ತಾಳಿಕೋಟೆ: ಪಟ್ಟಣದ ಪುರಸಭೆಯ ಮಳಿಗೆಗಳನ್ನು ಬಾಡಿಗೆ ಪಡೆದಿದ್ದ ಅಂಗಡಿಕಾರರಲ್ಲಿ ವರ್ಷಾನುಗಟ್ಟಲೇ ಬಾಡಿಗೆ ಕಟ್ಟದೇ ಸತಾಯಿಸುತ್ತಿದ್ದ ಅಂಗಡಿಕಾರರಿಗೆ ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ, ಕಂದಾಯ ನಿರೀಕ್ಷಕ ಸಿದ್ದರಾಯ ಕಟ್ಟಿಮನಿ ನೇತೃತ್ವದಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಾಡಿಗೆ ಕಟ್ಟದ ಅಂಗಡಿಗಳಿಗೆ ಬೀಗ ಜಡಿದು ಬಿಸಿ ಮುಟ್ಟಿಸಿದ್ದಾರೆ.
ಪುರಸಭೆ ಸಂಬಂಧಿತ ಬಾಡಿಗೆ ಪಡೆದ ನೂರಾರು ಅಂಗಡಿಗಳಿದ್ದು ಅದರಲ್ಲಿ ಶೇ. 50 ಅಂಗಡಿಕಾರರು ವರ್ಷದ ಬಾಡಿಗೆ ಕಟ್ಟಿಲ್ಲ. ಕೆಲವು ಅಂಗಡಿಕಾರರು 15ರಿಂದ 20 ಲಕ್ಷದವರೆಗೆ ಬಾಡಿಗೆ ಉಳಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಪುರಸಭೆ ಅಧಿಕಾರಿಗಳು ಬಾಡಿಗೆ ವಸೂಲಿಗೆ ಹೋದರೂ ಕೂಡಾ ಬಾಡಿಗೆ ನೀಡದೇ ಸತಾಯಿಸುತ್ತ ಸಾಗಿದ್ದರೆನ್ನಲಾಗಿದೆ. ಹೀಗಾಗಿ ಪುರಸಭೆ ಮುಖ್ಯಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳು ಬೆಳಗ್ಗೆಯಿಂದ ಬಾಡಿಗೆ ಕಟ್ಟದ 29 ಅಂಗಡಿಗಳಿಗೆ ಬೀಗ ಜಡಿದು ಬಿಸಿ ಮುಟ್ಟಿಸುವ ಕಾರ್ಯ ಮಾಡಿದ್ದಾರೆ.
ಬಾಡಿಗೆ ಕಟ್ಟದ ಅಂಗಡಿಗಳಿಗೆ ಬೀಗ ಜಡಿಯುವ ಸಮಯದಲ್ಲಿ ಅಂಗಡಿಕಾರರ ಹಾಗೂ ಪುರಸಭೆ ಅಧಿಕಾರಿಗಳ ನಡುವೆ ಕೆಲವು ಹೊತ್ತು ವಾಗ್ವಾದವು ಕೂಡಾ ನಡೆಯಿತು. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು ವರ್ಷಾನುಗಟ್ಟಲೇ ನಿಮ್ಮ ಅಂಗಡಿಗಳಿಗೆ ಬಾಡಿಗೆ ವಸೂಲಿಗೆ ಸಿಬ್ಬಂದಿಗಳು ಅಲೆದಾಡಿ ಸಾಕಾಗಿದೆ.
ಬಾಡಿಗೆ ಸಂಪೂರ್ಣ ಬರಣಾ ಮಾಡುವವರೆಗೂ ಬೀಗವನ್ನು ತೆರವು ಮಾಡಲ್ಲ. ಬೀಗ ಜಡಿದ ಅಂಗಡಿಗಳನ್ನು ತಿಂಗಳಾಂತ್ಯದವರೆಗೆ ನೋಡುತ್ತೇವೆ. ಅಲ್ಲಿವರೆಗೂ ಕಟ್ಟದೆ ಇದ್ದಲ್ಲಿ ಅಂಗಡಿಗಳನ್ನು ಪುರಸಭೆ ವಶಕ್ಕೆ ಪಡೆದು ಮರು ಲೀಲಾವು ಮಾಡಲಾಗುವದೆಂದು ಅಂಗಡಿಕಾರರಿಗೆ ಕಂದಾಯ ನಿರೀಕ್ಷಕ ಸಿದ್ದರಾಯ ಕಟ್ಟಿಮನಿ ಎಚ್ಚರಿಸಿ ಮುನ್ನಡೆದರು.
ಕಾರ್ಯಾಚರಣೆಯಲ್ಲಿ ಕಂದಾಯ ಅಧಿಕಾರಿ ಎನ್.ಎಸ್. ಪಾಟೀಲ, ಕರ ವಸೂಲಿಗಾರ ಡಿ.ಬಿ. ಜಾನ್ವೇಕರ ಪಾಲ್ಗೊಂಡಿದ್ದರು. ಕೆಲವರು ವರ್ಷದ ಬಾಡಿಗೆ ಕಟ್ಟುವುದಿದೆ. ಇನ್ನೂ ಕೆಲವರು ಕಟ ಬಾಕಿದಾರ ರಾಗಿದ್ದಾರೆ. 15 ರಿಂದ 20 ಲಕ್ಷದವರೆಗೆ ಅಂಗಡಿಗಳ ಬಾಡಿಗೆಯನ್ನು ಉಳಿಸಿಕೊಂಡಿದ್ದಾರೆ. ಕೂಡಲೇ ಸಂಪೂರ್ಣ ಬಾಡಿಗೆ ಮೊತ್ತವನ್ನು ಪಾವತಿಸದೇ ಇದ್ದಲ್ಲಿ ಅಂಗಡಿಗಳನ್ನು ಪುರಸಭೆ ವಶಕ್ಕೆ ಪಡೆದು ಮರು ಲೀಲಾವು ಮಾಡಲಾಗುವದು.
-ಸುರೇಶ ನಾಯಕ ಪುರಸಭೆ ಮುಖ್ಯಾಧಿಕಾರಿ