ಸಕಲೇಶಪುರ: ಹಾಸನದಿಂದ ಮಾರನಹಳ್ಳಿಯವರೆಗೆ ಹದಗೆಟ್ಟಿರುವ ರಾಷ್ಟ್ರೀಯ ಹೆದ್ದಾರಿ 75ನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಉನ್ನತ ಅಧಿಕಾರಿಗಳು ಶನಿವಾರ ಪರಿಶೀಲನೆ ಮಾಡಿದರು. ಹಾಸನದಿಂದ ಮಾರನಹಳ್ಳಿಯವರೆಗೆ ಹದಗೆಟ್ಟಿರುವ ರಾಷ್ಟ್ರೀಯ ಹೆದ್ದಾರಿ 75 ಸಂಪೂರ್ಣವಾಗಿ ಹದಗೆಟ್ಟಿದ್ದು ಹೆದ್ದಾರಿಯನ್ನು ದುರಸ್ತಿ ಪಡಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ವತಿಯಿಂದ ಕಳೆದ ವಾರ ಪರಿಶೀಲನೆ ಮಾಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಹೆದ್ದಾರಿಯನ್ನು ವಿವಿಧೆಡೆ ಪರಿಶೀಲಿಸಿದ ನಂತರ ಪಟ್ಟಣದ ಹೇಮಾವತಿ ಸೇತುವೆಯನ್ನು ವೀಕ್ಷಣೆ ಮಾಡಲು ಆಗಮಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಲಯ ಅಧಿಕಾರಿ ಸೂರ್ಯವಂಶಿ ಅವರನ್ನು ವಿವಿಧ ಸಂಘಟನೆಗಳ ಮುಖಂಡರು ಮುತ್ತಿಗೆ ಹಾಕಿ ಇಲ್ಲಿ ದುರಸ್ತಿ ಮಾಡುವುದು ಬೇಡ, ಸಂಪೂರ್ಣವಾಗಿ ರಸ್ತೆ ಹದಗೆಟ್ಟಿರುವುದರಿಂದ ಮರು ಡಾಂಬರೀಕರಣ ಮಾಡಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಲಯ ಅಧಿಕಾರಿ ಸೂರ್ಯವಂಶಿ ನಾನು ಇಲ್ಲಿಗೆ ಕೇವಲ ಹೆದ್ದಾರಿಯ ಅವಸ್ಥೆಯನ್ನು ಪರಿಶೀಲನೆ ಮಾಡಲು ಬಂದಿದ್ದೇನೆ. ಮರುಡಾಂಬರೀಕರಣ ಕುರಿತು ಉನ್ನತ ಅಧಿಕಾರಿಗಳ ಜೊತೆಗೆ ಶೀಘ್ರವಾಗಿ ಚರ್ಚಿಸಲಾಗುವುದು ಎಂದರು.
ಅಧಿಕಾರಿಗಳ ಭೇಟಿಗೆ ಶ್ಲಾಘನೆ: ಈ ಸಂದರ್ಭದಲ್ಲಿ ಹೋರಾಟಗಾರರದ ತಾಪಂ ಸದಸ್ಯ ಯಡೇಹಳ್ಳಿ ಮಂಜುನಾಥ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 75ನ್ನು ದುರಸ್ತಿ ಪಡಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಈಗಾಗಲೇ ಪ್ರತಿಭಟನೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅವರು ಶನಿವಾರದಿಂದಲೇ ದುರಸ್ತಿ ಕಾರ್ಯ ಆರಂಭಿಸುವ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ದುರಸ್ತಿ ಕಾರ್ಯ ಇಂದು ಸಾಂಕೇತಿಕವಾಗಿ ಆರಂಭಿಸಲಾಗಿದ್ದು ಉನ್ನತ ಅಧಿಕಾರಿಗಳು ಸ್ಥಳ ಪರಿಶೀಲಿಸಿರುವುದು ಶ್ಲಾಘನೀಯ ಎಂದರು.
ಜಲ್ಲಿಗಾಗಿ ಕೋರೆ ಪಡೆಯಲು ಅನುಮತಿ ನೀಡಿ: ರಾಜ್‌ಕಮಲ್‌ಕಂಪನಿಯ ವ್ಯವಸ್ಥಾಪಕ ಸುರಾನ ಮಾತನಾಡಿ, ಗುಣಮಟ್ಟದ ರಸ್ತೆಯಾಗಬೇಕಾದಲ್ಲಿ ಗುಣಮಟ್ಟದ ವಸ್ತುಗಳು ಸಿಗಬೇಕು. ಕಳಪೆ ಗುಣಮಟ್ಟದ ವಸ್ತುಗಳನ್ನು ಹಾಕುವುದರಿಂದ ರಸ್ತೆ ಕಾಮಗಾರಿಯ ಗುಣಮಟ್ಟ ಕುಸಿಯುತ್ತದೆ. ಕಾಮಗಾರಿಗೆ ಬೇಕಾದ ಜಲ್ಲಿಗಾಗಿ ಕೋರೆ ಪಡೆಯಲು ಅನುಮತಿ ನೀಡುವಂತೆ ಬೆಂಗಳೂರಿನ ಕಚೇರಿಗೆ ನೀಡಲಾಗಿದೆ.
ಆದರೆ ಇಲ್ಲಿಯವರೆಗೆ ಕಡತವನ್ನು ಅಲ್ಲಿಯ ಅಧಿಕಾರಿಗಳು ವಿಲೇವಾರಿ ಮಾಡದಿರುವುದರಿಂದ ಚತುಷ್ಪಥ ರಸ್ತೆಯ ಕಾಮಗಾರಿ ವಿಳಂಬವಾಗಿದೆ. ಕಲ್ಲಿನ ಕೋರೆಯ ಕಡತ ಶೀಘ್ರವಾಗಿ ವಿಲೇವಾರಿವಾದಲ್ಲಿ ನಾಳೆಯಿಂದಲೆ ಕಾಮಗಾರಿ ಆರಂಭಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಹೋರಾಟಗಾರರಾದ ಫಾರೂಕ್, ಮಲ್ಲೇಶ್, ಉಮೇಶ್, ಸಾಗರ್ ಜಾನೆಕೆರೆ, ಅಜಿತ್, ಮುಂತಾದವರು ಹಾಜರಿದ್ದರು.
ಈ ಹಿಂದೆ ಕಾಮಗಾರಿ ನಡೆಸಿರುವ ಐಸೊಲೆಕ್ಸ್ ಕಂಪನಿಯವರಿಗೆ ಚತುಷ್ಪಥ ರಸ್ತೆ ಕಾಮಗಾರಿ ನಡೆಸಲು ಮತ್ತೂಂದು ಅವಕಾಶ ನೀಡುವ ಸಾಧ್ಯತೆ ಇದೆ. ಸದ್ಯಕ್ಕೆ ದುರಸ್ತಿ ಕಾರ್ಯವನ್ನು ಇಂದಿನಿಂದಲೇ ನಡೆಸುವಂತೆ ಗುತ್ತಿಗೆದಾರರಿಗೆ ಆದೇಶಿಸಲಾಗಿದೆ.
-ಸೂರ್ಯವಂಶಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಲಯ ಅಧಿಕಾರಿ