Advertisement

Naxal Hunting; 2 ರಾಜ್ಯಗಳಲ್ಲಿ ಎನ್‌ಕೌಂಟರ್‌: ಒಂದೇ ದಿನ 13 ನಕ್ಸಲರ ಹತ್ಯೆ

09:00 PM Apr 02, 2024 | Team Udayavani |

ರಾಯ್‌ಪುರ/ಬಾಲಾಘಾಟ್‌: ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶಗಳಲ್ಲಿ ಮಂಗಳವಾರ ನಡೆದ ನಕ್ಸಲ್‌ ನಿಗ್ರಹ ಕಾರ್ಯಾಚರಣೆಯಲ್ಲಿ ಒಟ್ಟು 13 ಮಂದಿ ನಕ್ಸಲರನ್ನು ಹೊಡೆದುರುಳಿಸಲಾಗಿದೆ. ಲೋಕಸಭೆ ಚುನಾವಣೆಗೆ ಕೇವಲ 16 ದಿನಗಳು ಬಾಕಿಯಿರುವಂತೆಯೇ ಈ ಬೆಳವಣಿಗೆ ನಡೆದಿದೆ.

Advertisement

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 11 ನಕ್ಸಲರನ್ನು ಹತ್ಯೆಗೈಯ್ಯಲಾಗಿದ್ದು, ಇತ್ತೀಚೆಗಿನ ವರ್ಷಗಳಲ್ಲಿ ನಡೆದ ಅತಿದೊಡ್ಡ ನಕ್ಸಲ್‌ ನಿಗ್ರಹ ಕಾರ್ಯಾಚರಣೆ ಇದಾಗಿದೆ. ಬಿಜಾಪುರ ಜಿಲ್ಲೆಯು ಬಸ್ತಾರ್‌ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದು, ಎ. 19ರ ಮೊದಲ ಹಂತದಲ್ಲೇ ಇಲ್ಲಿ ಚುನಾವಣೆ ನಡೆಯಲಿದೆ.

ಛತ್ತೀಸ್‌ಗಢದ ಲೇಂದ್ರಾ ಗ್ರಾಮದ ಅರಣ್ಯ ಪ್ರದೇಶದಲ್ಲಿ ಮುಂಜಾನೆ 6 ಗಂಟೆಗೆ ಗುಂಡಿನ ಚಕಮಕಿ ಆರಂಭವಾಗಿತ್ತು. ಬಳಿಕ ಎನ್‌ಕೌಂಟರ್‌ ನಡೆದ ಸ್ಥಳದಲ್ಲಿ 11 ನಕ್ಸಲರ ಮೃತದೇಹಗಳು ಪತ್ತೆಯಾಗಿವೆ. ಜತೆಗೆ ಲಘು ಮಷಿನ್‌ ಗನ್‌, ಗ್ರೆನೇಡ್‌ ಲಾಂಚರ್‌ಗಳು ಹಾಗೂ ಇತರ ಶಸ್ತ್ರಾಸ್ತ್ರಗಳು ಸಿಕ್ಕಿವೆ ಎಂದು ಬಸ್ತಾರ್‌ ವಲಯದ ಐಜಿಪಿ ಸುಂದರ್‌ರಾಜ್‌ ಹೇಳಿದ್ದಾರೆ.

ಮಧ್ಯಪ್ರದೇಶದಲ್ಲೂ ಎನ್‌ಕೌಂಟರ್‌

ಮಧ್ಯಪ್ರದೇಶದ ಬಾಲಘಾಟ್‌ ಜಿಲ್ಲೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು ನಕ್ಸಲರನ್ನು ಹತ್ಯೆಗೈಯ್ಯಲಾಗಿದೆ. ಈ ಹಿಂದೆಯೇ ಸಜಂತಿ ಅಲಿಯಾಸ್‌ ಕ್ರಾಂತಿ ಮತ್ತು ರಾಘು ಅಲಿಯಾಸ್‌ ಶೇರ್‌ ಸಿಂಗ್‌ ಅವರನ್ನು ಹಿಡಿದುಕೊಟ್ಟರೆ ನಗದು ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು. ಇವರಿಬ್ಬರೂ ಈಗ ಹತ್ಯೆಗೀಡಾಗಿದ್ದು, ಅವರ ಬಳಿಯಿದ್ದ ಎಕೆ-47 ರೈಫ‌ಲ್‌, 12 ಬೋರ್‌ ರೈಫ‌ಲ್‌ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಬೇಸಗೆಯಲ್ಲೇ ಹೆಚ್ಚು ದಾಳಿ

ಗಮನಾರ್ಹ ಅಂಶವೆಂದರೆ ನಕ್ಸಲರು ಹೆಚ್ಚಾಗಿ ಕುಶಲ ಪ್ರತಿದಾಳಿ (ಟಿಸಿಒಸಿ)ಯನ್ನು ಪ್ರತೀ ಬಾರಿ ಬೇಸಗೆಯಲ್ಲಿ ಅಂದರೆ ಮಾರ್ಚ್‌ನಿಂದ ಜೂನ್‌ವರೆಗಿನ ಅವಧಿಯಲ್ಲೇ ಕೈಗೊಳ್ಳುತ್ತಾರೆ. ಈ ಮೂಲಕ ತಮ್ಮ ಕಾರ್ಯಚಟುವಟಿಕೆಗಳಿಗೆ ವೇಗ ನೀಡುತ್ತಾರೆ. ಬಸ್ತಾರ್‌ ಪ್ರದೇಶದಲ್ಲಿ ಈವರೆಗೆ ಭದ್ರತಾಪಡೆಗಳ ಮೇಲೆ ಅತೀ ಹೆಚ್ಚಿನ ಸಂಖ್ಯೆಯ ದಾಳಿ ನಡೆದಿರುವುದು ಇದೇ ಅವಧಿಯಲ್ಲಿ.

ಬಸ್ತಾರ್‌: 3 ತಿಂಗಳಲ್ಲಿ 44 ನಕ್ಸಲರ ಹತ್ಯೆ

ಮಾ. 27ರಂದು ಛತ್ತೀಸ್‌ಗಢದ ಬಿಜಾಪುರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 6 ಮಂದಿ ನಕ್ಸಲರು ಹತರಾಗಿದ್ದರು. ಮಂಗಳವಾರದ ಎನ್‌ಕೌಂಟರ್‌ನ ಸಾವು-ನೋವನ್ನೂ ಸೇರಿಸಿದರೆ ಪ್ರಸಕ್ತ ವರ್ಷ ಅಂದರೆ ಕೇವಲ 3 ತಿಂಗಳಲ್ಲಿ ಬಸ್ತಾರ್‌ ಪ್ರಾಂತ್ಯವೊಂದರಲ್ಲೇ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಹತ್ಯೆಗೀಡಾದ ನಕ್ಸಲರ ಸಂಖ್ಯೆ 44ಕ್ಕೇರಿದೆ.

Advertisement

Udayavani is now on Telegram. Click here to join our channel and stay updated with the latest news.

Next