ಮಣಿಪಾಲ: ರಾಜ್ಯದಲ್ಲಿ ಹಿಂದಿನ ವರ್ಷಗಳ ವಸತಿ ಯೋಜನೆಯ ಅನುಷ್ಠಾನಕ್ಕಾಗಿ ಕೇಂದ್ರ ಸರಕಾರದಿಂದ ಗ್ರಾಮೀಣ ವಸತಿ ಯೋಜನೆಗೆ 400 ಕೋಟಿ ರೂ. ಮತ್ತು ನಗರ ವಸತಿ ಯೋಜನೆಗೆ 75 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಸಂಸದರ ಕಚೇರಿಯಲ್ಲಿ ಜಿಲ್ಲೆಯ, ನಗರ ಸ್ಥಳೀಯಾಡಳಿತದ ಪುರಸಭೆ, ಪ.ಪಂ. ಮತ್ತು ನಗರಸಭೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ನಗರಾಡಳಿತ ಸಂಸ್ಥೆಗಳ ವಾಜಪೇಯಿ ವಸತಿ ಯೋಜನೆ ಮತ್ತು ಅಂಬೇಡ್ಕರ್ ವಸತಿ ಯೋಜನೆಯ ಪ್ರಗತಿ ಪರಿಶೀಲಿಸಿದ ಅವರು, ಸಾಧ್ಯವಾದಷ್ಟು ಬೇಗ ವಸತಿ ಯೋಜನೆಯ ಪ್ರಗತಿಯನ್ನು ಮಾಡಿ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡಲು ಸೂಚಿಸಿದರು.
ಉಡುಪಿ ನಗರಸಭೆ, ಕುಂದಾಪುರ, ಕಾರ್ಕಳ ಪುರಸಭೆ, ಬೈಂದೂರು, ಸಾಲಿಗ್ರಾಮ ಪ.ಪಂ.ನ ಮುಖ್ಯಾಧಿಕಾರಿಗಳ ಜತೆ ಸಮಾಲೋಚಿಸಿ, ಮಾಹಿತಿ ಪಡೆದು, ಶೇ. 80ರಷ್ಟು ಮಾತ್ರ ವಸತಿ ಯೋಜನೆ ಅನುಷ್ಠಾನವಾಗಿದ್ದು, ಉಳಿಕೆ ಮನೆಗಳ ಪ್ರಗತಿಯನ್ನು ಕೂಡಲೇ ಪರಿಶೀಲಿಸಿ, ಪೂರ್ಣ ಪ್ರಮಾಣದಷ್ಟು ಬಡವರ ವಸತಿ ಯೋಜನೆಯನ್ನು ಅನುಷ್ಠಾನಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪಿಎಂ ಸ್ವ-ನಿಧಿ ಯೋಜನೆ ಅನುಷ್ಠಾನಕ್ಕೆ ಸೂಚನೆ
ನಗರಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಬೀದಿ ವ್ಯಾಪಾರಿಗಳು ಮತ್ತು ಸಣ್ಣಪುಟ್ಟ ವ್ಯಾಪಾರಿಗಳಿಗೆ ಪಿಎಂ ಸ್ವ-ನಿಧಿ ಯೋಜನೆಯನ್ನು ಗರಿಷ್ಠ ಪ್ರಮಾಣದಲ್ಲಿ ನೀಡಲು ಅಧಿಕಾರಿಗಳಿಗೆ ಸೂಚಿಸಿದರು. ಅಕ್ಟೋಬರ್ ಮೊದಲ ವಾರದೊಳಗೆ ಪಿಎಂ ಸ್ವ-ನಿಧಿ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಮಾಡಿ, ಫಲಾನುಭಗಳಿಗೆ ಯೋಜನೆಯ ಉಪಯೋಗ ಪಡೆಯಲು ಕ್ರಮ ತೆಗೆದುಕೊಳ್ಳಬೇಕು.
ಈ ಬಗ್ಗೆ ಅರ್ಜಿ ಅಹ್ವಾನಿಸಿ ರಾಷ್ಟ್ರೀಕೃತ ಬ್ಯಾಂಕ್ ಮೂಲಕ ಸಾಲ ಸೌಲಭ್ಯ ಒದಗಿಸಲು ಶಿಫಾರಸ್ಸು ಮಾಡುವಂತೆ ನಗರಾಡಳಿತ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರವೀಂದ್ರ, ವಸತಿ ಯೋಜನೆಯ ನೋಡಲ್ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.