Advertisement

ಸರಕಾರಿ ಹಾಸ್ಟೆಲ್‌ಗೆ ಅಧಿಕಾರಿಗಳೇ ಮಾರ್ಗದರ್ಶಕರು

02:18 AM Nov 27, 2021 | Team Udayavani |

ಉಡುಪಿ: ಸರಕಾರಿ ಹಾಸ್ಟೆಲ್‌ಗ‌ಳ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಲು, ಅಲ್ಲಿನ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆ ಅರಿಯಲು ಜಿಲ್ಲಾಮಟ್ಟದ ಅಧಿಕಾರಿಗಳೇ ಇನ್ನು ಮುಂದೆ “ಮೆಂಟರ್‌’ (ಮಾರ್ಗದರ್ಶಕರು)ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.

Advertisement

ರಾಜ್ಯದಲ್ಲೇ ಮೊದಲ ಬಾರಿಗೆ ಈ ವ್ಯವಸ್ಥೆ ಉಡುಪಿ ಜಿಲ್ಲೆಯಲ್ಲಿ ಜಾರಿಗೆ ಬರಲಿದೆ. ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಎಂ., ಜಿ.ಪಂ. ಸಿಇಒ ಡಾ| ನವೀನ್‌ ಭಟ್‌ ಸಹಿತ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಒಂದು ಅಥವಾ ಎರಡು ಸರಕಾರಿ ವಿದ್ಯಾರ್ಥಿನಿಲಯಗಳನ್ನು ಹಂಚಿಕೆ ಮಾಡಲಾಗಿದೆ.

ಈ ಅಧಿಕಾರಿಗಳು ತಮಗೆ ಹಂಚಿಕೆಯಾಗಿರುವ ವಿದ್ಯಾರ್ಥಿ ನಿಲಯಗಳಿಗೆ ತಿಂಗಳಿಗೆ ಒಮ್ಮೆ ಭೇಟಿ ನೀಡಿ, ಅಲ್ಲಿರುವ ವಿದ್ಯಾರ್ಥಿ ಗಳೊಂದಿಗೆ ಸಂವಾದ ನಡೆಸಿ, ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಸೂಚಿಸಲಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತಿತರ ಇಲಾಖೆಗಳಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯ, ನವೋ ದಯ ವಸತಿ ಶಾಲೆ, ಆಶ್ರಮ ಶಾಲೆಗಳನ್ನು ನಡೆಸಲಾಗುತ್ತಿದೆ. ಉಡುಪಿಜಿಲ್ಲೆಯಲ್ಲಿ 86 ಸರಕಾರಿ ವಿದ್ಯಾರ್ಥಿನಿಲಯಗಳಿವೆ. ಇವನ್ನೆಲ್ಲ ಇನ್ನಷ್ಟು ಸುಧಾರಿಸಿ, ಮೇಲ್ದರ್ಜೆಗೆ ಏರಿಸಲು, ವಿದ್ಯಾರ್ಥಿ ನಿಲಯಗಳ ಮೇಲ್ವಿಚಾರಕ (ವಾರ್ಡನ್‌)ರಿಗೆ ಸಮರ್ಪಕ ನಿರ್ವಹಣೆಯ ಸಲಹೆ ನೀಡಲು, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಸಹಿತ ವಿವಿಧ ವಿಷಯಗಳ ತರಬೇತಿಗೆ ಅಗತ್ಯ ಮಾರ್ಗದರ್ಶನ ನೀಡಲು ಮೆಂಟರ್‌ ಪರಿಕಲ್ಪನೆ ಜಾರಿ ಮಾಡಲಾಗುತ್ತಿದೆ.

ವ್ಯವಸ್ಥೆ ಜಾರಿಯ ಅನಂತರ ಪ್ರತೀ ಅಧಿಕಾರಿ ತನಗೆ ಹಂಚಿಕೆಯಾದ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿ, ವ್ಯವಸ್ಥೆ ಸುಧಾರಣೆಗೆ ಪೂರಕವಾದ ಮಾರ್ಗದರ್ಶನ ನೀಡಿ, ಅಲ್ಲಿನ ಸಮಸ್ಯೆಬಗೆಹರಿಸಲು ನಿರ್ದಿಷ್ಟ ಕ್ರಮ ತೆಗೆದುಕೊಳ್ಳಬೇಕು ಎಂಬ ಸೂಚನೆಯನ್ನು ಜಿಲ್ಲಾಡಳಿತದಿಂದ ನೀಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

ಮಕ್ಕಳೊಂದಿಗೆ ಬೆರೆಯಬೇಕು
ವಿದ್ಯಾರ್ಥಿನಿಲಯಗಳಲ್ಲಿದ್ದು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅನೇಕ ರೀತಿಯ ಸಮಸ್ಯೆ, ಖಿನ್ನತೆ ಎದುರಿಸುತ್ತಿರುತ್ತಾರೆ. ಮಾರ್ಗ ದರ್ಶಕರು ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಮುಕ್ತ ಸಮಾಲೋಚನೆ ನಡೆಸಬೇಕು. ವಿದ್ಯಾರ್ಥಿ ಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪಟ್ಟಿ ಮಾಡಿ, ಸಂಬಂಧಪಟ್ಟ ಇಲಾಖೆಗೆ ನೀಡಿ, ಅವುಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕು. ಹಾಸ್ಟೆಲ್‌ ಊಟದ ವ್ಯವಸ್ಥೆ, ನೀರು ಪೂರೈಕೆ, ಅಧ್ಯಯನಕ್ಕೆ ಪೂರಕವಾದ ವಾತಾವರಣ ಇರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಒಟ್ಟಾರೆಯಾಗಿ ಮಾರ್ಗದರ್ಶಕರು ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿದಾಗ ವಿದ್ಯಾರ್ಥಿಗಳೊಂದಿಗೆ ಬೆರೆಯಬೇಕು.

ಬಹುತೇಕ ಅಧಿಕಾರಿಗಳು ವಿದ್ಯಾರ್ಥಿನಿಲಯಗಳಲ್ಲಿ ಓದಿ ಬಂದಿರುವುದರಿಂದ ಅಲ್ಲಿನ ವ್ಯವಸ್ಥೆಯ ಸುಧಾರಣೆಗೆ ಅವರಲ್ಲಿ ಅನೇಕ ರೀತಿಯ ಕಲ್ಪನೆಗಳಿರುತ್ತವೆ. ಅವುಗಳ ಅನುಷ್ಠಾನದ ದೃಷ್ಟಿಯಿಂದ ಮತ್ತು ಸರಕಾರಿ ವಿದ್ಯಾರ್ಥಿನಿಲಯಗಳಿಗೆ ಇನ್ನಷ್ಟು ಶಕ್ತಿ ತುಂಬಲು, ವಿದ್ಯಾರ್ಥಿಗಳು ಎದುರಿಸು ತ್ತಿರುವ ಸಮಸ್ಯೆ ಅರಿಯಲು ಮೆಂಟರ್‌ ವ್ಯವಸ್ಥೆ ಜಾರಿಗೆ ತರುತ್ತಿದ್ದೇವೆ.
-ಕೂರ್ಮಾ ರಾವ್‌ ಎಂ., ಜಿಲ್ಲಾಧಿಕಾರಿ, ಉಡುಪಿ

ಜಿಲ್ಲಾಮಟ್ಟದ ಅಧಿಕಾರಿಗಳು ಸರಕಾರಿ ವಿದ್ಯಾರ್ಥಿ ನಿಲಯಗಳಿಗೆ ಮಾರ್ಗದರ್ಶಕ ರಾಗುವುದರಿಂದ ವ್ಯವಸ್ಥೆ, ಸೌಲಭ್ಯ ಸುಧಾರಣೆಗೆ ಅನುಕೂಲವಾಗಲಿದೆ. ವಿದ್ಯಾರ್ಥಿಗಳೊಂದಿಗೆ ಅಧಿಕಾರಿಗಳು ನೇರ ಸಂವಹನ ನಡೆಸಲು ಇದು ವೇದಿಕೆಯಾಗಲಿದೆ.
-ದೇವೇಂದ್ರ ಎಸ್‌. ಬಿರಾದಾರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿ

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next