ಕನಕಪುರ: ವಾಮ ಮಾರ್ಗದಲ್ಲಿ ಹಣ ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳು ನಿಧಿಗಳ್ಳರ ಜತೆ ಶಾಮೀಲಾಗಿರುವ ಅನುಮಾನ ವ್ಯಕ್ತವಾಗುತ್ತಿದೆ ಎಂದು ಇರುಳಿಗರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಅಧ್ಯಕ್ಷ ಕೃಷ್ಣಮೂರ್ತಿ ಆರೋಪಿಸಿದ್ದಾರೆ.
ತಾಲೂಕಿನ ಮರಳವಾಡಿ ಹೋಬಳಿ ಬಂಟನಾಳ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ನಿಧಿಗಳ್ಳರು ಯಂತ್ರಗಳನ್ನು ತಂದು ನಿಧಿ ಶೋಧಿಸಲು ವಾಮಾಚಾರ ನಡೆಸಿ ಆಳುದ್ದ ಗುಂಡಿ ಅಗೆದಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ಸಹಕಾರವಿಲ್ಲದೇ ಇಷ್ಟೆಲ್ಲಾ ನಡೆಯಲು ಸಾಧ್ಯವಿಲ್ಲ ಎಂದು ಆರೋಪಿಸಿದರು.
ಶುಕ್ರವಾರ ರಾತ್ರಿ 11ರ ಸಮಯದಲ್ಲಿ ಜೆಸಿಬಿ ಮತ್ತು ಬೊಲೇರೊ ಜೀಪಿನಲ್ಲಿ ಬಂದ ನಿಧಿಗಳ್ಳರು, ವಾಮಾಚಾರ ಮಾಡಿ ಅರಿಶಿಣ -ಕುಂಕುಮ, ಹೂ ಬಾಳೆಹಣ್ಣು ಇಟ್ಟು ಪೂಜೆ ಮಾಡಿದ್ದಾರೆ. ನಂತರ ಜೆಸಿಬಿಯಲ್ಲಿ ಬೃಹದಾಕಾರದ ಬಂಡೆ ಕೆಳಗೆ ನಿಧಿ ಶೋಧಿಸಲು ಆಳುದ್ದ ಗುಂಡಿ ತೆಗೆದಿದ್ದಾರೆ. ಯಂತ್ರದ ಶಬ್ಧ ಕೇಳಿ ಬುಡಗಯ್ಯನ ದೊಡ್ಡಿ ಗ್ರಾಮಸ್ಥರು, ಸ್ಥಳಕ್ಕೆ ಬರುತ್ತಿದ್ದಂತೆ ನಿಧಿಗಳ್ಳರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಕಾಡಿನಲ್ಲಿ ಬೇಟೆಯಾಡಲು ಬರುವ ಬೇಟೆಗಾರರು ಬಳಸುವ ಸಣ್ಣ ಬ್ಯಾಟರಿ ಬೆಳಕನ್ನು ಬೆನ್ನತ್ತುವ ಅರಣ್ಯ ಇಲಾಖೆ ಅಧಿಕಾರಿಗಳಿಗೆ, ನಿಧಿ ಶೋಧಿಸಲು ಬಂದ ಬೃಹದಾಕಾರದ ಯಂತ್ರದ ಶಬ್ಧ ಮತ್ತು ಬೆಳಕು ಕಾಣಿಸದೇ ಇರಲು ಹೇಗೆ ಸಾಧ್ಯ ಎಂಬ ಅನುಮಾನ ವ್ಯಕ್ತಪಡಿಸಿದರು.
ಕಾಡು ಪ್ರಾಣಿಗಳು ಹೊರಗೆ ಹೋಗದಂತೆ ಅರಣ್ಯ ಪ್ರದೇಶದ ಸುತ್ತಲೂ ಅಳವಡಿಸಿರುವ ಸೋಲಾರ್ ವಿದ್ಯುತ್ ತಂತಿ ಬೇಲಿ ದಾಟಿ ಯಂತ್ರಗಳು ಮತ್ತು ವಾಹನಗಳು ಅರಣ್ಯಕ್ಕೆ ಬರಲು ಅರಣ್ಯ ಇಲಾಖೆ ಅಧಿಕಾರಿಗಳ ಸಹಕಾರವಿಲ್ಲದೆ ಸಾಧ್ಯವಿಲ್ಲ. ಅರಣ್ಯದಲ್ಲಿ ನಿಧಿಗಳ್ಳತನ ಇದೆ ಮೊದಲಲ್ಲ. ಈ ಹಿಂದೆ 8 ಕಡೆ ಇದೆ ರೀತಿ ನಿಧಿ ಶೋಧಿಸಲು ಯಂತ್ರ ಬಳಸಿ ಗುಂಡಿ ತೆಗೆದಿದ್ದಾರೆ. ಈ ಸಂಬಂಧ ಅರಣ್ಯ ಇಲಾಖೆಯಲ್ಲಿ ಈ ವರೆಗೆ ಒಂದು ಪ್ರಕರಣವೂ ದಾಖಲಾಗಿಲ್ಲ. ಈ ಮೂಲಕ ಅರಣ್ಯ ಇಲಾಖೆ ಅಧಿಕಾರಿಗಳು ಹಣ ಮಾಡಲು ವಾಮ ಮಾರ್ಗ ಹಿಡಿದಿದ್ದಾರಾ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಯಾವ ಕ್ರಮ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ ಎಂದರು.