ತಮ್ಮ ಉತ್ಪನ್ನವನ್ನು ಮಾರಾಟ ಮಾಡಲಾಗದೇ ರೈತ ದುರಗನಗೌಡ ಸಂಕಷ್ಟಕ್ಕೀಡಾಗಿದ್ದರು. ನಂತರ ಗಂಗಾವತಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಶಿವಯೋಗಪ್ಪ ಅವರ ಮುಂದೆ ತಮ್ಮ ಅಳಲು ತೋಡಿಕೊಂಡರು. ಆಗ ಶಿವಯೋಗಪ್ಪ ಅವರು ವಿವಿಧ ಮಾರುಕಟ್ಟೆಗಳನ್ನು ಸಂಪರ್ಕಿಸಿ ಇವರ ಉತ್ಪನ್ನಕ್ಕೆ ಮಾರುಕಟ್ಟೆ ಕಲ್ಪಸಿ ಕೊಟ್ಟಿದ್ದಾರೆ.

ಇದರಂತೆ 17 ಟನ್‌ ಪಪ್ಪಾಯವನ್ನು ದೆಹಲಿ ಮಾರುಕಟ್ಟೆಗೆ ರೂ. 7 ಪ್ರತಿ ಕೆ.ಜಿ. ಯಂತೆ ಕಳುಹಿಸಿದ್ದಾರೆ. ದರ ಕಡಿಮೆ ಆಯಿತೆಂದು ರೈತ ದುರಗನಗೌಡರು ತಮ್ಮ ಕಳವಳ ವ್ಯಕ್ತಪಡಿಸಿದಾಗ ಉಡುಪಿ ಹಾಗೂ ಮಂಗಳೂರು ಮಾರುಕಟ್ಟೆ ಸಂಪರ್ಕಿಸಿ ರೂ. 17 ರಂತೆ ಸಾಗಾಣಿಕೆ ವೆಚ್ಚ ಸೇರಿ ದರವನ್ನು ನಿಗದಿ ಪಡಿಸಿದ್ದು, ಈಗಾಗಲೇ 3 ಟನ್‌ನಷ್ಟು ಹಣ್ಣನ್ನು ಕಳುಹಿಸಿದ್ದಾರೆ. ಪ್ರತಿ ವಾರ 2ಟನ್‌ ಗಳಷ್ಟು ಬೇಡಿಕೆಯಿದ್ದು, ಈ ಮಾರುಕಟ್ಟೆಗಳಿಗೆ ದುರಗನಗೌಡರಿಗೆ ತಮ್ಮ ಉತ್ಪನ್ನವನ್ನು ಕಳುಹಿಸಿಕೊಡುವ ವ್ಯವಸ್ಥೆಯನ್ನು ಇಲಾಖೆಯಿಂದ ಒದಗಿಸಿಕೊಟ್ಟಿದ್ದಾರೆ. ಅಲ್ಲದೇ ಉತ್ಪನ್ನವನ್ನು ಮಾರಾಟ ಮತ್ತು ಸಾಗಾಣಿಕೆ ಮಾಡಲು ಪರವಾನಗಿ ಪತ್ರವನ್ನು (ಪಾಸ್‌) ನೀಡಿ ಸಹಕರಿಸಿ ಕಷ್ಟಕಾಲದಲ್ಲಿ ನೆರವಾಗಿದ್ದಾರೆ.

ಫಸಲನ್ನು ಚೆನ್ನಾಗಿ ಬೆಳೆಯಲು ಮಾರ್ಗ ದರ್ಶನ ನೀಡಿದ ತೋಟಗಾರಿಕೆ ಅಧಿಕಾರಿಗಳು ನನ್ನ ಉತ್ಪನ್ನವನ್ನು ಮಾರಾಟ ಮಾಡಲೂ ಮಾರುಕಟ್ಟೆ ಒದಗಿಸಿಕೊಟ್ಟಿದ್ದಾರೆ. ಅಲ್ಲದೇ,ಕೋವಿಡ್  ದಂತಹ ಕಷ್ಟದ ಸ್ಥಿತಿಯಲ್ಲೂ ನಮಗೆ ನೆರವಾಗಿದ್ದಕ್ಕೆ ನಾನುಅವರಿಗೆ ಚಿರಋಣಿ. –ದುರಗನಗೌಡ, ರೈತ

Advertisement
Advertisement

Udayavani is now on Telegram. Click here to join our channel and stay updated with the latest news.

Next