Advertisement

Kadaba: ಚೇರು ಪ್ರದೇಶದ ಮನೆಗೆ ಶಂಕಿತರ ಭೇಟಿ; ಊಟ ಮಾಡಿ, ಸಾಮಗ್ರಿ ಪಡೆದು ತೆರಳಿದರು

01:10 AM Apr 06, 2024 | Team Udayavani |

ಸುಬ್ರಹ್ಮಣ್ಯ: ಕಡಬ ಪೊಲೀಸ್‌ ಠಾಣಾ ವ್ಯಾಪ್ತಿಯ ಮನೆಯೊಂದಕ್ಕೆ ಗುರುವಾರ ರಾತ್ರಿ ವೇಳೆ ಶಂಕಿತರ ತಂಡ ಆಗಮಿಸಿ ಊಟ, ಮಾಡಿ ದಿನಸಿ ಸಾಮಗ್ರಿಗಳನ್ನು ಪಡೆದು ತೆರಳಿರುವ ವಿಷಯ ಶುಕ್ರವಾರ ಸಂಜೆ ವೇಳೆಗೆ ಬೆಳಕಿಗೆ ಬಂದಿದೆ.

Advertisement

ತಾಲೂಕಿನ ಕೊಂಬಾರು ಗ್ರಾಮದ ಚೇರು ಪ್ರದೇಶದ ಮನೆಯೊಂದಕ್ಕೆ ಶಂಕಿತರು ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಗುರುವಾರ ಸಂಜೆ ಏಳು ಗಂಟೆ ವೇಳೆ ತಂಡ ಮನೆಗೆ ಆಗಮಿಸಿ ಊಟ ಮಾಡಿದ್ದು, ಸುಮಾರು ಒಂಬತ್ತು ಗಂಟೆ ವೇಳೆ ದಿನಸಿ ಸಾಮಾಗ್ರಿಗಳನ್ನು ಪಡೆದು ತೆರಳಿದ್ದಾರೆ ಎಂದು ತಿಳಿದುಬಂದಿದೆ. ತಂಡದಲ್ಲಿ ನಾಲ್ಕರಿಂದ ಆರು ಮಂದಿ ಇದ್ದರು ಎನ್ನಲಾಗಿದೆ. ಮನೆಗೆ ಆಗಮಿಸಿದ ಶಂಕಿತರು ಶಸಾಸ್ತ್ರ ಹಿಡಿದುಕೊಂಡಿದ್ದರು ಎನ್ನಲಾಗಿದೆ. ಮನೆಯಲ್ಲಿದ್ದ ವೇಳೆ ಮನೆಯವರ ಜತೆ ಮಾತನಾಡಿರುವ ಸಾಧ್ಯತೆ ಇದೆ.

ಶೋಧ ಕಾರ್ಯ
ಶಂಕಿತರು ಮನೆಗೆ ಆಗಮಿಸಿರುವ ಮಾಹಿತಿ ಇಲಾಖೆಗೆ ಲಭ್ಯವಾಗುತ್ತಲೇ ನಕ್ಸಲ್‌ ನಿಗ್ರಹ ಪಡೆ, ಪೊಲೀಸರು ಮಾಹಿತಿ ಕಲೆ ಹಾಕುವ ಕೆಲಸ ಮಾಡುತ್ತಿದ್ದು, ಎಎನ್‌ಎಫ್‌ ತಂಡ ಮನೆಗೆ ಭೇಟಿ ನೀಡಲಾದ ಆಸು-ಪಾಸು ಪರಿಸರದಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಶಂಕಿತರು ಅದೇ ಪರಿಸರಕ್ಕೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದತ್ತ ತೆರಳಿರುವ ಶಂಕೆ ಇದೆ.

ಶಂಕಿತರ ಸಂಚಾರ
ನಕ್ಸಲರು ಇರಬಹುದೆಂಬ ಶಂಕಿತರು ಮಾ.16ರಂದು ದ.ಕ. ಕೊಡಗು ಗಡಿ ಭಾಗದ ಮಡಿಕೇರಿ ಠಾಣಾ ವ್ಯಾಪ್ತಿಯ ಕೂಜಿಮಲೆ ಎಸ್ಟೇಟ್‌ ನ ಅಂಗಡಿಯೊಂದಕ್ಕೆ ಭೇಟಿ ನೀಡಿ ಸಾಮಗ್ರಿಗಳನ್ನು ಖರೀದಿಸಿ ತೆರಳಿದ್ದರು. ಮಾ. 23ರಂದು ಶಂಕಿತರು ಕಡಬ ತಾಲೂಕಿನ ಐನೆಕಿದು ಗ್ರಾಮದ ಅರಣ್ಯದ ಅಂಚಿನ ಮನೆಗೆ ಭೇಟಿ ನೀಡಿ ಊಟ, ಸಾಮಗ್ರಿಗಳನ್ನು ಪಡೆದು ತೆರಳಿದ್ದರು. ಮಾ.18ರಿಂದಲೇ ಶಂಕಿತರು ಭೇಟಿ ನೀಡಿದ ಪರಿಸರ ಸೇರಿದಂತೆ ವಿವಿಧೆಡೆ ನಕ್ಸಲ್‌ ನಿಗ್ರಹ ಪಡೆ ಶೋಧ ಕಾರ್ಯ ಆರಂಭಿಸಿದೆ. ಇದೀಗ ಎ. 5ರಂದು ಶಂಕಿತರು ಚೇರು ಎಂಬಲ್ಲಿನ ಮನೆಗೆ ಭೇಟಿ ನೀಡಿದ್ದಾರೆ ಎನ್ನಲಾಗಿದ್ದು, ಶೋಧ ಕಾರ್ಯ ನಡೆಸಲಾಗುತ್ತಿದೆ. ಕೂಜಿಮಲೆ ಹಾಗೂ ಐನೆಕಿದು ಪ್ರದೇಶಕ್ಕೆ ಭೇಟಿ ನೀಡಿದ ತಂಡದಲ್ಲಿ ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಒಟ್ಟು ನಾಲ್ಕು ಮಂದಿ ಇದ್ದರು ಎಂಬುದು ಸ್ಪಷ್ಟವಾಗಿತ್ತು. ಆದರೆ ಚೇರು ಎಂಬಲ್ಲಿಗೆ ಬಂದ ತಂಡದಲ್ಲಿ ಸ್ಪಷ್ಟವಾಗಿ ಎಷ್ಟು ಮಂದಿ ಇದ್ದರು ಎಂದು ತಿಳಿದುಬಂದಿಲ್ಲ. 4 ಅಥವಾ 6 ಮಂದಿ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಶೂಟೌಟ್‌ ನಡೆದ
ಸಮೀಪದ ಪ್ರದೇಶ
2012ರಲ್ಲಿ ನಕ್ಸಲರು ಭೇಟಿ ನೀಡಿದ್ದ ಪರಿಸರದಲ್ಲಿ ಶೂಟೌಟ್‌ ನಡೆದ ಪರಿಸರದ ಸಮೀಪದ ಪ್ರದೇಶ ಚೇರು. 2012ರಲ್ಲಿ ಸುಬ್ರಹ್ಮಣ್ಯ ಸಮೀಪದ ಚೇರು, ಭಾಗ್ಯ, ಎರ್ಮಾಯಿಲ್‌, ನಡುತೋಟ, ಪಳ್ಳಿಗದ್ದೆ ಭಾಗಕ್ಕೆ ನಕ್ಸಲರು ಭೇಟಿ ನೀಡಿದ್ದರು. ಬಳಿಕ ಪಳ್ಳಿಗದ್ದೆ ಕಾಡಿನಲ್ಲಿ ನಕ್ಸಲರು ಮತ್ತು ಎಎನ್‌ಎಫ್‌ ತಂಡಸ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಕೆಲವೇ ದಿನಗಳ ಅಂತರದಲ್ಲೇ ಬಿಸಿಲೆ ಸಮೀಪದ ಭಾಗಿಮಲೆ ಕಾಡಿನಲ್ಲಿ ಎನ್‌ಕೌಂಟರ್‌ನಲ್ಲಿ ನಕ್ಸಲ್‌ ತಂಡದ ಓರ್ವ ಸದಸ್ಯ ಸಾವನ್ನಪ್ಪಿದ್ದ. ಇದೀಗ ಇದೇ ಪರಿಸರದಲ್ಲಿ ಮತ್ತೂಮ್ಮೆ ಶಂಕಿತರು ಭೇಟಿ ನೀಡಿರುವುದು ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next