Advertisement

ಸೋಂಕು ನಿಯಂತ್ರಣಕ್ಕೆ ಅಧಿಕಾರಿಗಳ ಸಮನ್ವಯತೆ ಅಗತ್ಯ

04:48 PM Jul 10, 2020 | Suhan S |

ಗದಗ: ಕೋವಿಡ್‌-19 ಸೋಂಕು ಪರಿಣಾಮಕಾರಿಯಾಗಿ ನಿಯಂತ್ರಿಸಲು ವಿವಿಧ ಇಲಾಖೆಗಳ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್‌ ಬಾಬು ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ಜಿಲ್ಲಾಡಳಿತ ಭವನದ ವಿಡಿಯೋ ಕಾನ್ಫೆರೆನ್ಸ್‌ ಸಭಾಂಗಣದಲ್ಲಿ ನಡೆದ ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕು ಮಟ್ಟದಲ್ಲಿ ಸೋಂಕು ನಿಯಂತ್ರಿಸಲು ತಹಶೀಲ್ದಾರ್‌, ತಾಪಂ ಇಒ, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಹಾಗೂ ವೈದ್ಯಾಧಿಕಾರಿಗಳ ಸಮಿತಿ ರಚಿಸಿ, ವಾರಕ್ಕೆ ಎರಡು ಬಾರಿ ಸಭೆ ನಡೆಸಿ ವರದಿ ನೀಡಬೇಕು. ಸಭೆ ಜರಗುವ ಮುನ್ನ ಕ್ವಾರಂಟೈನ್‌ ಕೇಂದ್ರ ಹಾಗೂ ಪ್ರತಿಬಂಧಿತ ಪ್ರದೇಶಗಳಿಗೆ ಭೇಟಿ ನೀಡಬೇಕು. ಕ್ವಾರಂಟೈನ್‌ ಕೇಂದ್ರದಲ್ಲಿರುವವರಿಗೆ ಸರಿಯಾದ ವಸತಿ, ಊಟದ ವ್ಯವಸ್ಥೆ, ಕುಡಿಯಲು ನೀರು ಒದಗಿಸಲು ಕ್ರಮಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.

ಮದುವೆ, ಸಭೆ, ಸಮಾರಂಭ, ಹಾಗೂ ಶವ ಸಂಸ್ಕಾರ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಆಯಾ ತಾಲೂಕು ತಹಶೀಲ್ದಾರ್‌ರಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹರಡದಂತೆ ಸಾರ್ವಜನಿಕ ಮುಂಜಾಗ್ರತಾ ಕ್ರಮಗೊಳ್ಳಬೇಕು. ಜನರಲ್ಲಿ ಸೋಂಕಿನ ಬಗ್ಗೆ ಕಡ್ಡಾಯವಾಗಿ ವ್ಯಾಪಕ ಜಾಗೃತಿ ಮೂಡಿಸಬೇಕು. ಕ್ವಾರಂಟೈನ್‌ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಾರ್ಡ್‌ವಾರು ಸಮಿತಿ ರಚಿಸಿ ಸೋಂಕು ತಡೆಗೆ ಅಗತ್ಯ ಕ್ರಮಗಳ ಕುರಿತು ಜಾಗೃತಿ ಮೂಡಿಸಬೇಕು. ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿ. ಸೋಂಕಿತರ ಪ್ರಾಥಮಿಕ ಸಂಪರ್ಕಿತರನ್ನು 24 ಗಂಟೆಯೊಳಗೆ ಪತ್ತೆ ಹಚ್ಚಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಜಿಪಂ ಸಿಇಒ ಡಾ| ಆನಂದ್‌ ಕೆ. ಮಾತನಾಡಿ, ದಿಗ್ಬಂಧನದಲ್ಲಿರುವರು ನಿಗದಿತ ಅವಧಿ ವರೆಗೆ ಮನೆಯಿಂದ ಹೊರಗೆ ಹೋಗದಂತೆ ನಿಗಾ ವಹಿಸಲು ಅವರಿಂದ ಸೆಲ್ಫೀ  ಛಾಯಾಚಿತ್ರ ಕಳುಹಿಸಲು ಸೂಚಿಸಬೇಕು. ನಿಯಮಿತವಾಗಿ ಭೇಟಿ ನೀಡಿ ನಿಗಾವಹಿಸಬೇಕು ಎಂದರು.

Advertisement

ಎಸ್‌ಪಿ ಯತೀಶ್‌ ಎನ್‌. ಮಾತನಾಡಿ, ಕ್ವಾರಂಟೈನ್‌ ನಿಯಮ ಉಲ್ಲಂಘಿಸುವವರ ವಿರುದ್ಧ ದೂರು ದಾಖಲಿಸುವ ಮುನ್ನ ಅಗತ್ಯ ಮಾಹಿತಿ ಹಾಗೂ ದಾಖಲೆ ಸಂಗ್ರಹಿಸಲು ಸೂಚಿಸಿದರು. ಮದುವೆ, ಸಮಾರಂಭ, ಶವ ಸಂಸ್ಕಾರಕ್ಕೆ ಅನುಮತಿ ನೀಡಿರುವ ವಿವರಗಳನ್ನು ಆಯಾ ಠಾಣೆಗಳಿಗೂ ಒದಗಿಸುವಂತೆ ತಿಳಿಸಿದ ಅವರು, ಸ್ಥಳೀಯ ಸಂಸ್ಥೆ ಹಾಗೂ ಪೊಲೀಸ್‌ ಇಲಾಖೆಗಳು ಸಮನ್ವಯತೆಯಿಂದ ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವಂತೆ ಸೂಚನೆ ನೀಡಿದರು.

ಅಪರ ಜಿಲ್ಲಾಧಿಕಾರಿ ಸತೀಶ್‌ ಕುಮಾರ ಎಂ., ಉಪ ವಿಭಾಗಾಧಿ ಕಾರಿ ರಾಯಪ್ಪ ಹುಣಸಗಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ ಎಸ್‌. ಎನ್‌., ಗದಗ-ಬೆಟಗೇರಿ ನಗರ ಸಭೆ ಪೌರಾಯುಕ್ತ ಮನ್ಸೂರ ಅಲಿ, ತಹಶೀಲ್ದಾರ್‌ ಶ್ರೀನಿವಾಸಮೂರ್ತಿ ಕುಲಕರ್ಣಿ, ಡಿಎಚ್‌ಒ ಡಾ| ಸತೀಶ ಬಸರೀಗಡ, ಡಾ| ಎಸ್‌. ಎಸ್‌. ನೀಲಗುಂದ ಸೇರಿದಂತೆ ಜಿಲ್ಲೆಯ ಎಲ್ಲ ತಹಶೀಲ್ದಾರ್‌ರು, ಸ್ಥಳೀಯ ಸಂಸ್ಥೆ ಮುಖ್ಯಾಧಿಕಾರಿಗಳು ವಿಡಿಯೋ ಕಾನ #ರೆನ್ಸ್‌ ನಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next